ಸರ್ವತೋಮುಖ ಅಭಿವೃದ್ಧಿಗೆ ಭಾಷೆ ಅವಶ್ಯ

| Published : Nov 11 2024, 01:05 AM IST / Updated: Nov 11 2024, 01:06 AM IST

ಸಾರಾಂಶ

ಹೊಳೆಹೊನ್ನೂರು ಸಮೀಪದ ಜಾವಳ್ಳಿಯ ಜ್ಞಾನದೀಪ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಕಾಂತ ಎಂ.ಹೆಗಡೆ

ಹೊಳೆಹೊನ್ನೂರು

ಮಾತೃಭಾಷೆಯು ಎಲ್ಲರಿಗೂ ಸಂವಹನ ಮಾಧ್ಯಮವಾಗಿದೆ. ಮಗು ಸಮರ್ಪಕವಾಗಿ ಬೆಳೆಯಲು ಮತ್ತು ಎಲ್ಲ ರೀತಿಯ ಸರ್ವತೋಮುಖ ಅಭಿವೃದ್ಧಿಯಾಗಲು ಭಾಷೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಾಂಶುಪಾಲ ಶ್ರೀಕಾಂತ್ ಎಂ.ಹೆಗಡೆ ಹೇಳಿದರು.

ಪಟ್ಟಣ ಸಮೀಪದ ಜಾವಳ್ಳಿಯ ಜ್ಞಾನದೀಪ ವಿದ್ಯಾ ಸಂಸ್ಥೆ ಆವರಣದಲ್ಲಿ ನಡೆದ ಸೀನಿಯರ್ ಸೆಕೆಂಡರಿ ಶಾಲೆ ಹಾಗೂ ಚನ್ನಗಿರಿ, ಶಿವಮೊಗ್ಗ, ಭದ್ರಾವತಿ, ಕೈಮರ ಮತ್ತು ಗುರುಪುರದಲ್ಲಿರುವ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಾಥಮಿಕ ಹಂತದಲ್ಲಿ ಮಗುವಿಗೆ ಮಾತೃ ಭಾಷೆಯಲ್ಲಿಯೇ ಕಲಿಕೆ ಆರಂಭಿಸಬೇಕು. ಆಗ ಮಗುವು ಮಾತೃ ಭಾಷೆಯ ನಡೆ ನುಡಿ ಕಲಿತು ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯವಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಭಾಷೆ ವೈವಿಧ್ಯತೆ ಇದೆ. ನಾನಾ ಪ್ರದೇಶಗಳಿಗೆ ತಕ್ಕಂತೆ ಭಾಷೆಯ ವಿವಿಧ ರೀತಿಯ ಉಚ್ಛಾರಣೆ ಇರುತ್ತದೆ. ಧನಾತ್ಮಕ ಚಿಂತನೆಗೆ ಭಾಷೆಯು ಅಗತ್ಯವಾಗಿದೆ. ಪ್ರತಿಯೊಂದು ಮಗುವು ಉತ್ತಮವಾಗಿ ಭಾಷೆ ಕಲಿಯುವುದರ ಮೂಲಕ ಸಮರ್ಪಕವಾಗಬೇಕು ಎಂದು ಹೇಳಿದರು.

ಶಾಲೆಯ ಸಹಶಿಕ್ಷಕಿ ಎನ್.ಶೃತಿ ಅವರು ಕನ್ನಡ ರಾಜ್ಯೋತ್ಸವ ಆಚರಣೆಯ ಮಹತ್ವ ಕುರಿತು ಮಾತನಾಡಿದರು. ಶಾಲೆಯ ಹಿರಿಯ ಉಪ ಪ್ರಾಂಶುಪಾಲ ಡಾ.ರೆಜಿ ಜೋಸೆಫ್, ಉಪ ಪ್ರಾಂಶುಪಾಲರಾದ ವಾಣಿ ಕೃಷ್ಣಪ್ರಸಾದ್, ಸಹ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿ ಅನೇಕರಿದ್ದರು.

ಈ ವೇಳೆ ವಿದ್ಯಾರ್ಥಿಗಳು ಸ್ವರಚಿತ ಕವನಗಳನ್ನು ವಾಚಿಸಿದರು. 6ನೇ ತರಗತಿಯ ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ಬಿಂಬಿಸುವ ನೃತ್ಯ ರೂಪಕ ಪ್ರದರ್ಶನ ಮಾಡಿದರು.