ಕೈಗಾರಿಕೆ ಸ್ಥಾಪಿಸುವ ದೆಸೆಯಲ್ಲಿ ರೈತರ ಜಮೀನುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಅದನ್ನು ಕೈಗಾರಿಕೋದ್ಯಮಿಗಳಿಗೆ ಮಾರಾಟ ಮಾಡುವಂಥ ರಿಯಲ್ ಎಸ್ಟೆಟ್ ಧಂಧೆ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೋಲಾರಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಭ್ರಷ್ಟಚಾರ ಎಂಬುವುದು ತುಂಬಿ ತುಳುಕಾಡುತ್ತಿದೆ ಎಂಬುವುದಕ್ಕೆ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಅಗಲಕೋಟೆಯಲ್ಲಿ ಶಾಲೆಯ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ ದಾನಿಗಳ ನೀಡಿದ ಜಮೀನು ಬಿಡದಂತೆ ನಕಲಿ ದಾಖಲೆ ಸೃಷ್ಟಿಸಿಕೊಂಡು ಕಬಳಿಸಿರುವ ಪ್ರಕರಣವು ನಿದರ್ಶನವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸ ಬೇಕೆಂದು ಸರ್ಕಾರವನ್ನು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಆಗ್ರಹಿಸಿದರು. ನಗರ ಹೊರವಲಯದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೈಗಾರಿಕೆ ಸ್ಥಾಪಿಸುವ ದೆಸೆಯಲ್ಲಿ ರೈತರ ಜಮೀನುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಅದನ್ನು ಕೈಗಾರಿಕೋದ್ಯಮಿಗಳಿಗೆ ಮಾರಾಟ ಮಾಡುವಂಥ ರಿಯಲ್ ಎಸ್ಟೆಟ್ ಧಂಧೆ ನಡೆಸಲಾಗುತ್ತಿದೆ. ಸರ್ಕಾರಿ ಜಮೀನುಗಳಿಗೆ ಪಿ.ನಂಬರ್ ಸೃಷ್ಟಿಸಿ ಕಬಳಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಜಂಗಮಕೋಟೆ, ಹೆಚ್.ಕ್ರಾಸ್, ಕೋಲಾರ ಜಿಲ್ಲೆಯ ಮಾಲೂರು, ವೇಮಗಲ್, ನರಸಾಪುರ ಮುಂತಾದ ಕಡೆ ರೈತರ ಮತ್ತು ಸರ್ಕಾರಿ ಜಮೀನುಗಳನ್ನು ಸ್ವಾಧೀನಕ್ಕೆ ಪಡೆದುಕೊಳ್ಳುವ ದಂಧೆಗಳು ನಡೆಸಲಾಗುತ್ತಿದೆ ಎಂದು ದೂರಿದರು.ಈ ಜಮೀನುಗಳನ್ನು ಖರೀದಿಸಿದ ದಾನಿ ಟಿ.ಜಿ.