ಸಾರಾಂಶ
ಬ್ಯಾಡಗಿ:ಇತ್ತೀಚೆಗೆ ಕರ್ನಾಟಕದ ಕರಾವಳಿ ಪ್ರದೇಶದ ಮತ್ತು ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತ ಘಟನೆಗಳನ್ನು ಯಾರೂ ಕೂಡ ಊಹಿಸಿರಲಿಲ್ಲ. ಆದರೆ ಇವರೆಡು ಪ್ರಕರಣಗಳು ವಿಶ್ವದ ಗಮನ ಸೆಳೆದಿದ್ದು, ಅರಣ್ಯವಿಲ್ಲದಿದ್ದರೇ ಅನಾಹುತ ತಪ್ಪಿದ್ದಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇಡೀ ಮನುಕುಲಕ್ಕೆ ನೀಡಿದ್ದಂತೂ ಸತ್ಯ ಎಂದು ಯೋಜನಾಧಿಕಾರಿ ರಘುಪತಿಗೌಡ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದಶಲಕ್ಷ ಗಿಡ ನೆಡುವ ಯೋಜನೆಯಡಿ ತಾಲೂಕಿನ ಮಲ್ಲೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಹ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು ಯಾವುದೇ ಸಾಧನಗಳಿಲ್ಲ, ಹಾಗಿದ್ದರೇ ಅಭಿವೃದ್ಧಿಯ ನೆಪದಲ್ಲಿ ನಾವು ನಡೆಸುತ್ತಿರುವ ಮರಗಳ ಮಾರಣ ಹೋಮ ಅರಣ್ಯ ಸಂಪತ್ತು ದರೋಡೆ ನಮ್ಮನ್ನು ಆಗಾಗ್ಗೆ ಎಚ್ಚರಿಸಲಿವೆ. ಮೊನ್ನೆ ನಡೆದ ಎರಡು ಭೂಕುಸಿತ ಪ್ರಕರಣಗಳು ನಮಗೊಂದು ಪಾಠ ಏಕಾಗಬಾರದು ಎಂದರು.
ಇನ್ನೊಬ್ಬರ ಕಡೆಗೆ ಬೆರಳು ತೋರದಿರಿ: ಗಿಡಮರಗಳನ್ನು ನೆಡುವ ಮೂಲಕ ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕಾದ ನಾವುಗಳೇ ಇಂದು ಅರಣ್ಯ ನಾಶಕ್ಕೆ ಮುಂದಾಗುತ್ತಿದ್ದೇವೆ, ಅರಣ್ಯ ಪ್ರದೇಶ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇನ್ನೊಬ್ಬರ ಕಡೆಗೆ ಬೆರಳು ತೋರದೇ ಸಾಮೂಹಿಕ ಹೊಣೆಗಾರಿಕೆ ತೋರಬೇಕಾಗಿದೆ, ಇಲ್ಲದಿದ್ದರೇ ಮನುಷ್ಯ ಸೇರಿದಂತೆ ಜೀವ ಸಂಕುಲಗಳ ಸಾಮೂಹಿಕ ನಾಶಕ್ಕೂ ನಾವೇ ನೇರ ಹೊಣೆಯಾಗಲಿದ್ದೇವೆ ಎಂದರು.ಇಂದಿನ ತಾಪಮಾನ ಏರಿಕೆ ಕಾರಣ ನಾವೇ: ಗ್ರಾಪಂ.ಅಧ್ಯಕ್ಷ ಪ್ರಕಾಶ್ ಕುಲಕರ್ಣಿ ಮಾತನಾಡಿ, ಅರಣ್ಯ ಪ್ರದೇಶ ಕುಗ್ಗುತ್ತಿರುವುದಕ್ಕೆ ಮತ್ತು ತಾಪಮಾನ ಏರಿಕೆಗೆ ನಾವೇ ಕಾರಣವಾಗಿದ್ದೇವೆ, ಹೊಲದ ಬದುಗಳಲ್ಲಿ ಗಿಡಮರಗಳನ್ನು ನೆಡುವುದನ್ನು ಸಹ ರೈತರು ನಿಲ್ಲಿಸಿದ್ದಾರೆ, ರಸ್ತೆ ಅಗಲೀಕರಣ ನೆಪದಲ್ಲಿ ನೂರಾರು ವರ್ಷದಿಂದ ಉಳಿಸಿಕೊಂಡು ಬಂದಿದ್ದ ಮರಗಳನ್ನು ಕಡಿದು ಉರುಳಿಸಿದ್ದೇವೆ ಇಂತಹ ನೂರಾರು ಕಾರಣಗಳು ನಮ್ಮ ಅಳಿವಿಗೆ ಕಾರಣವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಗ್ರಾಪಂ. ಸದಸ್ಯ ವಿಠ್ಠಲ್ ಜಾಧವ, ದಾನಪ್ಪ ಪಾಟೀಲ್, ಪ್ರಭುಗೌಡ ಹೊಂಬರಡಿ, ರಾಜಶೇಖರ್ ಹೊಂಬರಡಿ, ಗಣೇಶ್ ಬಡಿಗೇರ್, ಬಸವರಾಜ್ ವಟ್ನಳ್ಳಿ, ಜಗದೀಶ ಶ್ವೀರಭದ್ರಪ್ಪ ಅಕ್ಕಿ, ಕೃಷಿ ಮೇಲ್ವಿಚಾರಕರಾದ ಪ್ರಕಾಶ್ ಗುಡಸಲಮನಿ, ಗಣೇಶ್ ನಾಯಕ್ ಸೇವಾ ಪ್ರತಿನಿಧಿಗಳಾದ ರೇಖಾ, ಅಂಬಿಕಾ ಸೇರಿದಂತೆ ಒಕ್ಕೂಟದ ಅಧ್ಯಕ್ಷರು ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.