ಶುಲ್ಕ ಪಾವತಿಸದವರ ನಿವೇಶನ ಮುಟ್ಟುಗೋಲು: ಶಾಸಕ ಇಕ್ಬಾಲ್ ಹುಸೇನ್

| Published : Jul 23 2025, 01:56 AM IST

ಶುಲ್ಕ ಪಾವತಿಸದವರ ನಿವೇಶನ ಮುಟ್ಟುಗೋಲು: ಶಾಸಕ ಇಕ್ಬಾಲ್ ಹುಸೇನ್
Share this Article
  • FB
  • TW
  • Linkdin
  • Email

ಸಾರಾಂಶ

ನಿವೇಶನದಾರರು ಅಭಿವೃದ್ಧಿ ಶುಲ್ಕ ಪಾವತಿಸಲು ನಿಗದಿ ಪಡಿಸಿರುವ ಆ. 30 ಅಂತಿಮ ಗಡುವು. ಈ ದಿನಾಂಕದೊಳಗೆ ಎಲ್ಲ ನಿವೇಶನದಾರರು ಶುಲ್ಕ ಪಾವತಿಸಿ ಬಡಾವಣೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು.

ಕನ್ನಡಪ್ರಭ ವಾರ್ತೆ ರಾಮನಗರನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಮೂರು ಬಡಾವಣೆಗಳ ನಿವೇಶನದಾನರರಿಗೆ ಪ್ರತಿ ಚದರ ಅಡಿಗೆ 200 ರುಪಾಯಿ ಅಭಿವೃದ್ಧಿ ಶುಲ್ಕ ಪಾವತಿಸಲು ನಿಗದಿ ಪಡಿಸಿದ್ದ ಗಡುವನ್ನು ಆಗಸ್ಟ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಅವಧಿಯೊಳಗೆ ಶುಲ್ಕ ಪಾವತಿಸದವರ ನಿವೇಶನವನ್ನು ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಎಚ್ಚರಿಕೆ ನೀಡಿದರು.

ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ನಿವೇಶನದಾರರು ಅಭಿವೃದ್ಧಿ ಶುಲ್ಕ ಪಾವತಿಸಲು ನಿಗದಿ ಪಡಿಸಿರುವ ಆ. 30 ಅಂತಿಮ ಗಡುವು. ಈ ದಿನಾಂಕದೊಳಗೆ ಎಲ್ಲ ನಿವೇಶನದಾರರು ಶುಲ್ಕ ಪಾವತಿಸಿ ಬಡಾವಣೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ಶುಲ್ಕ ಪಾವತಿಸದವರು ನಿವೇಶನ ಕಳೆದುಕೊಂಡರೆ ನಾವು ಜವಾಬ್ದಾರರಲ್ಲ ಎಂದರು.

ರಾಮನಗರದ ಜೀಗೇನಹಳ್ಳಿ, ಹೆಲ್ತ್ ಸಿಟಿ ಮತ್ತು ಚನ್ನಪಟ್ಟಣದ ಕಣ್ವ ಬಡಾವಣೆಗಳ ಅಭಿವೃದ್ಧಿಗಾಗಿ ನಾನು, ಮಾಜಿ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಪ್ರತಿ ಚದರ ಅಡಿಗೆ ಸಾಧಾರಣ ಮೊತ್ತ 200 ರುಪಾಯಿ ಅಭಿವೃದ್ಧಿ ಶುಲ್ಕ ನಿಗದಿ ಮಾಡಿಸಿದ್ದೇವೆ. ಇಷ್ಟೇ ಅಲ್ಲದೆ, ನಿವೇಶನದಾರರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಶುಲ್ಕ ಪಾವತಿ ದಿನಾಂಕವನ್ನು ಮೂರು ಬಾರಿ ವಿಸ್ತರಣೆ ಮಾಡಲಾಗಿದೆ. ಇದೀಗ ಅಂತಿಮವಾಗಿ ಆಗಸ್ಟ್ 30 ಗಡುವು ನಿಗದಿ ಪಡಿಸಲಾಗಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಹಾಗೂ ನಗರಾಭಿವೃದ್ಧಿ ಯೋಜನಾಧಿಕಾರಿಗಳೊಂದಿಗೆ ಚರ್ಚಿಸಿ ದಿನಾಂಕ ವಿಸ್ತರಣೆ ಮಾಡಲಾಗಿದೆ. 3 ಲಕ್ಷಕ್ಕೆ ಖರೀದಿಸಿರುವ ನಿವೇಶನ ಮೌಲ್ಯ ಈಗ 40 ಲಕ್ಷ ರು.ವರೆಗೆ ಹೆಚ್ಚಳವಾಗಿದೆ. ಶುಲ್ಕ ಪಾವತಿ ವಿಚಾರದಲ್ಲಿ ನಿವೇಶನದಾರರು ನಿರ್ಲಕ್ಷ್ಯ ತೋರಬಾರದು ಎಂದು ತಿಳಿಸಿದರು.

