ದೊಡ್ಡೆತ್ತಿನಹಳ್ಳಿಯಲ್ಲಿ ಕೋರ್ಟ್‌ ನಿರ್ಮಾಣಕ್ಕೆ ಭೂಮಿ ನೀಡಲ್ಲ

| Published : Aug 26 2025, 01:02 AM IST

ದೊಡ್ಡೆತ್ತಿನಹಳ್ಳಿಯಲ್ಲಿ ಕೋರ್ಟ್‌ ನಿರ್ಮಾಣಕ್ಕೆ ಭೂಮಿ ನೀಡಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಮತಿ ತಾಲೂಕಿನ ಕುಂಕುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೆತ್ತಿನಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ನ್ಯಾಯಾಲಯ ಕಟ್ಟಡಕ್ಕೆ ಭೂಮಿಯನ್ನು ನೀಡದಂತೆ ಆಗ್ರಹಿಸಿ, ಪಟ್ಟಣದ ತಹಸೀಲ್ದಾರ್‌ ಕಚೇರಿ ಆವರಣಕ್ಕೆ ನೂರಾರು ಕುರಿಗಳೊಂದಿಗೆ ಆಗಮಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

- ನ್ಯಾಮತಿ ತಹಸೀಲ್ದಾರ್‌ ಕಚೇರಿ ಬಳಿ ಸಾವಿರಾರು ಕುರಿಗಳೊಂದಿಗೆ ಪ್ರತಿಭಟಿಸಿ ಗ್ರಾಮಸ್ಥರ ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ತಾಲೂಕಿನ ಕುಂಕುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೆತ್ತಿನಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ನ್ಯಾಯಾಲಯ ಕಟ್ಟಡಕ್ಕೆ ಭೂಮಿಯನ್ನು ನೀಡದಂತೆ ಆಗ್ರಹಿಸಿ, ಪಟ್ಟಣದ ತಹಸೀಲ್ದಾರ್‌ ಕಚೇರಿ ಆವರಣಕ್ಕೆ ನೂರಾರು ಕುರಿಗಳೊಂದಿಗೆ ಆಗಮಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ನ್ಯಾಮತಿಯ ಗಾಳಿ ಮಾರಮ್ಮ ದೇವಸ್ಥಾನದಿಂದ ದೊಡ್ಡೆತ್ತಿನಹಳ್ಳಿ ಗ್ರಾಮದ ನೂರಾರು ಗ್ರಾಮಸ್ಥರು ಕುರಿಹಿಂಡುಗಳೊಂದಿಗೆ ಆಗಮಿಸಿ, ನಮ್ಮ ಭೂಮಿ ನಮ್ಮ ಹಕ್ಕು ಎಂದು ಘೋಷಣೆ ಮೊಳಗಿಸಿ, ಸರ್ಕಾರದ ಗಮನ ಸೆಳೆದರು.

ಕುಂಕುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೆತ್ತಿನಹಳ್ಳಿ ಗ್ರಾಮದ ಸರ್ವೆ ನಂ.32ರಲ್ಲಿ ನ್ಯಾಯಾಲಯ ಕಟ್ಟಡ ಕಟ್ಟಲು ಗ್ರಾಮಾಡಳಿತ ಅಧಿಕಾರಿಗಳು ಸಿದ್ಧರಾಗಿದ್ದಾರೆ. ನಾವು ಮಾತ್ರ ಯಾವುದೇ ಕಾರಣಕ್ಕೂ ನ್ಯಾಯಾಲಯ ಕಟ್ಟಡ ಕಟ್ಟವುದಕ್ಕೆ ಬಿಡುವುದಿಲ್ಲ, ಭೂಮಿಯನ್ನೂ ಕೊಡುವುದಿಲ್ಲ ಎಂದು ಎಚ್ಚರಿಸಿದರು.

