ಬಡವರಿಗೆ ಹಂಚಿಕೆಯಾಗದ ನಿವೇಶನಗಳು ಅನ್ಯಾಕ್ರಮಣಗೊಳ್ಳುವ ಆತಂಕ

| Published : Jul 25 2024, 01:26 AM IST

ಬಡವರಿಗೆ ಹಂಚಿಕೆಯಾಗದ ನಿವೇಶನಗಳು ಅನ್ಯಾಕ್ರಮಣಗೊಳ್ಳುವ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸ್ಪೀಕರ್ ದಿ.ಕೃಷ್ಣ ಪ್ರತಿಷ್ಠಾನದ ಗಾಂಧಿ ಭವನ, ಒಕ್ಕಲಿಗರ ಭವನ, ವೀರಶೈವ ಸಮುದಾಯದ ಬಸವ ಭವನ ನಿರ್ಮಾಣಕ್ಕೆ ಕೆಲವು ಸಂಘ- ಸಂಸ್ಥೆಗಳು ಹಕ್ಕೊತ್ತಾಯ ಆರಂಭಿಸಿವೆ. ಜಿಲ್ಲಾ ಯೋಜನಾಧಿಕಾರಿಗಳ ಸರ್ವೇ ವರದಿಯಂತೆ ಸದರಿ ಟಿ.ಬಿ.ಬಡಾವಣೆಗಳಲ್ಲಿ ಸಮುದಾಯ ಭವನಗಳಲ್ಲದೆ 34 ಅಕ್ರಮ ಮನೆಗಳು ನಿರ್ಮಾಣವಾಗಿವೆ. ಬಡವರಿಗೆ ಹಂಚಿಕೆಯಾಗಬೇಕಿಗಿದ್ದ ನಿವೇಶನಗಳು ಸದ್ದಿಲ್ಲದೆ ಅನ್ಯಾಕ್ರಮಣವಾಗುತ್ತಿದ್ದರೂ ಪುರಸಭೆ ಹಾಗೂ ಜಿಲ್ಲಾಡಳಿತ ಮೌನವಾಗಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಡುಬಡರಿಗೆ ಹಂಚಲು ಭೂ ಸ್ವಾಧೀನ ಮಾಡಿಕೊಳ್ಳಲಾದ ಪಟ್ಟಣದ ಟಿ.ಬಿ ಬಡಾವಣೆಯಲ್ಲಿನ ನಿವೇಶನಗಳನ್ನು ಪುರಸಭೆ ಹಂಚಿಕೆ ಮಾಡದ ಪರಿಣಾಮ ಒತ್ತುವರಿ ಜೊತೆಗೆ ಸ್ವಾಧೀನವಾದ ಜಮೀನು ಅನ್ಯಾಕ್ರಮಣಗೊಳ್ಳುವ ಆತಂಕ ಎದುರಾಗಿದೆ.

ಪಟ್ಟಣದ ಪುರಸಭೆ ಟಿ.ಬಿ ಬಡಾವಣೆಗೆ ಸಂಬಂಧಿಸಿಂತೆ ಸರ್ವೇ ನಂ. 280, 281, 285, 286 ಹಾಗೂ 290 ರಲ್ಲಿ ಒಟ್ಟು 21 ಎಕರೆ 19 ಗುಂಟೆ ಕೃಷಿ ಭೂಮಿಯನ್ನು ಕಡು ಬಡವರಿಗೆ ನಿವೇಶನ ಹಂಚುವ ಉದ್ದೇಶದಿಂದ ನಂ.ಎಚ್ ಎಎಲ್ .4/1976-77 ರಂತೆ ಕಳೆದ 48 ವರ್ಷಗಳ ಹಿಂದೆ ಭೂ ಸ್ವಾಧೀನ ಮಾಡಿಕೊಂಡಿತ್ತು.

ಪುರಸಭೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ:

70ರ ದಶಕದಲ್ಲಿ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ದಿ.ಕೆ.ಜೆ.ಬೋರಲಿಂಗೇಗೌಡ ಅವರು ಪಟ್ಟಣದ ಕಡು ಬಡವರಿಗೆ ನಿವೇಶನ ಹಂಚುವ ಕಾರಣಕ್ಕೆ ಟಿ.ಬಿ.ಬಡಾವಣೆ ಜಾಗವನ್ನು ನಿಯಾಮಸಾರ ಭೂ ಸ್ವಾಧೀನ ಮಾಡಿದ್ದರು. ಭೂ ಸ್ವಾಧೀನವಾಗಿ 5 ದಶಕಗಳು ಸಮೀಪಿಸುತ್ತಿದ್ದರೂ ಪುರಸಭೆ ಆಡಳಿತ ಮಾತ್ರ ಇದುವರೆಗೂ ಕಡು ಬಡವರಿಗೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ.

ನಂತರ ದಿನಗಳಲ್ಲಿ ಪುರಸಭೆಗೆ ಅನೇಕ ಅಧ್ಯಕ್ಷರು ಆಯ್ಕೆಯಾಗಿ ನಿಯಮ ಮೀರಿ ನಿವೇಶನಗಳನ್ನು ಹಂಚಿಕೆ ಮಾಡಿದ ಪರಿಣಾಮ ಪಟ್ಟಣದ ಹೇಮಾವತಿ ಬಡಾವಣೆ ಹಾಗೂ ಟಿ.ಬಿ.ಬಡಾವಣೆಯಲ್ಲಿ ನಿವೇಶನಗಳ ಹಂಚಿಕೆಯಲ್ಲಿರುವ ಅಕ್ರಮದ ತನಿಖೆಗೆ ಒತ್ತಾಯಿಸಿ ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಅವರು 2002-03 ನೇ ಸಾಲಿನಲ್ಲಿ ಅಂದಿನ ಲೋಕಾಯುಕ್ತರಾಗಿದ್ದ ವೆಂಕಟಾಚಲಯ್ಯ ಅವರಿಗೆ ದೂರು ನೀಡಿದ್ದರು. ಹೇಮಾವತಿ ಬಡಾವಣೆ ನಿವೇಶನ ಹಂಚಿಕೆ ಸಂಬಂಧ ಲೋಕಾಯುಕ್ತ ತನಿಖಾ ವರದಿ ಬಂದಿದ್ದು ಟಿ.ಬಿ.ಬಡಾವಣೆ ಬಗೆಗಿನ ತನಿಖಾ ವರದಿ ಬಾಕಿ ಇದೆ.

ಲೋಕಾಯುಕ್ತರ ತನಿಖಾ ವರದಿ ಬಾಕಿ ಇರುವಾಗಲೇ ಕಡು ಬಡವರ ನಿವೇಶನಕ್ಕೆ ಮೀಸಲಾದ ಟಿ.ಬಿ.ಬಡಾವಣೆ ಮಾತ್ರ ಪಟ್ಟಣದ ಕಡು ಬಡುವರ ಕಣ್ಣ ಮುಂದೆಯೇ ಅನ್ಯಾಕ್ರಮಣಕ್ಕೆ ಒಳಗಾಗಿ ಕರಗುತ್ತಿದೆ. ಟಿ.ಬಿ.ಬಡಾವಣೆಯಲ್ಲಿ ಟೌನ್ ಪ್ಲಾನಿಂಗ್ ಮಾಡಿ ನಿವೇಶನಗಳನ್ನು ನಿರ್ಮಿಸಬೇಕಾದ ಪುರಸಭೆ ತನ್ನ ಮೂಲ ಉದ್ದೇಶವನ್ನೆ ಮರೆತಿದೆ.

ಟಿ.ಬಿ.ಬಡಾವಣೆಯಲ್ಲಿ ಬಡವರ ಮನೆಗಳು ತಲೆ ಎತ್ತುವ ಬದಲು ಖಾಸಗಿ ಶಾಲೆ, ಪುರಸಭೆ ಸೇರಿದ ಖಾಸಿಂಖಾನ್ ಸಮುದಾಯ ಭವನ ( ಈಗ ಪುರಸಭೆ ಆಡಳಿತ ಕಚೇರಿಯಾಗಿದೆ ), ಶಹರಿ ರೋಜ್ ಗಾರ್ ಭವನ, ಡಾ.ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಂ ಭವನ, ವಾಲ್ಮೀಕಿ ಭವನಗಳು ತಲೆ ಎತ್ತಿವೆ.