17 ಕೋಟಿ ಅಭಿವೃದ್ಧಿ ಶುಲ್ಕ ಪಾವತಿ:

ಈ ಮೊದಲು ಅಭಿವೃದ್ಧಿ ಶುಲ್ಕ ಪಾವತಿಗಾಗಿ ಮಾರ್ಚ್ 31, ನಂತರ ಮೇ 30, ಆನಂತರ ಜೂನ್ 30ರವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿತ್ತು. ಅಭಿವೃದ್ಧಿ ಶುಲ್ಕದಿಂದ ಒಟ್ಟು 80 ಕೋಟಿ ರು.ವರೆಗೆ ನಿರೀಕ್ಷೆ ಮಾಡಲಾಗಿದ್ದು, ಇಲ್ಲಿವರೆಗೆ 1661 ನಿವೇಶನದಾರರ ಪೈಕಿ 752 ನಿವೇಶನದಾರರು 17 ಕೋಟಿ ರು. ಅಭಿವೃದ್ಧಿ ಶುಲ್ಕ ಪಾವತಿಸಿದ್ದಾರೆ ಎಂದು ಹೇಳಿದರು.

ನಿವೇಶನದಾರರು ಪಾವತಿಸುವ ಶುಲ್ಕದಿಂದಲೇ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಿಲ್ಲ. ಅವರಿಂದ ನಾವು ಸಣ್ಣ ಪ್ರಮಾಣದಲ್ಲಿ ಸಹಕಾರ ಕೇಳುತ್ತಿದ್ದೇವೆ. ಉಳಿಕೆ ಹಣವನ್ನು ಬೇರೆಡೆ ಸಾಲದ ರೂಪದಲ್ಲಿ ಪಡೆದು ಸರಿದೂಗಿಸಲಿದೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಗರ ಯೋಜನಾ ನಿರ್ದೇಶಕ ಶೇಖರ್ ಇದ್ದರು.

...ಕೋಟ್ ...

ರಾಜ್ಯ ಸರ್ಕಾರ ನಿವೇಶನದಾರರಿಂದ ಅಭಿವೃದ್ಧಿ ಶುಲ್ಕ ವಸೂಲಿಗೆ ಆದೇಶಿಸಿ ನಾಲ್ಕು ತಿಂಗಳು ಕಳೆದಿದ್ದು,ಆ ಶುಲ್ಕವನ್ನು ಅದೇ ಬಡಾವಣೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ವಿನಿಯೋಗಿಸಬೇಕಿದೆ. ಜೊತೆಗೆ ಪ್ರಾಧಿಕಾರವು ಆರು ತಿಂಗಳೊಳಗೆ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿತ್ತು. ಆದರೆ, ನಿವೇಶನದಾರರ ನಿರ್ಲಕ್ಷ್ಯದಿಂದ ಎಲ್ಲ ಕಾರ್ಯಗಳು ತಡವಾಗುತ್ತಿದೆ.

- ಎ.ಬಿ.ಚೇತನ್ ಕುಮಾರ್ , ಅಧ್ಯಕ್ಷರು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ.

22ಕೆಆರ್ ಎಂಎನ್ 2.ಜೆಪಿಜಿರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.