ಶ್ರೀನಿವಾಸಲು ತಮ್ಮ ಪೂರ್ವಿಕರ ೩೦೦ ಎಕರೆ ಜಮೀನಿನಲ್ಲಿ ಸರ್ವೆ ಸಂಖ್ಯೆ ೨,೭,೮, ೧೦, ೧೮.೬೩,೬೮ರಲ್ಲಿ ಖುಷ್ಕಿ ಜಮೀನು ಸುಮಾರು ೫೦ ಎಕರೆ ೧೬ ಗುಂಟೆ ಜಮೀನನ್ನು ಶಾಲೆಯ ನಿರ್ಮಾಣಕ್ಕೆಂದು ಶಿಕ್ಷಣ ಇಲಾಖೆಗೆ ದಾನವಾಗಿ ನೋಂದಣಿ ಮಾಡಿಸಿ ನೀಡಿದ್ದಾರೆ. ಒಂದು ಎಕರೆಗೆ ೧ ಕೋಟಿ ರೂ ಕಡಿಮೆ ಇಲ್ಲದಂತೆ ಬೆಲೆ ಇದ್ದು, ಸುಮಾರು ೫೦ ಕೋಟಿ ರೂ. ಹೆಚ್ಚು ಮೌಲ್ಯದ ಭೂಮಿಯಾಗಿದೆ. ಆದರೆ ಇದನ್ನು ಇತ್ತೀಚೆಗೆ ಕಳೆದ ೪-೫ ತಿಂಗಳ ಹಿಂದೆ ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಪರಭಾರೆ ಮಾಡಿ ಕೊಂಡು ದಾಖಲೆಗಳು ಸೃಷ್ಟಿಸಿಕೊಂಡಿರುವ ಸಾರ್ವಜನಿಕರ ಸ್ವತ್ತನ್ನು ಪಟ್ಟಭದ್ರ ಹಿತಾಸಕ್ತರು ನುಂಗಿದ್ದಾರೆ ಇದರ ವಿರುದ್ದ ಕ್ರಮ ಕೈಗೊಳ್ಳಲು ಗ್ರಾಮಸ್ಥರೇ ತಮಗೆ ದೂರು ನೀಡಿದ್ದು ಇದರಲ್ಲಿ ೭-೮ ಕಾಲು ದಾರಿಗಳು ಹಾಗೂ ೪ ಕೆರೆಗಳು ಸೇರಿದೆ ಎಂದು ದೂರಿದ್ದಾರೆ ಎಂದು ವಿವರಿಸಿದರು. ದಾನಿಗಳು ನೀಡಿದ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಠಿಸಿರುವಂತ ಖದೀಮರು ಸರ್ಕಾರಿ ಜಾಗಗಳನ್ನು ದೇವಾಸ್ಥಾನಗಳು, ಕೆರೆಗಳ ಜಾಗಗಳನ್ನು ಬಿಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಈ ದಾನಿಗಳು ನೋಂದಣಿ ಮಾಡಿಕೊಟ್ಟಿರುವ ದಾಖಲೆಗಳ ಸಮೇತ ಶಿಕ್ಷಣ ಇಲಾಖೆಯ ಬಿ.ಇ.ಓ, ಜಂಟಿ ನಿದೇಶಕರು. ತಹಸೀಲ್ದಾರ್ ಅವರು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಕ್ರಮಕೈಗೊಂಡಿಲ್ಲ. ಈ ಭಾಗಗಳಲ್ಲಿನ ಜಮೀನುಗಳನ್ನು ಕೈಗಾರಿಕೆಗಳು ಸ್ಥಾಪಿಸಲು ಬಂಡವಾಳ ಶಾಹಿಗಳು ಮುಗಿಬಿದ್ದಿರುವ ಹಿನ್ನಲೆಯಲ್ಲಿ ಭೂಮಿಯ ಬೆಲೆಗಳು ಗಗನಕ್ಕೆ ಏರಿಕೆಯಾಗಿದೆ. ಹಾಗಾಗಿ ರೀಯಲ್ ಎಸ್ಟೇಟ್ ದಂಧೆಕೋರರು ಬೆಂಗಳೂರು ಸುತ್ತಮುತ್ತಲಿನ ರೈತರ ಮತ್ತು ಸರ್ಕಾರಿ ಜಮೀನುಗಳನ್ನು ಕಬಳಿಸಲು ಮುಂದಾಗಿದ್ದಾರೆ ಎಂದರು.