ಕನ್ನಡಪ್ರಭ ವಾರ್ತೆ ಬೆಳಗಾವಿ ಭಾಷೆಯೂ ಜೀವಂತ ಪದಾರ್ಥವಾಗಿದ್ದು, ಅದು ನಮ್ಮ ಬದುಕಿನ ಪ್ರತಿಯೊಂದು ಅನುಭವದ ಜೀವಾಳ. ಆದ್ದರಿಂದ ಭಾಷೆಯನ್ನು ಬಹಳ ಮುತುವರ್ಜಿಯಿಂದ ಮತ್ತು ಮನಸ್ಸಿನಿಂದ ಬಳಸಬೇಕು. ಕೇವಲ ತಾಂತ್ರಿಕವಾಗಿ ಭಾಷೆಯನ್ನು ಬಳಸುವುದರಿಂದ ಸೃಜನಶೀಲತೆ ಅರಳುವುದಿಲ್ಲ ಎಂದು ಸಂಸ್ಕೃತಿ ಚಿಂತಕಿ ಲಕ್ಷ್ಮೀ ಶತೋಳ್ಪಾಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಭಾಷೆಯೂ ಜೀವಂತ ಪದಾರ್ಥವಾಗಿದ್ದು, ಅದು ನಮ್ಮ ಬದುಕಿನ ಪ್ರತಿಯೊಂದು ಅನುಭವದ ಜೀವಾಳ. ಆದ್ದರಿಂದ ಭಾಷೆಯನ್ನು ಬಹಳ ಮುತುವರ್ಜಿಯಿಂದ ಮತ್ತು ಮನಸ್ಸಿನಿಂದ ಬಳಸಬೇಕು. ಕೇವಲ ತಾಂತ್ರಿಕವಾಗಿ ಭಾಷೆಯನ್ನು ಬಳಸುವುದರಿಂದ ಸೃಜನಶೀಲತೆ ಅರಳುವುದಿಲ್ಲ ಎಂದು ಸಂಸ್ಕೃತಿ ಚಿಂತಕಿ ಲಕ್ಷ್ಮೀ ಶತೋಳ್ಪಾಡಿ ಹೇಳಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಸಂಘ ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ: ಮೌಲ್ಯ ವಿಷಯದ ಕುರಿತು ಉಪನ್ಯಾಸ ನೀಡಿದರು. ಸಾಹಿತ್ಯ ಮತ್ತು ತತ್ವಜ್ಞಾನಕ್ಕೆ ಸಮಾನ ಸ್ಥಾನವಿದೆ. ಭಾಷೆಯು ಇವೆರಡರ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. ಅದರ ಪ್ರತಿಯೊಂದು ಅಕ್ಷರವೂ ಬದುಕಿಗೆ ಆಧಾರವಾಗಿದೆ ಎಂದರು.ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಮಾತನಾಡಿ, ಇಂದಿನ ದಿನಗಳಲ್ಲಿ ನಾವು ಸಹಜತೆಯನ್ನು ಮರೆತು ಕೃತಕ ಬುದ್ಧಿಮತ್ತೆಯ ಹಿಂದೆ ಓಡುತ್ತಿದ್ದೇವೆ. ನಮ್ಮ ಮನಸ್ಸು ಮತ್ತು ಬದುಕಿನ ಅಂತರಾಳವನ್ನು ಶೋಧಿಸಿಕೊಳ್ಳುವ ಅಗತ್ಯವಿದೆ. ಅಂತಹ ಆತ್ಮಾವಲೋಕನದ ದಾರಿಯನ್ನು ತೋರಿದ ಲಕ್ಷ್ಮೀ ಶತೋಳ್ಪಾಡಿ ಅವರಿಗೆ ವಿಶ್ವವಿದ್ಯಾಲಯ ಕೃತಜ್ಞವಾಗಿರುವುದಾಗಿ ತಿಳಿಸಿದರು.ಕನ್ನಡ ಸಂಘದ ಅಧ್ಯಕ್ಷ ಡಾ.ಗಜಾನನ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಂಡಿಕೇಟ್ ಸದಸ್ಯ ಪ್ರೊ.ಎಸ್.ಎಸ್.ಅಂಗಡಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಗಂಗಾಧರ, ಕನ್ನಡ ಸಂಘದ ಸದಸ್ಯ ಕಾರ್ಯದರ್ಶಿ ಡಾ.ಹನುಮಂತಪ್ಪ ಸಂಜೀವಣ್ಣನವರ, ಉಪಾಧ್ಯಕ್ಷ ಡಾ.ಕನಕಪ್ಪ ಪೂಜಾರ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.