ಭದ್ರಾ ಮುಳುಗಡೆ ಸಂತ್ರಸ್ತ ರೈತರ ಭೂಮಿ ಹಕ್ಕನ್ನು ಸ್ಥಿರೀಕರಿಸಿ

| Published : Sep 19 2025, 01:00 AM IST

ಭದ್ರಾ ಮುಳುಗಡೆ ಸಂತ್ರಸ್ತ ರೈತರ ಭೂಮಿ ಹಕ್ಕನ್ನು ಸ್ಥಿರೀಕರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಅವರಿಗೆ ಮನವಿ

ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಅವರಿಗೆ ಮನವಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಭದ್ರಾ ಮುಳುಗಡೆ ಸಂತ್ರಸ್ತ ರೈತರ ಭೂಮಿ ಹಕ್ಕನ್ನು ಸ್ಥಿರೀಕರಿಸಬೇಕು ಎಂದು ಶಿವಮೊಗ್ಗ ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹಾಗೂ ಸಂತ್ರಸ್ತ ರೈತರು ಗುರುವಾರ ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಅವರಿಗೆ ಮನವಿ ಪತ್ರ ಅರ್ಪಿಸಿದರು.

ಲಕ್ಕವಳ್ಳಿಯಲ್ಲಿ 1964 ರಲ್ಲಿ ನಿರ್ಮಾಣವಾಗಿರುವ ಭದ್ರಾ ಜಲಾಶಯದ ಹಿನ್ನೀರಿನಿಂದ ತಾಲೂಕಿನ ಹಲವಾರು ಗ್ರಾಮಗಳ ನೂರಾರು ರೈತರ ಜಮೀನು ಮುಳುಗಡೆಯಾಗಿತ್ತು. ಈ ರೈತರಿಗೆ 1964 ರಲ್ಲಿ ಪುನರ್ ವಸತಿ ಹಾಗೂ ಪರಿಹಾರ ರೂಪವಾಗಿ ಅರಣ್ಯ ಜಮೀನನ್ನು ತಾಲೂಕಿನ ಕಸಬಾ ಹೋಬಳಿಯ ಮುತ್ತಿನಕೊಪ್ಪ, ರಂಬಳ್ಳಿ,ಸಿಂಸೆ,ಬಡಗಬೈಲು,ಹಿಳುವಳ್ಳಿ, ಮೆಣಸೂರು, ಮುತ್ತಿನಕೊಪ್ಪ, ಕೋಣನಕೆರೆ, ಮಡಬೂರು,ಬೈರಾಪುರ,,ಶಿರಿಗಳಲೆ ಹಾಗೂ ಬಾಳೆಹೊನ್ನೂರು ಹೋಬಳಿಯ ಮಲ್ಲಂದೂರು, ಬೆಳ್ಳೂರು,ಸಂಕ್ಸೆ,ಹರಾವರಿ, ದಾವಣಅಳೇಹಳ್ಳಿ, ವಗಡೆ, ಗುಬ್ಬಿಗಾ, ಕರ್ಕೇಶ್ವರ,ಹಲಸೂರು, ಮುದುಗುಣಿ ಹಾಗೂ ಇತರ ಗ್ರಾಮಗಳ ರೈತರಿಗೆ ಅರಣ್ಯ ಇಲಾಖೆಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ ಮಂಜೂರು ಮಾಡಲಾಗಿತ್ತು.ಈ ರೈತರು ಜಮೀನನ್ನು ಸ್ವಾಧೀನಕ್ಕೆ ಪಡೆದು ಸಾಗುವಳಿ ಮಾಡಿಕೊಂಡು ತಮ್ಮ ಹೆಸರಿನಲ್ಲಿ ಖಾತೆ ಸಹ ಮಾಡಿಸಿಕೊಂಡಿದ್ದಾರೆ.

ಆದರೆ,ಅರಣ್ಯ ಇಲಾಖೆಯವರು ಈ ಜಮೀನನ್ನು ಅರಣ್ಯ ಇಲಾಖೆಯ ವತಿಯಿಂದ ಡಿ.ನೋಟಿಫಿಕೇಷನ್ ಹಾಗೂ ಡಿ ರಿಸರ್ವ್ ಪೂರ್ಮಗೊಳಿಸದ ಕಾರಣ ರೈತರಿಗೆ ಪೂರ್ಣ ಪ್ರಮಾಣದ ಹಕ್ಕು ಪ್ರಾಪ್ತವಾಗಿಲ್ಲ ಹಾಗೂ ಜಮೀನಿನ ಮಾಲ್ಕಿ ಹಕ್ಕು ಇರುವುದಿಲ್ಲ.

ಈಗ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದರಿಂದ ರಾಜ್ಯದ ಲಕ್ಷಾಂತರ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ತಮ್ಮ ಭೂಮಿ ಕಳೆದುಕೊಂಡ ತಾಲೂಕಿನ ಮುಳುಗಡೆ ಸಂತ್ರಸ್ಥರ ಭೂಮಿ ಹಕ್ಕನ್ನು ಸ್ಥಿರೀಕರಿಸಿಕೊಡಬೇಕು ಎಂದು ಎಂದು ಮನವಿ ಅರಣ್ಯ ಇಲಾಖೆಗೆ ಒತ್ತಾಯಿಸಲಾಗಿದೆ.

ಮನವಿ ಕೊಡುವ ಸಂದರ್ಭದಲ್ಲಿ ತಾಲೂಕು ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಕೆಡಿಪಿ ಸದಸ್ಯರಾದ ಕೆ.ವಿ.ಸಾಜು,ಅಂಜುಂ, ಪಿಸಿಎಆರ್.ಡಿ ಬ್ಯಾಂಕಿನ ನಿರ್ದೇಶಕ ದೇವಂತರಾಜ್, ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ, ಕಾಂಗ್ರೆಸ್ ಪಕ್ಷದ ಮುಖಂಡ ಬೆನ್ನಿ, ಭದ್ರಾ ಮುಳುಗಡೆ ಸಂತ್ರಸ್ತ ರೈತರಾದ ಸಾರ್ಯ ಸುಬ್ಬೇಗೌಡ, ನಾಗರಾಜ ಮತ್ತಿತರ ರೈತರು ಇದ್ದರು.