ಸಮುದಾಯ ಭವನಕ್ಕೆ ಭೂಮಿ ನೀಡಿದರೂ ಸದಸ್ಯತ್ವವಿಲ್ಲ: ಸಮುದಾಯದ ಎಚ್.ಬಿ.ನಾಗರಾಜ್

| Published : Mar 29 2024, 12:55 AM IST

ಸಾರಾಂಶ

ಅರಸೀಕೆರೆಯಲ್ಲಿ ವೀರಶೈವ ಸಮುದಾಯ ಭವನ ನಿರ್ಮಾಣಕ್ಕಾಗಿ ನಮ್ಮ ಕುಟುಂಬವು ನಿವೇಶನವನ್ನು ದಾನ ಕೊಟ್ಟಿದೆ, ಆದರೆ ಸಂಘದಲ್ಲಿ ಸದಸ್ಯತ್ವ ನೀಡಿ ಎಂದು ಬೇಡಿದರೂ ಸದಸ್ಯತ್ವ ನೀಡಿಲ್ಲ ಎಂದು ಎಚ್.ಬಿ. ನಾಗರಾಜ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ವೀರಶೈವ ಸಂಘದಿಂದ ಅನ್ಯಾಯ

ಅರಸೀಕೆರೆ: ನಗರದಲ್ಲಿ ವೀರಶೈವ ಸಮುದಾಯ ಭವನ ನಿರ್ಮಾಣಕ್ಕಾಗಿ ನಮ್ಮ ಕುಟುಂಬವು ನಿವೇಶನವನ್ನು ದಾನ ಕೊಟ್ಟಿದೆ, ಆದರೆ ಸಂಘದಲ್ಲಿ ಸದಸ್ಯತ್ವ ನೀಡಿ ಎಂದು ಬೇಡಿದರೂ ಸದಸ್ಯತ್ವ ನೀಡಿಲ್ಲ ಎಂದು ಎಚ್.ಬಿ. ನಾಗರಾಜ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ವೀರಶೈವ ಸಮುದಾಯ ಭವನಕ್ಕೆ ಪ್ರತ್ಯೇಕವಾದ ಟ್ರಸ್ಟ್ ಇದ್ದು, ಅದರಲ್ಲಿ ನಮಗೆ ಸ್ಥಾನ ನೀಡಿ ಎಂದು ಕೇಳುತ್ತಿಲ್ಲ, ವೀರಶೈವ ಸಂಘದಲ್ಲಿ ನಮ್ಮ ಐದು ಕುಟುಂಬದ ಒಬ್ಬೊಬ್ಬ ಸದಸ್ಯರಿಗೆ ನಿರ್ದೇಶಕರ ಸ್ಥಾನ ಕೊಡಬೇಕೆಂದು ಹಲವು ಬಾರಿ ಮನವಿ ಮಾಡಿದರೂ ನಮ್ಮ ಮನವಿಗೆ ಸ್ಪಂದಿಸಿಲ್ಲ, ಗೌರವಾಧ್ಯಕ್ಷ ನೊಣವಿನಕೆರೆ ಶ್ರೀ ಮತ್ತು ರುದ್ರಯ್ಯ ಅವರಲ್ಲಿಯೂ ನಮ್ಮ ನೋವನ್ನು ತೋಡಿಕೊಂಡಿದ್ದೇವೆ’ ಎಂದು ಹೇಳಿದರು.

‘ಸಮುದಾಯ ಭವನದ ಎದುರು ನಮ್ಮ ನಿವೇಶನವಿತ್ತು, ಇದನ್ನು ಇತರರು ವಾಹನಗಳನ್ನು ನಿಲ್ಲಿಸಿಕೊಳ್ಳಲು ಪಾರ್ಕಿಂಗ್ ತಾಣವಾಗಿ ಮಾಡಿಕೊಂಡಿದ್ದರು, ರಕ್ಷಣೆಗಾಗಿ ನಾವು ಒಂದು ಬದಿ ಕಂದಕವನ್ನು ಮಾಡಿದೆವು, ಇದಕ್ಕೆ ಕುಪಿತರಾದ ಸಂಘದವರು ನಮ್ಮ ಅಣ್ಣ - ತಮ್ಮಂದಿರ ಮಕ್ಕಳ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿ, ದೌರ್ಜನ್ಯ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಸ್ಥಳದ ದಾನಿಗಳನ್ನೇ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸಿರುವ ಈ ಸಂಘದ ನಡವಳಿಕೆ ನಮಗೆ ಬಹಳ ನೋವನ್ನುಂಟು ಮಾಡಿದೆ. ನಮ್ಮ ತಂದೆಯವರು ನಮಗೆ ನೀಡಿರುವ ನಿವೇಶನಕ್ಕೆ ನಾವು ಐವರು ಗಂಡು ಮಕ್ಕಳು ಪಾಲುದಾರರು, ನಾವು ಅದನ್ನು ಪ್ರಶ್ನಿಸುತ್ತಿಲ್ಲ, ನಮ್ಮ ಕುಟುಂಬಗಳಿಗೆ ಒಂದೊಂದು ಸದಸ್ಯತ್ವ ಸ್ಥಾನವನ್ನು ಕೊಡಿ ಎಂದು ಮಾಧ್ಯಮಗಳ ಮೂಲಕ ಕೇಳಿಕೊಳ್ಳುತ್ತಿದ್ದೇವೆ. ಸ್ಪಂದಿಸದಿದ್ದಲ್ಲಿ ನಾವು ಮುಂದಿನ ನಡೆಯ ಬಗ್ಗೆ ಚಿಂತಿಸಬೇಕಾಗುತ್ತದೆ, ಒಂದೇ ಕುಟುಂಬದ ಏಳು ಜನರನ್ನು ಸದಸ್ಯರನ್ನಾಗಿ ತೆಗೆದುಕೊಂಡಿದ್ದಾರೆ, ಇದು ಯಾವ ನಿಯಮ, ಈವರೆಗೂ ಸರ್ವ ಸದಸ್ಯರ ಸಭೆ ಕೂಡ ನಡೆದಿಲ್ಲ, ಮೂರು ನಾಲ್ಕು ಜನ ಕುಳಿತು ಅವರೇ ಪದಾಧಿಕಾರಿಗಳ ಆಯ್ಕೆ ತೀರ್ಮಾನ ಮಾಡಿಕೊಳ್ಳುತ್ತಾರೆ’ ಎಂದು ದೂರಿದರು.

ಎಚ್‍.ಬಿ. ಚಂದ್ರಶೇಖರಯ್ಯ, ಸಾಗರ್, ಶರಣಪ್ಪ ಉಪಸ್ಥಿತರಿದ್ದರು.ಸುದ್ದಿಗೋಷ್ಠಿಯಲ್ಲಿ ಎಚ್.ಬಿ. ನಾಗರಾಜ್ ಮಾತನಾಡಿದರು.