ಸಾರಾಂಶ
ಶಿಕಾರಿಪುರ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕನ್ನಡ ಬಾಷಾ ಶಿಕ್ಷಕರ ಕಾರ್ಯಾಗಾರವನ್ನು ಬಿಇಒ ಲೋಕೇಶಪ್ಪ ಉದ್ಘಾಟಿಸಿ₹ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶ ಬರುವಲ್ಲಿ ಕನ್ನಡ ಭಾಷಾ ಶಿಕ್ಷಕರ ಜವಾಬ್ದಾರಿ ಮಹತ್ವವಾಗಿದೆ ಎಂದು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ ತಿಳಿಸಿದರು.ಪಟ್ಟಣದ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬಾಪೂಜಿ ಎಜುಕೇಷನಲ್ ಸೊಸೈಟಿ (ರಿ) ವತಿಯಿಂದ ಆಯೋಜಿಸಲಾಗಿದ್ದ ತಾಲೂಕು ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ ಎಸ್ ಎಲ್ ಸಿ ತರಗತಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸುವಲ್ಲಿ ಕನ್ನಡ ಭಾಷಾ ಶಿಕ್ಷಕರ ಜವಾಬ್ದಾರಿ ಬಹಳಷ್ಟು ಪ್ರಮುಖವಾಗಿದೆ ಎಂದ ಅವರು, ಕನ್ನಡ ಭಾಷೆಯನ್ನು ಓದಲು, ಬರೆಯಲು ನಿಖರವಾಗಿ ವಿದ್ಯಾರ್ಥಿಯು ಕಲಿತರೆ ಇತರೆ ವಿಷಯ ಗಳಲ್ಲಿ ತೇರ್ಗಡೆ ಹೊಂದಲು ಅನುಕೂಲವಾಗುತ್ತದೆ. ಶಿಕ್ಷಕರು 8ನೇ ತರಗತಿಯಿಂದಲೇ ಎಲ್ಲಾ ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಗಮನ ವಹಿಸಿ ಮಾರ್ಗದರ್ಶನ ನೀಡಿದರೆ ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಫಲಿತಾಂಶ ನಿಶ್ಚಿತವಾಗಿ ಪಡೆಯಲು ಸಾಧ್ಯ ಎಂದವರು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ಎಜುಕೇಷನಲ್ ಸೊಸೈಟಿ ಸಂಸ್ಥಾಪಕ ಬಿ.ಪಾಪಯ್ಯ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ಉತ್ತಮ ಸಾಧನೆ ಮೂಲಕ ಗುರುತಿಸಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಮಾರ್ಗದರ್ಶನದಿಂದ ವಿದ್ಯಾರ್ಥಿಗಳ ಪರಿಶ್ರಮದಿಂದ ಇನ್ನೂ ಹೆಚ್ಚಿನ ಫಲಿತಾಂಶವನ್ನು ನಿರೀಕ್ಷಿಸುವುದಾಗಿ ತಿಳಿಸಿ ಈ ದಿಸೆಯಲ್ಲಿ ಇಲಾಖೆ ನಡೆಸುವ ಕಾರ್ಯಾಗಾರಕ್ಕೆ ಸಂಸ್ಥೆ ಸದಾ ಕಾಲ ಸಹಕಾರ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪವಿತ್ರ, ತಾ. ಕನ್ನಡ ಭಾಷಾ ಶಿಕ್ಷಕರ ಸಂಫದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಸಂಪನ್ಮೂಲ ವ್ಯಕ್ತಿ ಕರಿಬಸಪ್ಪ. ಎನ್.ಕೆ. ಡಾ.ವೀರೇಂದ್ರ ಕುಮಾರ ಎಸ್ ವಾಲಿ, ರಾಘವೇಂದ್ರ ಆರ್., ಫಿರೋಜ್, ಕರಿಬಸಪ್ಪ ಎಂ.ಡಿ., ಆರ್.ಎಸ್.ನಾಯ್ಕ, ನಾಗರಾಜಪ್ಪ, ಕಾರ್ಯದರ್ಶಿ ಸುರೇಶ ಬಿ,ರಾಜೀವ್, ಬಸವನಗೌಡ ಕೋಣ್ತಿ, ಇಸಿಓ ಗದಿಗೆಪ್ಪ, ನಟರಾಜ್ ಹಾಗೂ ತಾಲೂಕಿನ ವಿವಿಧ ಶಾಲೆಗಳ ಕನ್ನಡ ಭಾಷಾ ಶಿಕ್ಷಕರು ಉಪಸ್ಥಿತರಿದ್ದರು, ಸಂಜೆಯವರೆಗೂ ವಿವಿಧ ಗೋಷ್ಠಿಗಳು ನಡೆದವು