ಸಾರಾಂಶ
- ಗುತ್ತೂರು, ಸಾರಥಿ, ಪಾಮೇನಹಳ್ಳಿ, ಭೈರನಹಳ್ಳಿ ಇತರೆಡೆ ಮಣ್ಣು ಲೂಟಿ
- ಸಿದ್ದಪ್ಪಜ್ಜರ ಮಠ, ಖಬರಸ್ತಾನ್, ನದಿಗೆ ತೆರಳುವ ರಸ್ತೆ ಅಸ್ತಿತ್ವಕ್ಕೆ ಧಕ್ಕೆ - - - ಕನ್ನಡಪ್ರಭ ವಾರ್ತೆ ಹರಿಹರಹರಿಹರ: ತಾಲೂಕಿನ ಹಲವು ಗ್ರಾಮಗಳ ಪಟ್ಟಾ ಜಮೀನುಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಕುರಿತು ತಾಲೂಕು ಹಾಗೂ ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖಾಧಿಕಾರಿಗಳಿಗೆ ದೂರು ಅರ್ಜಿಗಳ ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆರೋಪಿಸಿದ್ದಾರೆ.
ಗುತ್ತೂರು, ಸಾರಥಿ, ಪಾಮೇನಹಳ್ಳಿ, ಭೈರನಹಳ್ಳಿ ಹಾಗೂ ಇತರೆ ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಬೃಹತ್ ಗಾತ್ರದ ಜೆಸಿಬಿಗಳಿಂದ ಎಗ್ಗಿಲ್ಲದೇ ಮಣ್ಣನ್ನು ಅಗೆದು ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ಗುತ್ತೂರಿನಲ್ಲಿ ಹೊಸದಾಗಿ ಮಣ್ಣು ಗಣಿಗಾರಿಕೆಯನ್ನು ಬುಧವಾರ ರಾತ್ರಿ ಕೈಗೊಂಡಿದ್ದಾರೆ. ಇದರಿಂದ ಸಿದ್ದಪ್ಪಜ್ಜರ ಮಠ ಹಾಗೂ ಮುಸ್ಲಿಂ ಖಬರಸ್ತಾನ್ ಹಾಗೂ ನದಿಗೆ ತೆರಳುವ ರಸ್ತೆ ಅಸ್ತಿತ್ವಕ್ಕೆ ಧಕ್ಕೆ ಒದಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಕೃಷಿ ಮಾಡುವ ಜಮೀನಿನ ಒಂದು ಪುಟ್ಟಿ ಮಣ್ಣನ್ನೂ ಇತರೆಡೆಗೆ ಸಾಗಿಸಲು ಭೂ ಕಂದಾಯ ಕಾಯ್ದೆಯಲ್ಲಿ ಅವಕಾಶ ಇಲ್ಲ. ಆದರೂ ರಾಜಾರೋಷವಾಗಿ ಎಕರೆಗಟ್ಟಲೆ ಜಮೀನುಗಳಲ್ಲಿನ ಮಣ್ಣನ್ನು ಸಾಗಿಸುತ್ತಿದ್ದಾರೆ. ತಾಲೂಕು ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದೇ, ಕಣ್ಣುಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ಆರೋಪಿಸಿದ್ದಾರೆ.
ಅಕ್ರಮ ಮಣ್ಣು ಗಣಿಗಾರಿಕೆ ತಡೆಯಲು ಹರಿಹರ ತಹಸೀಲ್ದಾರರಿಗೆ ಡಿ. ೪ರಂದು, ಜಿಲ್ಲಾಧಿಕಾರಿಗೆ ಡಿ.೧೬ರಂದು ಮನವಿ ಸಲ್ಲಿಸಿ, ಎಲ್ಲೆಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಜೊತೆಗೆ ದೂರು ಅರ್ಜಿ ನೀಡಲಾಗಿದೆ. ಹಿನ್ನಾದರೂ, ಜಿಲ್ಲಾಡಳಿತ ತಕ್ಷಣ ಕಾರ್ಯೋನ್ಮುಖವಾಗಿ, ತಾಲೂಕಿನಾದ್ಯಂತ ಮಣ್ಣು ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಕೃಷಿ ಜಮೀನುಗಳನ್ನು, ಪರಿಸರವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.- - - -೨೦ಎಚ್‌ಆರ್‌ಆರ್೦೧:
ಗುತ್ತೂರು ಸಿದ್ದಬಸಪ್ಪಜ್ಜರ ಮಠದ ಸಮೀಪ ಬುಧವಾರ ರಾತ್ರಿ ಪಟ್ಟಾ ಜಮೀನೊಂದರಲ್ಲಿ ಮಣ್ಣು ಗಣಿಗಾರಿಕೆ ನಡೆಸಿರುವುದು. -೨೦ಎಚ್‌ಆರ್‌ಆರ್೦೧ಎ:ಹರಿಹರ ತಾಲೂಕಿನ ಭೈರನಹಳ್ಳಿ ಜಮೀನೊಂದರಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿರುವುದು.