ಕೃಷಿ ತರಬೇತಿ ಕೇಂದ್ರ ನಿರ್ಮಾಣಕ್ಕೆ ಜಾಗ ಪರಿಶೀಲನೆ

| Published : Aug 31 2025, 02:00 AM IST

ಸಾರಾಂಶ

ವಿಜಯನಗರ ಜಿಲ್ಲೆಯ ಏಕೈಕ ಕೃಷಿ ತರಬೇತಿ ಕೇಂದ್ರ ₹4.50 ಕೋಟಿ ವೆಚ್ಚದಲ್ಲಿ ಕೂಡ್ಲಿಗಿ ತಾಲೂಕಿನ ಗುಂಡಿನಹೊಳೆ ಫಾರಂ ಹತ್ತಿರ ಪ್ರಾರಂಭವಾಗಲಿದ್ದು, ಶುಕ್ರವಾರ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಗುಂಡಿನಹೊಳೆಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು.

ಕೂಡ್ಲಿಗಿಯಲ್ಲಿ ₹4.50 ಕೋಟಿ ವೆಚ್ಚದಲ್ಲಿ ಕಾಮಗಾರಿ

ಅಧಿಕಾರಿಗಳ ಜತೆ ಡಾ. ಎನ್.ಟಿ. ಶ್ರೀನಿವಾಸ್ ಚರ್ಚೆ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ವಿಜಯನಗರ ಜಿಲ್ಲೆಯ ಏಕೈಕ ಕೃಷಿ ತರಬೇತಿ ಕೇಂದ್ರ ₹4.50 ಕೋಟಿ ವೆಚ್ಚದಲ್ಲಿ ಕೂಡ್ಲಿಗಿ ತಾಲೂಕಿನ ಗುಂಡಿನಹೊಳೆ ಫಾರಂ ಹತ್ತಿರ ಪ್ರಾರಂಭವಾಗಲಿದ್ದು, ಶುಕ್ರವಾರ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಗುಂಡಿನಹೊಳೆಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ಇಲ್ಲಿಯ ಕೃಷಿ ತರಬೇತಿ ಕೇಂದ್ರ ಇಡೀ ವಿಜಯನಗರ ಜಿಲ್ಲೆಗೆ ವರದಾನವಾಗಲಿದೆ. ಹೊಸ ಹೊಸ ತಳಿ ಸಂಶೋಧನೆ ಮಾಡುವ ಜತೆಗೆ ರೈತರ ಏಳಿಗೆಗೆ ಈ ಕೇಂದ್ರ ಶ್ರಮಿಸಲಿದೆ ಎಂದು ಹೇಳಿದರು.

ಚೋರನೂರು ರಸ್ತೆಯಲ್ಲಿ ಬರುವ ಗುಂಡಿನ ಹೊಳೆ ಫಾರಂನಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ (DATC) ಕಟ್ಟಡ ಕಾಮಗಾರಿ ಸಂಬಂಧಿಸಿದಂತೆ ಆಧುನಿಕ ಶೈಲಿಯಲ್ಲಿ ಕಟ್ಟಡ ವಿನ್ಯಾಸ ಕುರಿತು ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ಜತೆ ಅವರು ಸುದೀರ್ಘವಾಗಿ ಚರ್ಚಿಸಿದರು. ಕೃಷಿ ತರಬೇತಿ ಕೇಂದ್ರದ ಕಚೇರಿ, ಸಿಬ್ಬಂದಿ, ಮತ್ತು ವಸತಿಗೃಹ ಸಂಬಂಧಿಸಿದಂತೆ ಕಟ್ಟಡ ಹೇಗೆ ನಿರ್ಮಿಸಬೇಕು ಎಂದು ಸಲಹೆ-ಸೂಚನೆಗಳನ್ನು ನೀಡಿದರು. ಕ್ರಿಯಾಯೋಜನೆಯ ಮಾದರಿಯಾಗಿ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ತಹಸೀಲ್ದಾರ್‌ ನೇತ್ರಾವತಿ, ಸಹಾಯಕ ಕೃಷಿ ನಿರ್ದೇಶಕ ತೇಜವರ್ಧನ, ಕೃಷಿ ಅಧಿಕಾರಿಗಳಾದ ಎಂ. ಚಂದ್ರಶೇಖರ, ಕಂದಾಯ ಇಲಾಖೆಯ ಪ್ರಭಾಕರ ಹಾಜರಿದ್ದರು. ಕೂಡ್ಲಿಗಿ- ಹಾವು ಕಚ್ಚಿ ಆಶಾ ಕಾರ್ಯಕರ್ತೆ ಸಾವು:

ಜಮೀನಿನಲ್ಲಿ ಹತ್ತಿ ಬೆಳೆ ನೋಡಲು ಹೋಗಿದ್ದ ಆಶಾ ಕಾರ್ಯಕರ್ತೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ಶುಕ್ರವಾರ ಸಂಜೆ ಜರುಗಿದ್ದು ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕಜೋಗಿಹಳ್ಳಿ ಗ್ರಾಮದ ಲಕ್ಷ್ಮಿಬಾಯಿ(45) ಮೃತರು. ಚಿಕ್ಕಜೋಗಿಹಳ್ಳಿ ತಾಂಡಾದ ಆಶಾ ಕಾರ್ಯಕರ್ತೆ ಅಗಿದ್ದ ಲಕ್ಷ್ಮಿಬಾಯಿಯು ತನ್ನ ಅಣ್ಣನ ಜಮೀನಿನಲ್ಲಿ ಹಾಕಿದ್ದ ಹತ್ತಿ ಬೆಳೆ ನೋಡಲು ಹೋಗಿದ್ದು, ಈ ವೇಳೆ ಹಾವು ಕಚ್ಚಿದೆ. ಕೂಡಲೇ ಸಮೀಪದ ಚಿಕ್ಕಜೋಗಿಹಳ್ಳಿ ಸಮುದಾಯದ ಆರೋಗ್ಯ ಕೇಂದ್ರಕ್ಕೆ ದಾಖಲಾಸಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶನಿವಾರ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.