ಭಾಷೆ-ಸಂಸ್ಕೃತಿ ತುಳುನಾಡಿನ ಶ್ರೀಮಂತಿಕೆಯ ಹೆಗ್ಗುರುತು: ಡಿಸಿ ವಿದ್ಯಾಕುಮಾರಿ

| Published : Feb 26 2024, 01:35 AM IST

ಭಾಷೆ-ಸಂಸ್ಕೃತಿ ತುಳುನಾಡಿನ ಶ್ರೀಮಂತಿಕೆಯ ಹೆಗ್ಗುರುತು: ಡಿಸಿ ವಿದ್ಯಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ತುಳುಕೂಟ ಉಡುಪಿ ವತಿಯಿಂದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಲಯನ್ಸ್‌ ಕ್ಲಬ್ ಉಡುಪಿ ಅಮೃತ್ ಆಶ್ರಯದಲ್ಲಿ ಕ್ರಿಶ್ಚಿಯನ್ ಪ್ರೌಢಶಾಲೆಯಲ್ಲಿ ವಾರ್ಷಿಕ ‘ತುಳುವರೆ ಗೊಬ್ಬುಲು ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಉದ್ಘಾಟಿಸಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಉಡುಪಿತುಳುನಾಡಿನ ಸಂಸ್ಕೃತಿಯಷ್ಟು ವೈವಿಧ್ಯಪೂರ್ಣವಾದ ಸಂಸ್ಕೃತಿ ಬೇರೆ ಇಲ್ಲ, ಇಲ್ಲಿರುವ ಪಾಡ್ದನ, ನಾಗಾರಾಧನೆ, ಭೂತಕೋಲದಂತಹ ಆಚರಣೆಗಳಿಂದ ತುಳುವರ ಬದುಕು ವೈಶಿಷ್ಟ್ಯಪೂರ್ಣವಾಗಿದೆ. ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ತುಳುವರ ಮೇಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.ತುಳುಕೂಟ ಉಡುಪಿ ವತಿಯಿಂದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಲಯನ್ಸ್‌ ಕ್ಲಬ್ ಉಡುಪಿ ಅಮೃತ್ ಆಶ್ರಯದಲ್ಲಿ ಭಾನುವಾರ ನಗರದ ಕ್ರಿಶ್ಚಿಯನ್ ಪ್ರೌಢಶಾಲೆಯಲ್ಲಿ ವಾರ್ಷಿಕ ‘ತುಳುವರೆ ಗೊಬ್ಬುಲು - 2024ನ್ನು ಉದ್ಘಾಟಿಸಿ ಮಾತನಾಡಿದರು.ತುಳುನಾಡಿವರಾದ ಅವರು ತುಳುವಿನಲ್ಲಿಯೇ ಮಾತನಾಡುತ್ತಾ, ತುಳು ಭಾಷೆ ಮತ್ತು ಸಂಸ್ಕೃತಿ ತು‍ಳು ನೆಲದ ಶ್ರೀಮಂತಿಕೆಯ ಹೆಗ್ಗುರುತಾಗಿದೆ. ಉಡುಪಿ ತುಳುಕೂಟವು ಈ ಭಾಷೆ, ಸಂಸ್ಕೃತಿಯ ಮುನ್ನಡೆಗಾಗಿ ಹತ್ತಾರು ವರ್ಷಗಳಿಂದ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ಈ ಮೂಲಕ ಭಾಷೆ ಸಂಸ್ಕೃತಿಯ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ ಎಂದವರು ಶ್ಲಾಘಿಸಿದರು.ಪಂಚ ದೀವಟಿಗೆಯನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ, ಸ್ವತಃ ಗೇರು ಬೀಜದ ಆಟವನ್ನು ಆಡಿ ಸ್ಪರ್ಧೆಗಳಿಗೆ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ವಹಿಸಿದ್ದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಹರಿಪ್ರಸಾದ್ ರೈ, ನಿರುಪಮಾ ಪ್ರಸಾದ್ ಶೆಟ್ಟಿ, ಕೆ. ಸತ್ಯೇಂದ್ರ ಪೈ, ಲಯನ್ಸ್‌ ಕ್ಲಬ್ ಅಧ್ಯಕ್ಷೆ ಭಾರತಿ ಹರೀಶ್ ಸುವರ್ಣ, ಕ್ರಿಶ್ಚಿಯನ್ ಪ್ರೌಢಶಾಲೆ ಮುಖ್ಯಶಿಕ್ಷಕಿ ಜಾಯ್ಲಿನ್ ಪರಿಮಳ ಕರ್ಕಡ, ತುಳುಕೂಟ ಕೋಶಾಧಿಕಾರಿ ಎಂ.ಜಿ. ಚೈತನ್ಯ ಉಪಸ್ಥಿತರಿದ್ದರು. ತುಳುಗೊಬ್ಬಲು ಕಾರ್ಯಕ್ರಮದ ಸಂಚಾಲಕ ಮಹಮ್ಮದ್ ಮೌಲ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ್ ಕಿದಿಯೂರು ವಂದಿಸಿದರು.ತುಳುನಾಡಿನ ಸಂಸ್ಕೃತಿಯಂತೆ ಜಿಲ್ಲಾಧಿಕಾರಿ ಮತ್ತು ಅತಿಥಿ ಗಣ್ಯರನ್ನು ಬೆಲ್ಲ ನೀರು ಕೊಟ್ಟು ಬರ ಮಾಡಿಕೊಳ್ಳಲಾಯಿತು, ವೇದಿಕೆಯಲ್ಲಿ ವೀಳ್ಯ ನೀಡಿ ಸ್ವಾಗತಿಸಲಾಯಿತು. ಮರದ ನೊಗದ ಪ್ರತಿಕೃತಿ ನೀಡಿ ಸನ್ಮಾನಿಸಲಾಯಿತು.