ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯತ್ತ ಗಮನಹರಿಸಬೇಕು. ಬೇಜವಾಬ್ದಾರಿಯನ್ನು ಬದಿಗಿಟ್ಟು, ಜವಾಬ್ದಾರಿಯುತ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಹೆಜ್ಜೆ ಹಾಕಬೇಕು. ಜೀವನದಲ್ಲಿ ದೊಡ್ಡ ಸಾಧನೆಗಳನ್ನು ಮಾಡುವ ಸಂಕಲ್ಪ ಹೊಂದಿರುವವರು ದಾರಿಯಲ್ಲಿ ಎದುರಾಗುವ ಸಣ್ಣಪುಟ್ಟ ಆಕರ್ಷಣೆಗಳಿಗೆ ಒಳಗಾಗದೆ ತಮ್ಮ ಗುರಿಯತ್ತ ಏಕಾಗ್ರತೆಯಿಂದ ಸಾಗಬೇಕು ಎಂದರು.
ಕನ್ನಡಪ್ರಭ ವಾರ್ತೆ ತುಮಕೂರು
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಭಾಷೆಯ ಮೇಲಿನ ಹಿಡಿತ ಮತ್ತು ಪರಿಣಾಮಕಾರಿ ಬರವಣಿಗೆಯ ಕೌಶಲ ಅತ್ಯಂತ ಅಗತ್ಯ. ನಿರಂತರ ಅಧ್ಯಯನ, ಓದು ಮತ್ತು ಅಭ್ಯಾಸದ ಮೂಲಕ ಭಾಷೆ ಹಾಗೂ ಬರವಣಿಗೆಯ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಪತ್ರಕರ್ತೆ ಹಾಗೂ ತುಮಕೂರು ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿನಿ ಕಾವ್ಯ ಎನ್. ಅವರು ಅಭಿಪ್ರಾಯಪಟ್ಟರು.ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ಜರ್ನೋವ- 2026 ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮದಲ್ಲಿ ಭಾಷೆಯ ಮೇಲಿನ ಹಿಡಿತ ಮಹತ್ವದ ಪಾತ್ರ ವಹಿಸುತ್ತದೆ. ವಿಷಯವನ್ನು ಸ್ಪಷ್ಟವಾಗಿ, ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಸಾಮರ್ಥ್ಯ ಬೆಳೆಸಿಕೊಂಡಾಗ ಮಾತ್ರ ಓದುಗರ ಗಮನ ಸೆಳೆಯಲು ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಅಧ್ಯಯನಕ್ಕೆ ಸೀಮಿತವಾಗದೆ, ದಿನಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ನಿರಂತರವಾಗಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.ಸುದ್ದಿ ಅಥವಾ ಘಟನೆಗಳನ್ನು ಕೇಳುಗರಿಗೆ ಮತ್ತು ವೀಕ್ಷಕರಿಗೆ ಸರಿಯಾದ ರೂಪದಲ್ಲಿ ತಲುಪಿಸುವುದು ಪತ್ರಕರ್ತರ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ನಡೆಯುವ ಘಟನೆಗಳ ವಾಸ್ತವಾಂಶಗಳನ್ನು ಅರಿತು, ಸತ್ಯವನ್ನು ಜನರಿಗೆ ತಲುಪಿಸುವುದೇ ಪತ್ರಿಕೋದ್ಯಮದ ಮೂಲ ಉದ್ದೇಶ. ಸುದ್ದಿಯ ಬರವಣಿಗೆಯಲ್ಲಿ ಸ್ಪಷ್ಟತೆ ಮತ್ತು ವಸ್ತುನಿಷ್ಠತೆಗೆ ಆದ್ಯತೆ ನೀಡಬೇಕು. ಪತ್ರಕರ್ತರು ಸತ್ಯಾಸತ್ಯತೆ ಪರಿಶೀಲಿಸದೆ ಯಾವುದೇ ಸುದ್ದಿಯನ್ನು ಪ್ರಕಟಿಸಬಾರದು ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ತರಗತಿಯ ಪಾಠಗಳ ಜೊತೆಗೆ ಪ್ರಾಯೋಗಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವರದಿಗಾರಿಕೆ, ಸುದ್ದಿ ಬರವಣಿಗೆ, ಸಂದರ್ಶನ, ಸಂಪಾದನೆ ಹಾಗೂ ವಿವಿಧ ಕಾರ್ಯಚಟುವಟಿಕೆಗಳನ್ನು ಕಲಿಯುವ ಮೂಲಕ ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ನಿರಂತರ ಕಲಿಕೆ ಮತ್ತು ಪರಿಶ್ರಮವು ಭವಿಷ್ಯದಲ್ಲಿ ಉತ್ತಮ ಪತ್ರಕರ್ತರಾಗಿ ರೂಪುಗೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.ವಿಭಾಗದ ಅಧ್ಯಕ್ಷರಾದ ಡಾ. ಸಿಬಂತಿ ಪದ್ಮನಾಭ ಕೆ.ವಿ. ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಎತ್ತರಕ್ಕೆ ಏರಿದಾಗ ಗುರುಗಳಿಗೆ ಆಗುವ ಸಂತೋಷಕ್ಕೆ ಮತ್ತೊಂದೂ ಸಾಟಿಯಿಲ್ಲ. ವಿದ್ಯಾರ್ಥಿಗಳ ಬೆಳವಣಿಗೆ ಮತ್ತು ಯಶಸ್ಸನ್ನು ಬಯಸುವವರೇ ನಿಜವಾದ ಗುರುಗಳು. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು, ಸ್ಪಷ್ಟವಾದ ಗುರಿಯನ್ನು ಹೊಂದಿರಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯತ್ತ ಗಮನಹರಿಸಬೇಕು. ಬೇಜವಾಬ್ದಾರಿಯನ್ನು ಬದಿಗಿಟ್ಟು, ಜವಾಬ್ದಾರಿಯುತ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಹೆಜ್ಜೆ ಹಾಕಬೇಕು. ಜೀವನದಲ್ಲಿ ದೊಡ್ಡ ಸಾಧನೆಗಳನ್ನು ಮಾಡುವ ಸಂಕಲ್ಪ ಹೊಂದಿರುವವರು ದಾರಿಯಲ್ಲಿ ಎದುರಾಗುವ ಸಣ್ಣಪುಟ್ಟ ಆಕರ್ಷಣೆಗಳಿಗೆ ಒಳಗಾಗದೆ ತಮ್ಮ ಗುರಿಯತ್ತ ಏಕಾಗ್ರತೆಯಿಂದ ಸಾಗಬೇಕು ಎಂದರು.ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ವಿಭಾಗದ ಉಪನ್ಯಾಸಕ ಡಾ. ಪೃಥ್ವಿರಾಜ ಟಿ., ಡಾ. ಸುಲೋಚನ ಜಿ. ಎಸ್., ವಿಷ್ಣುಧರನ್ ಇದ್ದರು.