ಅಬಕಾರಿ ಸಚಿವರ ಕಾರ್ಖಾನೆಗೆ ಭೂ ಕಬಳಿಕೆ ದೂರು: ಅಳತೆ

| Published : Sep 22 2024, 01:55 AM IST

ಸಾರಾಂಶ

ಲಿಂಗಸುಗೂರು ತಾಲೂಕಿನ ಆರ್.ಬಿ.ಶುಗರ್ ಲಿಮಿಟೆಡ್ ಕಂಪನಿ ಭೂ ಹಾಗೂ ರೈತರ ಭೂಮಿ ಅಳೆತೆ ಸರ್ವೇಯನ್ನು ಕಂದಾಯ, ಅರಣ್ಯ, ಭೂಮಾಪನ ಇಲಾಖೆ ಅಧಿಕಾರಿಗಳು ಮಾಡಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ತಾಲೂಕಿನ ಸುಣಕಲ್ ಹಾಗೂ ಚಿಕ್ಕ ಉಪ್ಪೇರಿ ಗ್ರಾಮಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಬಕಾರಿ ಸಚಿವರ ಸಕ್ಕರೆ ಕಾರ್ಖಾನೆಗೆ ಕಂದಾಯ, ಅರಣ್ಯ ಭೂಮಿ ಕಬಳಿಕೆ ಮಾಡಲಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಹಾಗೂ ಭೂ ಮಾಪನ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಭೂಮಿ ಅಳತೆ ಕಾರ್ಯ ನಡೆದಿದೆ.ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ ರವರು ತಾಲೂಕಿನ ಸುಣಕಲ್ ಶಿವಾರದ ಹಾಗೂ ಚಿಕ್ಕ ಉಪ್ಪೇರಿ ಗ್ರಾಮದ ರೈತರಿಂದ ಜಮೀನು ಖರೀದಿಸಿ ಆರ್.ಬಿ.ಶುಗರ್ ಲಿಮಿಟೆಡ್ ಕಂಪನಿ ಸ್ಥಾಪನೆ ಮಾಡಿದ್ದು, ಕಾರ್ಖಾನೆಗೆ ಕಂದಾಯ, ಅರಣ್ಯ ಹಾಗೂ ರೈತರ ಭೂಮಿ ಅಕ್ರಮವಾಗಿ ಕಬಳಿಸಿದ್ದಾರೆ ಎಂದು ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಅದರಂತೆ ತಹಸೀಲ್ದಾರ್‌ ಎನ್.ಶಂಶಾಲಂ, ಕಂದಾಯ ನಿರೀಕ್ಷಕ ರಾಮಕೃಷ್ಣ, ಅರಣ್ಯ ಇಲಾಖೆ ಪ್ರಾದೇಶಿಕ ಅಧಿಕಾರಿ ದಿವ್ಯ, ಹುಚ್ಚಪ್ಪ, ಭೂಮಾಪನ ಇಲಾಖೆ ಅಧಿಕಾರಿಗಳು ಸಕ್ಕರೆ ಕಾರ್ಖಾನೆ ಪಕ್ಕದ ರೈತರ ಜಮೀನುಗಳ ಸರ್ವೇ ಮಾಡಿದರು.

ಕಂದಾಯ ಇಲಾಖೆ ಚಿಕ್ಕ ಉಪ್ಪೇರಿ ಸರ್ವೆ ಸಂಖ್ಯೆ 62ರಲ್ಲಿ ಒಟ್ಟು 92 ಎಕರೆ ಜಮೀನು ಇದೆ. ಇದರಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪು ರವರ ಒಡೆತನದ ಆರ್.ಬಿ.ಶುಗರ್ ಲಿಮಿಟೆಡ್‌ವರು ಜಮೀನಿನಲ್ಲಿ ಇರುವ ಮಣ್ಣು-ಕಲ್ಲು, ಗಿಡ-ಮರಗಳ ತೆಗೆದು ಹಿಟಾಚಿ, ಟಿಪ್ಪರ್‌ ಸಹಾಯದಿಂದ ಕಲ್ಲು-ಮಣ್ಣಿನ ಗುಡ್ಡೆ ಒಟ್ಟಿದ್ದಾರೆ. ಅಲ್ಲದೇ ಜಮೀನು ಸಮತಟ್ಟು ಮಾಡುವಾಗ ಅಪಾರ ಪ್ರಮಾಣದಲ್ಲಿ ಗಿಡ-ಮರ ತೆರವುಗೊಳಿಸಲಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನಿಸದೇ ಇರುವುದು ಅನುಮಾನ ಉಂಟು ಮಾಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸಕ್ಕರೆ ಕಾರ್ಖಾನೆಗೆ ಹಾಗೂ ಅಕ್ಕಪಕ್ಕದ ರೈತರ ಭೂಮಿಗಳನ್ನು ಸರ್ವೇ ಮಾಡಲಾಗಿದ್ದು, ವರದಿ ಬರುವದು ಬಾಕಿ ಇದೆ. ವರದಿ ಬಂದ ಬಳಿಕ ಈ ಬಗ್ಗೆ ಸತ್ಯಾಸತ್ಯತೆ ತಿಳಿಯುತ್ತದೆ. ಸಕ್ಕರೆ ಕಾರ್ಖಾನೆ ಸುತ್ತಮುತ್ತಲು ಇರುವ ಕಂದಾಯ ಭೂಮಿಗೆ ತಂತಿಬೇಲಿ ಹಾಕಿ ಅತಿಕ್ರಮಿಸದಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಹಸೀಲ್ದಾರ್‌ ಎನ್.ಶಂಶಾಲಂ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.