ಇತ್ತೀಚೆಗೆ ಜಂಗಮಕೋಟೆ ಸಮೀಪ ೨.೫ ಸಾವಿರ ಎಕರೆ ರೈತರ ಜಮೀನು ಸ್ವಾಧೀನ ಪಡೆದುಕೊಂಡು ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸಗಳಾಗುತ್ತಿರುವುದು ಕಳವಳಕಾರಿಯಾಗಿದೆ, ರೈತರ ಬಳಿ ಎಕರೆಗೆ ೫೦ ಲಕ್ಷ ರೂ ನೀಡಿ ಅದನ್ನು ೧.೫೦ ಕೋಟಿ ರೂಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ ೩ ತಿಂಗಳಲ್ಲಿ ಬೆಲೆ ಏರಿಕೆಗಳಾಗಿದೆ. ರೈತರಿಂದ ಖರೀದಿಸಿದ ಈ ಜಮೀನುಗಳನ್ನು ಕೆ.ಐ.ಎ.ಡಿ.ಬಿ.ಗೆ ಮಾರಾಟ ಮಾಡುವ ಮೂಲಕ ದೊಡ್ಡಮಟ್ಟದ ಲಾಭಗಳಿಸುತ್ತಿದ್ದಾರೆ. ಜನಪ್ರತಿನಿಧಿಗಳು ಸೇರಿದಂತೆ ಯುನೈಟೆಡ್ ಎಸ್ಟೆಟ್‌ನ ಆರ್.ಗಂಗಾಧರ್, ಅವರ ರವೀಂದ್ರ ನಾಯ್ಕ್ ಮತ್ತು ಯುನೈಟೆಡ್ ಗ್ರೀನ್ ವುಡ್‌ನ ಪಂಚಾಕ್ಷರಯ್ಯ ಹಿರೇಮಠ್ ಇವರುಗಳ ಪಾಲುಗಾರಿಕೆಯಲ್ಲಿ ಜಮೀನು ಮಾಡಿಕೊಳ್ಳಲಾಗಿದೆ ಎಂಬುವುದನ್ನು ಮಾಧ್ಯಮಗಳೇ ಈ ಹಿಂದೆ ಪತ್ರಿಕೆಗಳಲ್ಲಿ ಪ್ರಕಟಿಸಿದ್ದವು ಎಂದು ತಿಳಿಸಿದರು. ಅದರೂ ಈ ಸಂಬಂಧವಾಗಿ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ ಸರ್ಕಾರದ ೫೦ ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಬೇರೊಬ್ಬರು ಕಬಳಿಸಿದರೂ ನಿರ್ಲಕ್ಷಿಸುತ್ತಿರುವ ಹಿಂದೆ ಅಧಿಕಾರಿಗಳ ಮೇಲೆ ರಾಜಕೀಯದ ಒತ್ತಡಗಳಿರುವುದು ಸ್ವಷ್ಟವಾಗಿದೆ. ರಾಜ್ಯದ ಪ್ರಭಾವಿ ಸಚಿವರು ನಮ್ಮ ಜಿಲ್ಲೆಯ ಉಸ್ತುವಾರಿಗಳಾಗಿದ್ದಾರೆ. ರಾಜ್ಯದ ಕಂದಾಯ ಮಂತ್ರಿಗಳ ತವರು ನಮ್ಮ ಜಿಲ್ಲೆಯೇ ಆಗಿದ್ದರೂ ಸಹ ಸಾರ್ವಜನಿಕರ ಈ ಆಸ್ತಿ ಉಳಿಸಿಕೊಳ್ಳಲು ಈ ಅಕ್ರಮದ ವಿರುದ್ದ ಸೃಷ್ಟಿಸಿರುವ ದಾಖಲೆಗಳನ್ನು ರದ್ದುಪಡಿಸಬೇಕು. ಅಕ್ರಮದ ನಕಲಿ ದಾಖಲೆಗಳನ್ನು ಸೃಷ್ಟಿದ ಅಧಿಕಾರಿಗಳ ವಿರುದ್ದ ತನಿಖೆ ನಡೆಸಿ ಕಾನೂನು ಕ್ರಮಜರುಗಿಸಬೇಕು ಇದಕ್ಕೆ ಒತ್ತಡ ಹಾಕಿದ ಜನಪ್ರತಿಗಳನ್ನು ಬೆಳಕಿಗೆ ತರಬೇಕು. ಅವರ ವಿರುದ್ದವು ಪ್ರಕರಣ ದಾಖಲಿಸ ಬೇಕೆಂದು ಆಗ್ರಹಿಸಿದರು.