ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್ ಹಾಗೂ ವಕ್ಫ್ ಆಕ್ರಮವನ್ನು ವಿರೋಧಿಸಿ ಹರಿಹರ ತಾಲೂಕು ಬಿಜೆಪಿ ವತಿಯಿಂದ ಶಾಸಕ ಬಿ.ಪಿ.ಹರೀಶ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಮಾಡಿ ಗ್ರೇಡ್-2 ತಹಸೀಲ್ದಾರ್ ಪುಷ್ಪಾವತಿ ಅವರಿಗೆ ಮನವಿ ಸಲ್ಲಿಸಿದರು.ನಗರದ ಹಳೇ ತರಕಾರಿ ಮಾರುಕಟ್ಟೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಶಿವಮೊಗ್ಗ ಮುಖ್ಯ ರಸ್ತೆಯ ಮೂಲಕ ರಾಣಿ ಚೆನ್ನಮ್ಮ ವೃತ್ತ, ಗಾಂಧಿ ವೃತ್ತ ಮುಖಾಂತರ ಸಾಗಿ ತಾಲೂಕು ಕಚೇರಿಗೆ ಬಂದು ತಲುಪಿದರು. ಮೆರವಣಿಗೆ ಉದ್ದಕ್ಕೂ ಸರ್ಕಾರ ಸೇರಿದಂತೆ ಮುಖ್ಯಮಂತ್ರಿ ಹಾಗೂ ವಕ್ಫ್ ಸಚಿವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಕೇಂದ್ರ ಸರ್ಕಾರವು ದೇಶದ ಜನತೆಯ ಹಿತದೃಷ್ಟಿಯಿಂದ ವಕ್ಫ್ ಮಂಡಳಿಯಲ್ಲಿ ಆಗುತ್ತಿರುವ ಅಕ್ರಮಗಳ ಗಮನದಲ್ಲಿಟ್ಟುಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ಮಂಡಿಸಿದೆ. ಈ ತಿದ್ದುಪಡಿ ವಿಧೇಯಕವು ಬಹುತೇಕ ಜಾರಿಯಾಗುವುದು ಖಚಿತವಾಗುತ್ತಿದಂತೆ ವಕ್ಫ್ ಬೋರ್ಡ್ ತನ್ನ ಕರಾಳ ಕೈಚಳಕ ಮಾಡುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಗಳನ್ನು ಕಬಳಿಸುವ ಹುನ್ನಾರಕ್ಕೆ ಕೈ ಹಾಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಕೃತ್ಯಗಳಿಗೆ ರಾಜ್ಯ ಸರ್ಕಾರ ಹಾಗೂ ಸಚಿವ ಜಮೀರ್ ಅಹಮದ್ ನೇರವಾಗಿ ಕುಮ್ಮಕ್ಕು ನೀಡುತ್ತಿರುವುದು ರಾಜ್ಯದ ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದರು.ರಾಜ್ಯದ ವಿಜಯಪುರ ಜಿಲ್ಲೆಯ 1500 ಎಕರೆ ಜಮೀನಿನ ರೈತರಿಗೆ ನೋಟೀಸ್, ಹಾವೇರಿ ಜಿಲ್ಲೆಯ 1649 ಪ್ರಮುಖ ಆಸ್ತಿಗಳು, ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯಿತಿ ಕಾರ್ಯಾಲಯ, ಸೇರಿದಂತೆ ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಮಠ, ಶಾಲೆ, ಸರ್ಕಾರಿ ಸೌಮ್ಯದ ಆಸ್ತಿಗಳನ್ನು ವಕ್ಫ್ ಆಸ್ತಿಯೆಂದು ನಮೂದು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ರೈತರ ಹಿತದೃಷ್ಟಿಯಿಂದ ತನ್ನ ನಿಲುವನ್ನು ತೆಗೆದುಕೊಳ್ಳಬೇಕಾಗಿದ್ದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿರುವುದು ದುಖಃದಾಯಕ. ಸರ್ಕಾರ ತನ್ನ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಮುಸ್ಲಿಂ ಓಲೈಕೆ ಚಾಳಿಯನ್ನ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರವಾಗಿ ಹೊಣೆಯಾಗಬೇಕಾಗುತ್ತದೆ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಗ್ರಾಮಾಂತರ ಘಟಕ ಅಧ್ಯಕ್ಷ ಎಂ.ಪಿ ಲಿಂಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣೇಶ್ ಐರಣಿ, ನಗರಸಭಾ ಸದಸ್ಯ ಆಟೋ ಹನುಮಂತಪ್ಪ, ಎಚ್. ಮಂಜನಾಯ್ಕ್, ಮಾಂತೇಶ್, ವೀರೇಶ್ ಮುಖಂಡರಾದ ರಾಜು ರೋಖಡೆ, ಬಾತಿ ಚಂದ್ರಶೇಖರ್, ಪರಶುರಾಮ್ ಕಾಟ್ವೆ, ಸುನೀಲ್, ಗಿರೀಶ್, ರೂಪ ಕಾಟ್ವೆ, ಸಾಕ್ಷಿ ಸಿಂಧೆ, ರೂಪ ಶಶಿಕಾಂತ್, ರವಿ ತಾವರಾಗಿ, ರಾಜು ಐರಣಿ, ರವಿ ರಾಯ್ಕರ್, ಅಜ್ಜಪ್ಪ ಶೇರಾಪುರ, ಅದಿತ್ಯ ಮೇಹರ್ವಾಡೆ, ಸ್ವಾತಿ ಹನುಮಂತ, ರಾಜೇಶ್ ವರ್ಣೇಕರ್, ಮಂಜಣ್ಣ, ರುದ್ರೇಶ್ ಸೇರಿದಂತೆ ಇತರರಿದ್ದರು.