ಗುಡ್ಡೆ ಕುಸಿತ; ಶಿರಾಡಿ ಘಾಟಲ್ಲಿ ವಾಹನ ಸಂಚಾರ ವ್ಯತ್ಯಯ

| Published : Jul 18 2024, 01:33 AM IST

ಗುಡ್ಡೆ ಕುಸಿತ; ಶಿರಾಡಿ ಘಾಟಲ್ಲಿ ವಾಹನ ಸಂಚಾರ ವ್ಯತ್ಯಯ
Share this Article
  • FB
  • TW
  • Linkdin
  • Email

ಸಾರಾಂಶ

ಈ ಮಧ್ಯೆ ಹೆದ್ದಾರಿ ಪಾರ್ಶ್ವದ ಬೆಟ್ಟ ಗುಡ್ಡಗಳಲ್ಲಿ ಜರಿತ ಕಂಡು ಬಂದಿದ್ದು, ಅಪಾಯದ ಭೀತಿಯನ್ನು ಎದುರಿಸಿಕೊಂಡೇ ವಾಹನವನ್ನು ಚಲಾಯಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ೭೫ರ ಬೆಂಗಳೂರು- ಮಂಗಳೂರು ನಡುವಣ ಶಿರಾಡಿ ಘಾಟ್ ಪರಿಸರದ ಕೆಲವೆಡೆ ಗುಡ್ಡೆ ಕುಸಿತದಿಂದ ಬುಧವಾರ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ. ಪರ್ಯಾಯ ರಸ್ತೆಯ ಮೂಲಕ ವಾಹನ ಸಂಚಾರ ಮುಂದುವರಿದಿದೆ.

ಸಕಲೇಶಪುರ ತಾಲೂಕಿನ ಹೆಗ್ಗದ್ದೆಯ ಅಲ್ಲಲ್ಲಿ ಭೂ ಕುಸಿತ ಆರಂಭವಾಗಿದ್ದು ಅಪಾಯದ ಮಟ್ಟವನ್ನು ಅವಲೋಕಿಸಿದ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಲಘು ವಾಹನಗಳಿಗೆ ಬದಲಿ ಮಾರ್ಗ ತೋರಿಸಲಾಗಿದೆ. ಭಾರಿ ಮಳೆಯಿಂದ ಘನ ವಾಹನಗಳನ್ನು ಹೆದ್ದಾರಿಯಲ್ಲೇ ಸಂಚಾರಕ್ಕೆ ಅನುವು ಮಾಡಿದ್ದು ಲಘು ವಾಹನಗಳನ್ನು ಕಾಡಮನೆ ಎಸ್ಟೇಟ್ ಮೂಲಕ ಹಾದು ಹೋಗಬೇಕಾದ ಅನಿವಾರ್ಯತೆ ಮೂಡಿದೆ.

ಸಕಲೇಶಪುರ ಠಾಣೆ ವ್ಯಾಪ್ತಿಯ ಮಾರನಹಳ್ಳಿ ಪೋಲಿಸರು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪರಿಸ್ಥಿತಿಗೆ ಅನುಗುಣವಾಗಿ ವಾಹನ ಸಂಚಾರವನ್ನು ನಿಭಾಯಿಸುತ್ತಿದ್ದಾರೆ. ಈ ಮಧ್ಯೆ ಹೆದ್ದಾರಿ ಪಾರ್ಶ್ವದ ಬೆಟ್ಟ ಗುಡ್ಡಗಳಲ್ಲಿ ಜರಿತ ಕಂಡು ಬಂದಿದ್ದು, ಅಪಾಯದ ಭೀತಿಯನ್ನು ಎದುರಿಸಿಕೊಂಡೇ ವಾಹನವನ್ನು ಚಲಾಯಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.