ಳಗ್ಗೆ ಸೂರ್ಯ ಉದಯವಾಗುವ ಮುನ್ನವೆ ಪೌರಕಾರ್ಮಿಕರು ಪಟ್ಟಣ ಸ್ವಚ್ಛಗೊಳಿಸುವ ಕಾಯಕದಲ್ಲಿ ನಿರತರಾಗಿರುತ್ತಾರೆ
ಕೊಟ್ಟೂರು:ಪೌರಕಾರ್ಮಿಕರ ಅಗತ್ಯ ಬೇಡಿಕೆ ಇರುವ ನಿವೇಶನ ಕಟ್ಟಿಕೊಳ್ಳಲು ಈಗಾಗಲೇ ಖಾಲಿ 2 ಎಕರೆ 93 ಸೆಂಟ್ಸ್ ಜಾಗ ಕಾಯ್ದಿರಿಸಿದೆ. ಮುಂದಿನ ವಾರದೊಳಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಯೋಜನಾ ನಿರ್ದೇಶಕ ಜಿಲ್ಲಾ ನಗರ ಅಭಿವೃದ್ಧಿ ಕೋಶ ಅಧಿಕಾರಿ ಮನೋಹರ್ ತಿಳಿಸಿದರು.
ಪಟ್ಟಣದ ಎಲ್.ಬಿ.ಶಾಸ್ತ್ರೀ ಬಡಾವಣೆಯ ಪಾರ್ಕ್ ನಲ್ಲಿ ಜರುಗಿದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ಒಟ್ಟು 24 ಜನ ಪೌರ ಕಾರ್ಮಿಕರಿಗೆ ಸರ್ವೇ ನಂಬರ್ 529 B.3.ಜಾಗದಲ್ಲಿ ಖಾಲಿ ಜಾಗ ನೀಡಲು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಿಂಗಳ ನಂತರ ಮನೆ ನಿರ್ಮಾಣ ಮಾಡಿಕೊಳ್ಳಲು ಹಣ ಬಿಡುಗಡೆ ಮಾಡಲಾಗುವುದು ಹಾಗೇ ಹೊರಗುತ್ತಿಗೆ ಆಧಾರಿತ ನೌಕರರಿಗೆ ಸಿಎ ಸೈಟ್ ನಲ್ಲಿ ಜಿ +2 ಅಥವಾ ಜಿ +3 ಮಾದರಿಯ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಹೇಳಿದರು.ಪಪಂ ಮುಖ್ಯಧಿಕಾರಿ ನಸರುಲ್ಲಾ ಮಾತನಾಡಿ, ಬೆಳಗ್ಗೆ ಸೂರ್ಯ ಉದಯವಾಗುವ ಮುನ್ನವೆ ಪೌರಕಾರ್ಮಿಕರು ಪಟ್ಟಣ ಸ್ವಚ್ಛಗೊಳಿಸುವ ಕಾಯಕದಲ್ಲಿ ನಿರತರಾಗಿರುತ್ತಾರೆ. ಇವರ ಈ ಪ್ರಾಮಾಣಿಕ ಸೇವೆ ಸುಂದರ ಪರಿಸರ ನಿರ್ಮಾಣ ಮಾಡುವುದರಲ್ಲಿ ಆರೋಗ್ಯಕರ ದೇಶ ಸೃಷ್ಟಿ ಮಾಡುವುದರಲ್ಲಿ ಉತ್ತಮ ಜವಾಬ್ದಾರಿ ಹೊಂದಿದ್ದಾರೆ ಎಂದರು.
ಪೌರ ಕಾರ್ಮಿಕ ರಾಜ್ಯಾಧ್ಯಕ್ಷ ಪ್ರಭಾಕರ್ ಮಾತನಾಡಿ, ವರ್ಷದ 324 ದಿನಗಳ ನಿರಂತರ ಸಾರ್ವಜನಿಕರ ಸೇವೆ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ದೊಡ್ಡದು, ಕೋವಿಡ್ ಸಂದರ್ಭದಲ್ಲಿ ಅನಾಥ ಶವ ತಮ್ಮ ಸಂಬಂಧಿಕರ ಶವಗಳಂತೆ ಶವಸಂಸ್ಕಾರ ಮಾಡಿ ಸೇವೆಯ ಸಾರ್ಥಕತೆ ಮೆರೆದಿದ್ದಾರೆ. ಸರ್ಕಾರ ಹೆಚ್ಚಿನ ಮಟ್ಟದಲ್ಲಿ ಸೌಲಭ್ಯ ನೀಡುವಂತೆ ನಾವು ಒತ್ತಡ ತರುತ್ತಿದ್ದೇವೆ ಎಂದರು.ಪೊಲೀಸ್ ಇನ್ಸ್ಪೆಕ್ಟರ್ ದುರುಗಪ್ಪ ಮಾತನಾಡಿ, ಎಲ್ಲ ಸರ್ಕಾರಿ ಕೆಲಸಗಳಲ್ಲಿ ಪೌರಕಾರ್ಮಿಕರ ಕೆಲಸವು ಅತ್ಯಂತ ಮಹತ್ವವಾದದ್ದು, ಇವರ ಸೇವೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಪಾತ್ರ ಹೊಂದಿದೆ ಇವರಿಗೆ ಸರ್ಕಾರವು ಉನ್ನತ ಮಟ್ಟದಲ್ಲಿ ಸೌಲಭ್ಯ ಮತ್ತು ಗೌರವ ಸಿಗುವಂತೆ ಮಾಡಬೇಕು ಎಂದರು.
ಪೌರಕಾರ್ಮಿಕ ತಾಲೂಕು ಉಪಾಧ್ಯಕ್ಷ ಶಂಕ್ರಪ್ಪ ಮಾತನಾಡಿ, ಪೌರಕಾರ್ಮಿಕರು ಕಾಯಕಯೋಗಿಗಳು ನಮಗೆ ರೋಗಗಳೇ ಹೆಚ್ಚು ಕಾಡುತ್ತವೆ, ನಾವುಗಳು ಇದು ಯಾವುದನ್ನೂ ಲೆಕ್ಕಿಸದೆ ನಮ್ಮ ದೇಶ ನಮ್ಮ ಊರು ಎಂಬ ಅಭಿಮಾನದ ಸೇವೆಯಲ್ಲಿ ಪ್ರಾಮಾಣಿಕತೆ ಕಂಡುಕೊಳ್ಳುತ್ತೇವೆ. ಊರಿನಲ್ಲಿ ಎಲ್ಲೇ ಕಸವಿದ್ದರೂ ಅದು ನಮಗೆ ಪರಿಶ್ರಮದ ದೇವಾಲಯವಿದ್ದಂತೆ ಕೈಮುಗಿದು ಕಾಯಕ ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕಿ ಅನುಷಾ, ಪರುಸಪ್ಪ, ಹೇಮನಗೌಡ್ರು, ವಿಜಯ ಕುಮಾರ್, ಮುತ್ತಣ್ಣ, ಮಂಜಣ್ಣ, ಕೇಶವ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
ಪ್ರಾಥನೆ ರಕ್ಷಿತಾ ಗೌತಮಿ,ಸಿಮ. ಗುರುಬಸವರಾಜ್ ನಿರೂಪಿಸಿ ವಂದಿಸಿದರು.