ಭಾಷೆ ಯಾವುದಾದರೇನು ಭಾವ ಒಂದೇ ಎನ್ನುವಂತೆ ಮಹಾಯೋಗಿ ವೇಮನರು ತೆಲುಗಿನಲ್ಲಿ ವಚನ ರಚಿಸಿ ಮಹಾಕವಿಯಾಗಿದ್ದರೂ ಕನ್ನಡದಲ್ಲೂ ಅದೇ ಅರ್ಥ ನೀಡುತ್ತದೆ. ಭಾಷೆಯಿಂದಾಗಿ ಭಾವನೆ ದೂರ ಮಾಡಲು ಬರುವುದಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಶಿವಮೊಗ್ಗ: ಭಾಷೆ ಯಾವುದಾದರೇನು ಭಾವ ಒಂದೇ ಎನ್ನುವಂತೆ ಮಹಾಯೋಗಿ ವೇಮನರು ತೆಲುಗಿನಲ್ಲಿ ವಚನ ರಚಿಸಿ ಮಹಾಕವಿಯಾಗಿದ್ದರೂ ಕನ್ನಡದಲ್ಲೂ ಅದೇ ಅರ್ಥ ನೀಡುತ್ತದೆ. ಭಾಷೆಯಿಂದಾಗಿ ಭಾವನೆ ದೂರ ಮಾಡಲು ಬರುವುದಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ರೆಡ್ಡಿ ಸಂಘ ಶಿವಮೊಗ್ಗ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

15ನೇ ಶತಮಾನದಲ್ಲಿ ಮಹಾಕವಿ ಮತ್ತು ಮಹಾಯೋಗಿಯಾಗಿದ್ದ ಶ್ರೀ ವೇಮನರು ಮನುಕುಲದ ಏಳಿಗೆಗಾಗಿ ಶ್ರಮಿಸಿದರು. ಅವರು ಆಂಧ್ರದವರು ಅಂತ ನಮಗೆ ಅನ್ನಿಸುವುದೇ ಇಲ್ಲ. ಅವರು ಬೇರೆ ಭಾಷೆಯಲ್ಲಿ ವಚನ ರಚಿಸಿದ್ದರೂ. ಕನ್ನಡದಲ್ಲೂ ಅದೇ ಅರ್ಥ ನೀಡುತ್ತದೆ ಎಂದರು.ವೇಮನರಂತಹ ಮಹಾಪುರುಷರು ಮನುಕುಲದ ಉದ್ಧಾರಕ್ಕಾಗಿ ದೃಢ ಸಂಕಲ್ಪ ಹೊಂದಿ ಶ್ರಮಿಸಿದ್ದಾರೆ. ಯಾವುದೇ ಸಾಧನೆಗೆ ತಪಸ್ಸು ಮತ್ತು ದೃಢ ಮನಸ್ಸು ಬೇಕು. ಇಂತಹ ಮಹಾಪುರುಷರು ತಮ್ಮ ನಡೆ-ನುಡಿ, ಸಂಸ್ಕೃತಿ, ಪರಂಪರೆಯಿಂದಾಗಿ ರಾಷ್ಟ್ರಕ್ಕೆ ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.ನಮ್ಮ ಪರಂಪರೆ, ಸಂಸ್ಕೃತಿ, ನೆಲೆಗಟ್ಟು ಏನೆಂದು ತಿಳಿಸಿದ್ದಾರೆ. ನಮ್ಮ ದೇಶ ಹಲವಾರು ಬಾರಿ ದಾಳಿಗೊಳಗಾದರೂ ಉಳಿಯಲು ಕಾರಣ ಇಂತಹ ಸಾಧಕರಾಗಿದ್ದಾರೆ. ಇಂತಹ ಮಹಾನ್ ಕವಿಗಳ ಜೀವನ ಚರಿತ್ರೆಯನ್ನು ಯುವಜನತೆಗೆ ತಿಳಿಸುವ ಮತ್ತು ನಾವು ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು. ಜಿಲ್ಲಾ ರೆಡ್ಡಿ ಸಂಘದ ಉಪಾಧ್ಯಕ್ಷ ಮೋಹನ್ ರೆಡ್ಡಿ ಮಾತನಾಡಿ, ೧೫ನೇ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ ಮಹಾಯೋಗಿ ವೇಮನರು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದರು. ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್‌ನಂತೆ ಆಂಧ್ರದಲ್ಲಿ ವೇಮನವರು ಮಹಾಕವಿಯಾಗಿದ್ದಾರೆ ಎಂದು ಸ್ಮರಿಸಿದರು.

ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಾಗಿರುವ ನಮ್ಮ ಸಮುದಾಯ ಒಗ್ಗಟ್ಟಾಗಬೇಕು ಹಾಗೂ ವೇಮನರ ತತ್ವಾದರ್ಶಗಳನ್ನು ಯುವಜನತೆಗೆ ತಲುಪಿಸುವಂತಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸೂಡಾ ಮಾಜಿ ಅಧ್ಯಕ್ಷ ಜ್ಞಾನೇಶ್ವರ್, ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಉಮೇಶ್ , ಸಮಾಜದ ಮುಖಂಡರು, ಅಧಿಕಾರಿಗಳು ಹಾಜರಿದ್ದರು.