ಈ ಸಂಬಂಧವಾಗಿ ದೆಹಲಿಯ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪ್ರಧಾನಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಸಲ್ಲಿಸಿ ಕ್ರಮಕೈಗೊಂಡು ಕೇಂದ್ರ ಸರ್ಕಾರದಿಂದಲೇ ಯವುದಾದರೂ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮನವಿ ಮಾಡುತ್ತೇನೆ. ಈ ಸಂಬಂಧವಾಗಿ ಸ್ಥಳೀಯ ಲೋಕಸಭಾ ಸದಸ್ಯರಾದ ಮಲ್ಲೇಶ್ ಬಾಬು ಹಾಗೂ ಕುಮಾರಣ್ಣರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಟೇಕಲ್ ಸಮೀಪದ ಅಗಲಕೋಟೆಯಲ್ಲಿ ನಡೆದಿರುವ ಹಗಲು ದರೋಡೆ ವಿಷಯವೇ ಸ್ಥಳೀಯರಿಗೆ ತಿಳಿದಿಲ್ಲ. ಇದು ಅಲ್ಲಿನ ಜನಪ್ರತಿನಿಧಿಗಳ ನಿವಾಸಕ್ಕೆ ಕೇವಲ ೩ ಕಿ.ಮೀ ಅಂತರದಲ್ಲಿರುವ ಜಾಗವಾಗಿದೆ. ಬರೋಬರಿ ೫೦ ಎಕರೆಯ ಜಾಗ ಎಂದರೆ ಇದರಲ್ಲಿ ಪಟ್ಟಭದ್ರಹಿತಾಸಕ್ತರ ಕೈವಾಡ ಇಲ್ಲದೆ ಇಷ್ಟೇಲ್ಲಾ ಆಗಲು ಸಾಧ್ಯವೇ ಇಲ್ಲ ಹಾಗಾಗಿ ಈ ಪ್ರಕರಣವನ್ನು ಸಂಪೂರ್ಣವಾಗಿ ಬೆಳಕಿಗೆ ಬರಬೇಕಾದರೂ ತನಿಖೆ ಆಗಲೇಬೇಕು. ರಾಜ್ಯ ಸರ್ಕಾರವು ದಾಖಲೆಗಳನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಿ ಕಾನೂನುಗಳು ಎಲ್ಲರಿಗೂ ಒಂದೇ ಎಂಬುವುದನ್ನು ಸಾಭೀತುಪಡಿಸಲಿ ಎಂದು ಒತ್ತಾಯಿಸಿದರು. ಈ ಪ್ರಕರಣಕ್ಕೆ ಸಂಬಧಿಸಿದಂತೆ ಮಾಲೂರು ಮಾಜಿ ಶಾಸಕ ಮಂಜುನಾಥ್ ಗೌಡ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ವಿಜಯ ಕುಮಾರ್, ಸಿ.ಡಿ.ರಾಮಚಂದ್ರ, ಕಪಾಲಿ ಶಂಕರ್, ಸಾ.ಮಾ.ಅನಿಲ್ ಬಾಬು, ರಾಜು, ಸುಗಟೂರು ಚಂದ್ರಶೇಖರ್, ವಕೀಲ ಮಂಜುನಾಥ್, ಶ್ರೀನಿವಾಸ್, ತಿಮ್ಮರಾಯಪ್ಪ, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಅರುಣಮ್ಮ, ಮಮತಮ್ಮ, ಸುಮ, ರಾಜೇಶ್ವರಿ ಇದ್ದರು.