ಭೂ ಸುಧಾರಣಾ ಕಾಯ್ದೆ ಗೇಣಿ ರೈತರ ಬದುಕಿನ ಬೆಳಕು

| Published : Apr 20 2025, 01:47 AM IST

ಸಾರಾಂಶ

Land Reforms Act is the light of life for farmers

-ಕಾಗೋಡು ಚಳವಳಿ-೭೪ ಕಾರ್ಯಕ್ರಮದಲ್ಲಿ ಕಾಗೋಡು ತಿಮ್ಮಪ್ಪನವರಿಗೆ ನೇಗಿಲಯೋಗಿ ಪ್ರಶಸ್ತಿ ಪ್ರದಾನ

-----

ಕನ್ನಡಪ್ರಭ ವಾರ್ತೆ ಸಾಗರ

ನನಗೆ ದೊರಕಿದ ಅವಕಾಶವನ್ನು ಬಳಸಿಕೊಂಡು ಗೇಣಿ ರೈತರಿಗೆ ಭೂಮಿ ಹಕ್ಕು ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಮಾಜಿ ಸಚಿವ ಡಾ.ಕಾಗೋಡು ತಿಮ್ಮಪ್ಪ ಹೇಳಿದರು.

ಶೃಂಗೇರಿ ಶಂಕರಮಠದ ಭಾರತೀ ತೀರ್ಥ ಸಭಾಭವನದಲ್ಲಿ ಡಾ.ಎಚ್.ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಗೋಡು ಚಳವಳಿ-೭೪ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ನೇಗಿಲಯೋಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕಾಗೋಡು ಚಳವಳಿ ಪ್ರಾರಂಭವಾಗಿದ್ದಾಗ ನಾನಿನ್ನು ಹುಡುಗ. ಗಣಪತಿಯಪ್ಪ ಕಾಗೋಡು ಚಳವಳಿಯನ್ನು ಕೈಗೆತ್ತಿಕೊಂಡು ಅದನ್ನು ಮುನ್ನಡೆಸಿದ ರೀತಿ ಅನನ್ಯವಾದುದು ಎಂದು ಸ್ಮರಿಸಿಕೊಂಡರು.