ಹಲವು ವರ್ಷಗಳಿಂದ ಆ ಜಾಗವು ಗ್ರಾಮದವರ ಅನುಭವದಲ್ಲಿದೆ. ಗ್ರಾಮಸ್ಥರು ಹೈನುಗಾರಿಕೆ, ಕುರಿ ಸಾಕಣೆಯಿಂದ ಬದುಕು ಸಾಗಿಸುತ್ತಿದ್ದೇವೆ. ಹಲವಾರು ಕುಟುಂಬಗಳಿಗೆ ನಿವೇಶನಗಳಿಲ್ಲ. 2017ರಿಂದ ನಿವೇಶನಕ್ಕಾಗಿ, 6 ತಿಂಗಳ ಹಿಂದೆ ಗ್ರಾಮ ಸಭೆ ನಡೆಸಿ 300 ಜನರು ನಿವೇಶನಕ್ಕೆ ಅರ್ಜಿಗಳನ್ನು ಹಾಕಿ ಕಾಯುತ್ತಿದ್ದಾರೆ. ಆದರೂ ನಮಗೆ ಮಾಹಿತಿ ನೀಡದೇ ಗ್ರಾಮಾಡಳಿತ ಅಧಿಕಾರಿಗಳು ನಿವೇಶನ ಸೌಲಭ್ಯ ನೀಡದೇ ವಂಚಿಸಿದ್ದಾರೆ. ತಾಲೂಕು ಆಡಳಿತ ಕ್ರಮ ಕೈಗೊಂಡು ಈ ಕುರಿತು ನ್ಯಾಯ ಒದಗಿಸಿಕೊಡಬೇಕು. ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಕುರಿಗಾಯಿಗಳು, ಗ್ರಾಮಸ್ಥರು ತಾಲೂಕು ಕಚೇರಿ ಮುಭಾಗದಲ್ಲಿ ಸಾವಿರಾರು ಕುರಿಗಳನ್ನು ಕೂಡಿ ಪ್ರತಿಭಟನೆ ಮಾಡಿದರು. ಬಳಿಕ ತಹಸೀಲ್ದಾರ್‌ ಎಂ.ಪಿ. ಕವಿರಾಜ್‌ ಮುಖೇನ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್‌ ಎಂ.ಪಿ.ಕವಿರಾಜ್‌ ಮಾತನಾಡಿ, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಿಕೊಡುತ್ತೇನೆ. ಆದರೆ ಈ ಹಿಂದೆ 2017ರಲ್ಲಿ ಮೊರಾರ್ಜಿ ದೇಸಾಯಿ ಶಾಲೆ ಕಟ್ಟಡಕ್ಕೆ 9 ಎಕರೆ ಸರ್ಕಾರದಿಂದ ಮಂಜೂರಾಗಿತ್ತು. ಕಾರಣಾಂತರದಿಂದ ಈ ಯೋಜನೆ ಹೊನ್ನಾಳಿ ತಾಲೂಕು ಅರಬಗಟ್ಟೆ ಗ್ರಾಮಕ್ಕೆ ಹೋಗಿದೆ. ಆದ ಪ್ರಯುಕ್ತ ಆ ಜಾಗದಲ್ಲಿ ನ್ಯಾಯಾಲಯ ಕಟ್ಟಡ ಮತ್ತು ತಾಲೂಕು ಆಸ್ಪತ್ರೆ ಕಟ್ಟಡಗಳು ನಿರ್ಮಾಣಗೊಂಡರೆ ನಿಮ್ಮ ಗ್ರಾಮ ಸೇರಿದಂತೆ ನ್ಯಾಮತಿ ತಾಲೂಕು ಸುತ್ತಮುತ್ತ ಅಭಿವೃದ್ಧಿ ಹೊಂದುತ್ತದೆ. ನೀವೆಲ್ಲಾ ಸಮಾಧಾನದಿಂದ ಯೋಚನೆ ಮಾಡಿ, ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಹೇಳಿದರು.

ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯ ಎಂ.ಆರ್‌.ಮಹೇಶ್‌, ಸ.ಕೆ.ರವಿ, ಸ್ಫೂರ್ತಿ ಸಂಸ್ಥೆಯ ಸುಜಾತ, ಶಿವಮ್ಮ, ನೀಲಮ್ಮ ಮಾತನಾಡಿದರು. ಪ್ರತಿಭಟನೆಯಲ್ಲಿ ಗುರುಮೂರ್ತಿ, ಶಂಬು, ಗುಡದಪ್ಪ, ಲೋಹಿತ್‌ ಪಾಟಿ, ಚಿಕ್ಕಸ್ವಾಮಿ, ರಾಜಪ್ಪ ಕೋರಿ, ಕೋರಿ ಚಿಕ್ಕಪ್ಪ, ಕುಂಕೋವದರ ಸಿದ್ದೇಶ್‌ ಮತ್ತಿತರರಿದ್ದರು.

- - -

-ಚಿತ್ರ:

ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮಸ್ಥರು ನ್ಯಾಯಾಲಯ ಕಟ್ಟಡಕ್ಕೆ ಭೂಮಿ ನೀಡದಂತೆ ಆಗ್ರಹಿಸಿ ನೂರಾರು ಕುರಿಗಳೊಂದಿಗೆ ತಹಸೀಲ್ದಾರ್‌ ಕಚೇರಿ ಆವರಣಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.