ಜಿಲ್ಲಾಡಳಿತ ಮೌನ:

ಇದರ ಜೊತೆಗೆ ಮಾಜಿ ಸ್ಪೀಕರ್ ದಿ.ಕೃಷ್ಣ ಪ್ರತಿಷ್ಠಾನದ ಗಾಂಧಿ ಭವನ, ಒಕ್ಕಲಿಗರ ಭವನ, ವೀರಶೈವ ಸಮುದಾಯದ ಬಸವ ಭವನ ನಿರ್ಮಾಣಕ್ಕೆ ಕೆಲವು ಸಂಘ- ಸಂಸ್ಥೆಗಳು ಹಕ್ಕೊತ್ತಾಯ ಆರಂಭಿಸಿವೆ. ಜಿಲ್ಲಾ ಯೋಜನಾಧಿಕಾರಿಗಳ ಸರ್ವೇ ವರದಿಯಂತೆ ಸದರಿ ಟಿ.ಬಿ.ಬಡಾವಣೆಗಳಲ್ಲಿ ಸಮುದಾಯ ಭವನಗಳಲ್ಲದೆ 34 ಅಕ್ರಮ ಮನೆಗಳು ನಿರ್ಮಾಣವಾಗಿವೆ. ಬಡವರಿಗೆ ಹಂಚಿಕೆಯಾಗಬೇಕಿಗಿದ್ದ ನಿವೇಶನಗಳು ಸದ್ದಿಲ್ಲದೆ ಅನ್ಯಾಕ್ರಮಣವಾಗುತ್ತಿದ್ದರೂ ಪುರಸಭೆ ಹಾಗೂ ಜಿಲ್ಲಾಡಳಿತ ಮೌನವಾಗಿವೆ.

ಕಡು ಬಡವರಿಗೆ ಹಂಚಿಕೆ ಮಾಡಬೇಕಾದ ಜಾಗವನ್ನು ಮೂಲ ಉದ್ದೇಶಕ್ಕೆ ಬಳಕೆ ಮಾಡದೆ ಲೋಕಾಯುಕ್ತರ ತನಿಖಾ ವರದಿ ಬರುವುದಕ್ಕೂ ಮುನ್ನವೇ ಜಾತಿ ಭವನಗಳಿಗೆ, ಖಾಸಗಿ ಸಂಘಗಳಿಗೆ, ಖಾಸಗಿ ಶಾಲೆಗೆ ನೀಡಿರುವುದರ ವಿರುದ್ಧ ಪುರಸಭೆ ಸದಸ್ಯರೂ ಆದ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೆ.ಸಿ.ಮಂಜುನಾಥ್ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಳೆದ ಫೆಬ್ರುವರಿ 12 ರಂದು ಲಿಖಿತ ಮನವಿ ನೀಡಿ ಟಿ.ಬಿ.ಬಡಾವಣೆಯಲ್ಲಿ ನಿಯಮಬಾಹಿರವಾಗಿ ಖಾಸಗಿ ಸಂಘಟನೆಗಳಿಗೆ ನಿವೇಶನ ನೀಡುವುದನ್ನು ತಡೆದು, ಒತ್ತುವರಿ ತೆರವುಗೊಳಿಸಿ ಭೂ ಸ್ವಾಧೀನ ಪ್ರದೇಶಕ್ಕೆ ತಂತಿ ಬೇಲಿ ಹಾಕಿಸುವಂತೆ ಒತ್ತಾಯಿಸಿದ್ದಾರೆ.

ಡಿಸಿಎಂರಿಂದ ಡೀಸಿಗೆ ನಿರ್ದೇಶನ:

ಕೆ.ಸಿ.ಮಂಜುನಾಥ್ ಅವರ ದೂರು ಪತ್ರಕ್ಕೆ ಸ್ಪಂದಿಸಿರುವ ಉಪ ಮುಖ್ಯಮಂತ್ರಿಗಳು ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಉಪ ಮುಖ್ಯಮಂತ್ರಿಗಳ ಪತ್ರದ ಆಧಾರದ ಮೇಲೆ ಕಳೆದ ಏಪ್ರಿಲ್ 30 ರಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪುರಸಭೆಗೆ ನಿರ್ದೇಶನ ಪತ್ರ ಬಂದಿದೆ.