ಮೂರು ದಿನಗಳ ಚಳವಳಿ ನಂತರ ಹಿನ್ನಡೆ ಅನುಭವಿಸಿದಾಗ ರೈತ ಸಂಘದ ಮೂಲಕ ಅದನ್ನು ಮುನ್ನಡೆಸಿದ ಗಣಪತಿಯಪ್ಪನವರ ಹೋರಾಟದ ಶಕ್ತಿ ಗಮನಾರ್ಹ. ಗಣಪತಿಯಪ್ಪ ಇಲ್ಲದೆ ಇದ್ದಿದ್ದರೆ ಈ ಚಳವಳಿ ನಡೆಯುತ್ತಿರಲಿಲ್ಲ. ಡಾ.ರಾಮಮನೋಹರ ಲೋಹಿಯಾ, ಗೋಪಾಲಗೌಡ ಸೇರಿದಂತೆ ಅನೇಕ ಸಮಾಜವಾದಿ ಮುಖಂಡರು ಚಳವಳಿಯಲ್ಲಿ ಪಾಲ್ಗೊಂಡಿದ್ದು, ಯಶಸ್ಸಿನ ಗುರಿ ತಲುಪಲು ಸಾಧ್ಯವಾಯಿತು. ಡಿ.ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ಬಂದ ಭೂಸುಧಾರಣಾ ಕಾಯ್ದೆ ಗೇಣಿ ರೈತರ ಬದುಕಿಗೆ ಹೊಸ ಬೆಳಕು ನೀಡಿತ್ತು. ಆದರೆ, ಹೋರಾಟದಿಂದ ಫಲ ಪಡೆದವರು ಇಂದು ಮರೆತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಭೂಮಿ ಬದುಕು ಈ ಹೊತ್ತಿನ ಆತಂಕ ವಿಷಯ ಕುರಿತು ಮಾತನಾಡಿದ ವಾಗ್ಮಿ ಸುಧೀರ್ ಕುಮಾರ್ ಮುರೊಳ್ಳಿ, ಭೂಮಿ ಈಗ ಭೂಮಿಯಾಗಿ ಉಳಿಯದೆ ಮಾರಾಟದ ಸರಕಾಗಿದೆ. ಭೂಮಿಯೊಂದಿಗಿನ ಭಾವನಾತ್ಮಕ ಸಂಬಂಧ ಕಳಚಿದೆ. ಹಣ ಕೊಟ್ಟು ಭೂಮಿ ಕೊಂಡುಕೊಳ್ಳುವುದು, ಮಾರುವುದೇ ಭೂಮಿಯ ಪ್ರಾಧಾನ್ಯತೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ನಾಯಕತ್ವ ಸೃಷ್ಟಿಸಬೇಕಾಗಿದ್ದ ಚಳವಳಿ ತನ್ನ ಅರ್ಥ ಕಳೆದುಕೊಂಡಿದೆ. ಚುನಾವಣೆಗೆ ನಿಲ್ಲುವವನು ಮೂರ್ನಾಲ್ಕು ತಿಂಗಳ ಮೊದಲು ದೇವಸ್ಥಾನ ಮಠಗಳಿಗೆ ಭೇಟಿ ಮಾಡಿ, ಜಾತಿ ಸಮಾವೇಶದ ಮೂಲಕ ಆಯ್ಕೆಯಾಗುತ್ತಿದ್ದಾನೆ. ಶಾಸನ ಸಭೆ ತನ್ನ ಮಹತ್ವ ಕಳೆದುಕೊಳ್ಳುತ್ತಿದ್ದು ಹನಿಟ್ರ್ಯಾಪ್‌ನಿಂದ ಬಚಾವಾಗಲು ರಾಜಕೀಯ ಪಕ್ಷಗಳ ಮೇಲಾಟ ಪ್ರಾರಂಭವಾಗಿದೆ. ಜಾತಿ ಮೀರಿದ ಹೊಸ ನಾಯಕತ್ವ ಸೃಷ್ಟಿಯಾಗುತ್ತಿಲ್ಲ. ಚಳವಳಿಗಳು ದಿಕ್ಕುತಪ್ಪುತ್ತಿರುವ ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಹೇಳಿದರು.

ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಕಾಗೋಡು ಚಳವಳಿ ರೀತಿಯಲ್ಲಿಯೇ ಮತ್ತೊಂದು ಭೂಹೋರಾಟ ನಡೆಯುವ ಅಗತ್ಯವಿದೆ. ರೈತರು ಉಳುಮೆ ಮಾಡುತ್ತಿದ್ದ ಭೂಮಿಯಿಂದ ಅವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ರೈತರು ಬೆಳೆದ ಅಡಕೆ ಸಸಿಯನ್ನು ಕಡಿದು ಹಾಕಲಾಗುತ್ತಿದೆ. ಭೂಮಿ ಆತಂಕ ಹೋಗಲಾಡಿಸುವ ಪರಿಣಾಮಕಾರಿ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಟಿ.ವಿ.ಪಾಂಡುರಂಗ, ಶೃಂಗೇರಿ ಶಂಕರಮಠದ ಧರ್ಮದರ್ಶಿ

ಅಶ್ವಿನಿಕುಮಾರ್, ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಪತ್ರಕರ್ತ ಜಿ.ನಾಗೇಶ್, ಬಿ.ಡಿ.ರವಿಕುಮಾರ್ ಹಾಜರಿದ್ದರು. ಕಿರಣಕುಮಾರ್ ಸ್ವಾಗತಿಸಿದರು. ಎಸ್.ಬಸವರಾಜ್ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.

೧೯ಕೆ.ಎಸ್.ಎ.ಜಿ.೧

ಕಾಗೋಡು ತಿಮ್ಮಪ್ಪನವರಿಗೆ ನೇಗಿಲಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.