ಸಾರಾಂಶ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕನ್ನಡ ನುಡಿ ಹಬ್ಬ 2024 ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಭಾಷೆ ನಮ್ಮ ಬದುಕಿನ ವಿಸ್ತರಣೆಯಾಗಿದೆ ಒಂದಕ್ಕೊಂದು ಪೂರಕವಾಗಿದೆ ಎಂದು ಕವಯಿತ್ರಿ ಸವಿತಾ ನಾಗಭೂಷಣ ಹೇಳಿದ್ದಾರೆ.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಏರ್ಪಡಸಿದ್ದ ಕನ್ನಡ ನುಡಿಹಬ್ಬ-2024 ಉದ್ಘಾಟಿಸಿ ಮಾತನಾಡಿದರು. ಜಗತ್ತಿನಲ್ಲಿ ಹತ್ತು ಹಲವು ಭಾಷೆಗಳಿರಬಹುದು. ಆದರೆ ಪ್ರತಿಯೊಬ್ಬರಿಗೂ ಹೃದಯದ ಭಾಷೆ ಒಂದು ಇರುತ್ತದೆ. ಅದು ನಮ್ಮ ತಾಯಿನುಡಿಯಿಂದ ನಮಗೆ ಧಕ್ಕುತ್ತದೆ. ಈ ಭಾಷೆಯನ್ನು ನಾವು ಕಾಪಿಟ್ಟುಕೊಂಡರೆ, ಅದು ನಮ್ಮನ್ನು ಬದುಕಿನುದ್ದಕ್ಕೂ ಪೋಷಿಸುತ್ತದೆ ಎಂದು ತಿಳಿಸಿದರು.
ಪ್ರಕೃತಿಯಲ್ಲಿ ಮೌನ, ಬೆಳಗು, ಕತ್ತಲು ಎಲ್ಲವೂ ಒಂದೊಂದು ಭಾಷೆಗಳು. ಆ ಮೂಲಕ ಅವುಗಳು ನಮಗೆ ಬೇರೆ ಬೇರೆ ಸೂಚನೆ ಕೊಡುತ್ತವೆ. ಇಂದು ಅದೇ ಸೂಚನೆಗಳು ಹಲವು ಭಾಷೆಗಳಾಗಿ ವಿಕಾಸಗೊಂಡಿವೆ. ನಾವು ಎಷ್ಟು ಭಾಷೆ ಗಳನ್ನಾದರೂ ಕಲಿಯಬಹುದು. ಆದರೆ ನಮ್ಮ ನುಡಿಯನ್ನು ಮರೆಯಬಾರದು. ಇಂದು ಹಲವು ಕಲಬೆರಕೆ ನಡುವೆ ನಮ್ಮ ನುಡಿ ಮರೆಯಾಗ ತೊಡಗಿದೆ. ಈ ಬಗ್ಗೆ ಎಚ್ಚರ ವಹಿಸಿ ದಿನ ಬಳಕೆ ಪದಗಳನ್ನು ಉಳಿಸಿಕೊಂಡು ಕನ್ನಡವನ್ನು ಪೊರೆಯ ಬೇಕಾಗಿದೆ, ಭಾಷೆ ನಮ್ಮ ಬದುಕಿನ ವಿಸ್ತರಣೆಯಾಗಿದ್ದು ಒಂದೊಕ್ಕೊಂದು ಪೂರಕವಾಗಿದೆ ಎಂದು ಹೇಳಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಬಿತಾ ಬನ್ನಾಡಿ ಮಾತನಾಡಿ ಕನ್ನಡ ನಮ್ಮ ಅಸ್ಮಿತೆಯಾಗಿದ್ದು ಅದು ಒಗ್ಗೂಡಿ ಬದುಕುವ ಸಮನ್ವಯತೆ ಪ್ರತೀಕವೂ ಆಗಿದೆ ಎಂದು ಹೇಳಿದರು.ಪ್ರಾಂಶುಪಾಲ ಡಾ. ಮಂಜುನಾಥ .ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದಾಗಿದ್ದು, ಅತ್ಯಂತ ಶ್ರೀಮಂತ ಇತಿಹಾಸ ಹೊಂದಿದೆ. ಇದನ್ನು ಉಳಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಹೇಳಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವರುದ್ರಪ್ಪ ಸಂವಿಧಾನ ದಿನದ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಅಧೀಕ್ಷಕ ಮಂಜುನಾಥ ಬಿ.ಎ ಮತ್ತು ತಂಡ ಹಾಗೂ ವಿದ್ಯಾರ್ಥಿಗಳಿಂದ ಕನ್ನಡ ಗೀತಗಾಯನ ನಡೆಯಿತು.
ಕಾರ್ಯಕ್ರಮವನ್ನು ಬೀಸುವ ಕಲ್ಲಿನಲ್ಲಿ ರಾಗಿ ಬೀಸುವ ಮೂಲಕ ಉದ್ಘಾಟಿಸಲಾಯಿತು. ಐ.ಕ್ಯು.ಎ.ಸಿ ಸಂಚಾಲಕರಾದ ಕಿರಣ್ ಜೆ, ಕನ್ನಡ ಉಪನ್ಯಾಸಕಿ ಗೀತಾ ಎಮ್.ಎಸ್. ದತ್ತಾತ್ರೇಯ ಟಿ ಎಲ್. ಸುಪ್ರಿತ ಟಿ.ಎಸ್., ನಯನ , ಸಂಪತ್ ಕುಮಾರ್ .ಎಚ್ ಉಪಸ್ಥಿತರಿದ್ದರು.27ಕೆಟಿಆರ್.ಕೆ.3ಃ
ತರೀಕೆರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಡೆದ ಕನ್ನಡ ನುಡಿ ಹಬ್ಬ-2024 ಉದ್ಘಾಟನೆಯನ್ನು ಶಿವಮೊಗ್ಗಕವಯಿತ್ರಿ ಸವಿತಾ ನಾಗಭೂಷಣ ನೆರವೇರಿಸಿದರು. ಪ್ರಾಂಶುಪಾಲ ಡಾ. ಮಂಜುನಾಥ .ಟಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಬಿತಾ ಬನ್ನಾಡಿ ಮತ್ತಿತರರು ಇದ್ದರು.