ಪುರಸಭೆ ಆಸ್ತಿ ಉಳಿಸುವ ನಿಟ್ಟಿನಲ್ಲಿ ಭೂ ಸ್ವಾಧೀನವಾಗಿರುವ ಜಮೀನನ್ನು ಭೂ ಮಾಪನ ಇಲಾಖೆಯಿಂದ ಅಳತೆ ಮಾಡಿಸಿ ಹದ್ದುಬಸ್ತು ಮಾಡಬೇಕಲ್ಲದೆ ಒತ್ತುವರಿ ತೆರವುಗೊಳಿಸಿ ಒತ್ತುವರಿದಾರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿ ನಿರ್ದೇಶನದ ಮೇರೆಗೆ ಪುರಸಭೆ ಜೂ.4 ರಂದು ಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಪತ್ರ ಬರೆದು ಟಿ.ಬಿ.ಬಡಾವಣೆಯ ಸರ್ವೇ ನಂ.280, 281, 285, 286 ಹಾಗೂ 290 ರಲ್ಲಿ ಪೋಡ್ ನಂಬರುಗಳನ್ನು ಅಳತೆ ಮಾಡಿ ಗಡಿ ಗುರುತಿಸಿ ಕೊಡುವಂತೆ ಕೋರಿದೆ. ಆದರೆ, ತಿಂಗಳು ಕಳೆದರೂ ಭೂ ಮಾಪನ ಇಲಾಖೆ ಮಾತ್ರ ಇತ್ತ ತಲೆಹಾಕಿಲ್ಲ. ಪುರಸಭೆ ಮತ್ತು ಜಿಲ್ಲಾಡಳಿತ ಈಗಲಾದರೂ ಸಕ್ರಿಯವಾಗಿ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಿ ಸೂರಿನ ಕನಸು ಕಾಣುತ್ತಿರುವ ಪಟ್ಟಣದ ಕಡು ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವುದೇ ಎಂಬುದನ್ನು ಕಾದು ನೋಡಬೇಕಿದೆ.

‘ಟಿ.ಬಿ ಬಡಾವಣೆ ಅನ್ಯಾಕ್ರಮಣಕ್ಕೆ ಒಳಗಾಗಿ ಒತ್ತುವರಿಯಾಗುತ್ತಿರುವುದನ್ನು ಜಿಲ್ಲಾಡಳಿತ ತಡೆಯಬೇಕು. ಡಾ.ಅಂಬೇಡ್ಕರ್, ಬಾಬು ಜಗಜೀವನ್ ರಾಂ, ವಾಲ್ಮೀಕಿ ಭವನಗಳ ನಿರ್ಮಾಣಕ್ಕೆ ಜಾಗಕೊಟ್ಟಿರುವುದರ ಹಿಂದೆ ಸದುದ್ದೇಶವಿದೆ. ಆದರೆ, ಇತರ ವ್ಯಕ್ತಿಗತ ಸಂಘಟನೆಗಳಿಗೆ ಇಲ್ಲಿ ಜಾಗ ನೀಡುವ ಬದಲು ಮೂಲ ಅಶಯದಂತೆ ಕಡು ಬಡವರಿಗೆ ನಿವೇಶನ ಹಂಚಿಕೆಯಾಗಬೇಕು.’

--

ಕೆ.ಸಿ.ಮಂಜುನಾಥ್, ಪುರಸಭೆ ಸದಸ್ಯ.

‘ಗ್ರಾಮಿಣ ಪ್ರದೇಶದಲ್ಲೂ ಬಡ ಕುಟುಂಬಗಳಿಗೆ ನಿವೇಶನದ ಕೊರತೆಯಿದೆ. ತಾಲೂಕಿನಲ್ಲಿ ಯಾವುದೇ ಗ್ರಾಮ ಪಂಚಾಯ್ತಿಯಲ್ಲಿ ಬಡವರಿಗೆ ನಿವೇಶನ ಹಂಚಿಕೆಗೆ ಮುಂದಾಗಿಲ್ಲ. ಗ್ರಾಮೀಣ ಭಾಗದಲ್ಲೂ ಬಡವರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯಾಧಿಕಾರಿಗಳು ಕ್ರಮ ವಹಿಸಬೇಕು.’

ಬಿ.ಎಲ್ .ದೇವರಾಜು, ಕಾಂಗ್ರೆಸ್ ಮುಖಂಡರು.