ಕೊಡವ ಹಾಗೂ ಇನ್ನಿತರ ಸ್ಥಳೀಯ ಭಾಷೆ ನಮ್ಮ ಉಸಿರಾದರೆ ಕನ್ನಡ ನಮ್ಮ ಹಸಿರು. ಈ ಹಸಿರು ಮತ್ತು ಉಸಿರು ಒಂದಾದಾಗ ಮಾತ್ರ ಕನ್ನಡ ಮಾತ್ರ ಕರ್ನಾಟಕ ಪೂರ್ಣವಾಗುತ್ತದೆ ಎಂದು ಸಾಹಿತಿ, ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡವ ಹಾಗೂ ಇನ್ನಿತರ ಸ್ಥಳೀಯ ಭಾಷೆ ನಮ್ಮ ಉಸಿರಾದರೆ ಕನ್ನಡ ನಮ್ಮ ಹಸಿರು. ಈ ಹಸಿರು ಮತ್ತು ಉಸಿರು ಒಂದಾದಾಗ ಮಾತ್ರ ಕನ್ನಡ ಮಾತ್ರ ಕರ್ನಾಟಕ ಪೂರ್ಣವಾಗುತ್ತದೆ ಎಂದು ಸಾಹಿತಿ, ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಹೇಳಿದರು.

ಕಡಂಗ ಗ್ರಾಮದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡಗು ಎಂದರೆ ಕೇವಲ ಮಂಜು ಮುಸುಕಿದ ಬೆಟ್ಟಗಳಲ್ಲ . ಕೇವಲ ಕಾಫಿ ತೋಟಗಳ ಘಮಲಲ್ಲ. ಬದಲಾಗಿ ಅದು ಕನ್ನಡದ ಅಸ್ಮಿತೆಯನ್ನು ತನ್ನ ಎದೆಯಾಳದಲ್ಲಿ ಅಚ್ಚೊತ್ತಿಕೊಂಡಿರುವ ವೀರಭೂಮಿ, ಒಂದು ಭಾಷೆಲಿಪಿಯಿಂದ ಬೆಳೆಯಬೇಕೇ ಹೊರತು ಬಾಷೆಯಿಂದ ಲಿಪಿಯನ್ನು ಬೆಳೆಸಲು ಸಾಧ್ಯವಿಲ್ಲ. ನಮ್ಮ ಮಕ್ಕಳಲ್ಲಿ ಕನ್ನಡದ ಬಗ್ಗೆ ಜಾಗೃತಿ ಹಾಗೂ ಪ್ರೀತಿ ಮೂಡಿಸುವ ಕೆಲಸವನ್ನು ಪೋಷಕರು ತೆಗೆದುಕೊಳ್ಳಬೇಕಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂಪಿ ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ನಾಡು, ನುಡಿ , ಆಚಾರ, ವಿಚಾರ , ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಗಳನ್ನು ಆಯೋಜಿಸುತ್ತಿದೆ ಎಂದರು.

ಅಭಿಮಾನ ಸ್ವಾಭಿಮಾನ ಬೆಳೆಸಿಕೊಳ್ಳಬೇಕು:

ವಿಧಾನಸಭೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡದ ಬಗ್ಗೆ ಹೆಚ್ಚು ಅಭಿಮಾನ ಸ್ವಾಭಿಮಾನವನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕನ್ನಡ ಭಾಷೆಗೆ ಅಭಿಮಾನ, ಗೌರವ ಸಿಗುತ್ತಿದೆ. ನಗರ ಪ್ರದೇಶದಲ್ಲಿ ಕನ್ನಡ ಎಂದರೆ ತಾತ್ಸಾರ ಭಾವನೆ ಇದೆ . ಇದನ್ನು ಸರಿಪಡಿಸುವ ಕೆಲಸ ಆಗಬೇಕಿದೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಶೇಖರ್ ಅವರು ಲೇಖಕ ಮೊಹಮದ್ ನಿಝಾರ್ ಸಖಾಫಿ ಬರೆದ ಪುಸ್ತಕ ‘ಕಡಂಗದ ನೆನಪಿನಂಗಳದಲ್ಲಿ’ ಬಿಡುಗಡೆಗೊಳಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ ಪಿ ರಮೇಶ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಕನ್ನಡ ಭಾಷಾ ಬೋಧನೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕಿದೆ. ಜೀವನಕ್ಕೆ ,ಉದ್ಯೋಗಕ್ಕೆ ಇಂಗ್ಲಿಷ್ ಭಾಷೆ ಅನಿವಾರ್ಯವಾದರೂ ಮಾತೃಭಾಷೆ ಕಡೆಗಣಿಸಬಾರದು ಎಂದರು.

ಕವಿಗೋಷ್ಠಿ:

ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಸಾಹಿತಿ ಮಾರುತಿ ದಾಸಣ್ಣನವರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 13 ಮಂದಿ ಕವಿಗಳು ಕವನ ವಾಚಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಬಿಟ್ಟಿರ ಚೋಧಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಚೇನಂಡ ಪಾರ್ವತಿ, ಸಹಕಾರ ಕ್ಷೇತ್ರದಲ್ಲಿ ಪಾಂಡಂಡ ಕಿಟ್ಟು ಅಯ್ಯಣ್ಣ, ಸಮಾಜ ಸೇವೆಯಲ್ಲಿ ಎಚ್.ಎಲ್. ದಿವಾಕರ, ಜನಪದ ಕ್ಷೇತ್ರದಲ್ಲಿ ನಂಬಿಯಪಂಡ ಕರುಂಬಯ್ಯ, ಕೃಷಿ ಕ್ಷೇತ್ರದಲ್ಲಿ ದೇಯಿರ ಸುಭಾಷ್ ಭೀಮಯ್ಯ, ಸೇನೆಯಲ್ಲಿ ಕ್ಯಾಪ್ಟನ್ ಬಿದ್ದಂಡನಾಣಿ ದೇವಯ್ಯ, ರಕ್ಷಣೆಯಲ್ಲಿ ಬಿ.ಎ ಅಬ್ದುಲ್ ಸಲಾಂ , ಪತ್ರಕರ್ತ ದುಗ್ಗಳ ಸದಾನಂದ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಎಚ್.ಎಸ್.ಉರಾಳ, ನಾಟಿ ವೈದ್ಯ ನಂದಕುಮಾರ್ ಪಡಿಚಾರಮಂಡ, ಜನಪದ ಪರಿಕರ ಕ್ಷೇತ್ರದಲ್ಲಿ ಪೊನ್ನಚ್ಚನ ಮಧುಸೂದನ್, ಹಾಕಿಪಟು ಪಾಂಡಂಡ ರಾಜೇಶ್ ಅಯ್ಯಪ್ಪ , ಕ್ರೀಡೆಯಲ್ಲಿ ಪಟ್ಟಚೆರವಂಡ ಗಗನ್ ವೇದಪ್ಪ ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನದ ಅಂಗವಾಗಿ ದಿ.ಪಾಂಡಂಡಕುಟ್ಟಣಿ ಸಭಾ ಮಂಟಪದ ಮುಂಭಾಗ ಕಸಾಪ ಹಣಕಾಸು ಸಮಿತಿ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಕಸಾಪ ಧ್ವಜಾರೋಹಣ ಮಾಡಿದರು.

11 ನೆನಪಿನ ದ್ವಾರಗಳನ್ನು ನಿರ್ಮಿಸಲಾಗಿದ್ದು ಬೆಳಗ್ಗೆ ಉದ್ಘಾಟಿಸಲಾಯಿತು. ಕುಲ್ಲಚಂಡ ದಿ. ಲಾಲುಮೇದಯ್ಯ ಮತ್ತು ಬಿ ದೇವಕ್ಕ ನೆನಪಿನ ಪ್ರವೇಶ ದ್ವಾರ, ದೇಯಿರ ಕುಟುಂಬಸ್ಥರ ನೆನಪಿನ ಪ್ರವೇಶ ದ್ವಾರ, ಮೇದುರ ದಿ. ನಂಜಪ್ಪ ಹಾಗೂ ದಿ. ಸೀತಮ್ಮ ನೆನಪಿನ ಪ್ರವೇಶ ದ್ವಾರ ಕೋಡಿರ ದಿ. ಮುತ್ತಣ್ಣ ಹಾಗೂ ದಿ.ಸುನಂದಿ ಮುತ್ತಣ್ಣ ನೆನಪಿನ ಪ್ರವೇಶ ದ್ವಾರ, ಚಲ್ಮಂಡ ದಿ. ಸುಬ್ಬಯ್ಯ ಹಾಗೂ ದಿ.ಕಾಮವ್ವ ನೆನಪಿನ ಪ್ರವೇಶ ದ್ವಾರ, ನಂಬಿಯಪಂಡ ದಿ.ಅಪ್ಪಣ್ಣ ನೆನಪಿನ ಪ್ರವೇಶ ದ್ವಾರ, ಮುಕ್ಕಾಟಿರ ದಿ.ಚಂಗಪ್ಪ ಹಾಗೂ ಡಿ ಕಾಂಜೀವ ನೆನಪಿನ ಪ್ರವೇಶ ದ್ವಾರ 11ಯ ನೆನಪಿನ ಪ್ರವೇಶ ದ್ವಾರ 11ರಡಿ ಉತ್ತಪ್ಪ ಹಾಗೂ ದಿ.ಪಾರ್ವತಿ ನೆನಪಿನ ಪ್ರವೇಶ ದ್ವಾರ, ದಿ. ಪಾಲಚಂಡ ಮಿಟ್ಟು ಕಾವೇರಪ್ಪ ಹಾಗೂ ದಿ. ಬೋಜಕ್ಕಿ ನೆನಪಿನ ಪ್ರವೇಶ ದ್ವಾರಗಳನ್ನು ಗಣ್ಯರು ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬಳಿಕ ವಿವಿಧ ಕಲಾತಂಡಗಳ ಉದ್ಘಾಟನೆ ನೆರವೇರಿತು. ಬಳಿಕ ಮುಖ್ಯದ್ವಾರ, ಪುಸ್ತಕ ಮಳಿಗೆ, ಸ್ತ್ರೀ ಶಕ್ತಿ ಮಳಿಗೆ ಸಭಾಂಗಣ ಮತ್ತು ವೇದಿಕೆ ಉದ್ಘಾಟನೆ ನೆರವೇರಿತು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ, ಸ್ವಾಗತಸಮಿತಿಯ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ನರಿಯಂದಡ ಪಿಡಿಒ ಆಶಾ ಕುಮಾರಿ , ಗೌರವ ಕಾರ್ಯದರ್ಶಿಗಳಾದ ಎಸ್.ಐ ಮುನೀರ್ ಅಹಮದ್, ಪುದಿಯ ನೆರವನ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಎನ್ ದೇವರಾಜು, ಬಿ. ಎಂ ವಾಸು ರೈ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಟಿ ವಿಜೇತ್, ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ರಾಜೇಶ್ ಪದ್ಮನಾಭ, ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೆರವಂಡ ಉಮೇಶ್, ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಉಪಸ್ಥಿತರಿದ್ದರು.