ನಾಡ ಭಾಷೆ ಕನ್ನಡ ನಮ್ಮ ಉಸಿರಾಗಬೇಕಿದೆ: ಎಡೀಸಿ ಡಾ.ಎನ್. ಭಾಸ್ಕರ್

| Published : Nov 09 2024, 01:01 AM IST

ಸಾರಾಂಶ

ಸೋಷಿಯಲ್ ಮೀಡಿಯಾ ಹಾವಳಿಯಿಂದ ನೈಜ ಪತ್ರಿಕೋದ್ಯಮ ಕಳೆದುಹೋಗುತ್ತಿದೆ. ಓದುಗರ ಸಂಖ್ಯೆ ಇಳಿಮುಖವಾಗಿದ್ದರೂ ಕೂಡ ಮುದ್ರಣ ಮಾಧ್ಯಮಕ್ಕಿರುವ ಕಿಮ್ಮತ್ತು ಇಂದಿಗೂ ಹಾಗೇ ಇದೆ. ಪತ್ರಕರ್ತರು ಸಾಮಾಜಿಕ ಹೊಣೆಗಾರಿಕೆ ಹೊರಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಗಡಿನಾಡ ಜಿಲ್ಲೆಗಳಾದ ಕೋಲಾರ- ಚಿಕ್ಕಬಳ್ಳಾಪುರಗಳಲ್ಲಿ ತೆಲುಗು ಪ್ರಭಾವವಿದ್ದರೂ ಇಲ್ಲಿನ ಜನ ಕನ್ನಡಾಭಿಮಾನ ಮೆರೆಯುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ತಿಳಿಸಿದರು.

ನಗರ ಹೊರವಲಯದ ಬೆಂಗಳೂರು ಉತ್ತರ ವಿವಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿ, 1973ರಲ್ಲಿ ಮೈಸೂರು ರಾಜ್ಯದ ಬದಲಿಗೆ ಕರ್ನಾಟಕ ಎಂದು ಮರುನಾಮಕರಣಗೊಂಡಂತೆ ಅಖಂಡ ಕರ್ನಾಟಕದಲ್ಲಿ ನಾಡ ಭಾಷೆ ಕನ್ನಡ ನಮ್ಮ ಉಸಿರಾಗಬೇಕಿದೆ ಎಂದರು.

ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವುದು ಸವಾಲಿನ ಕೆಲಸವಾಗಿದೆ. ಆದರೆ ಇಲ್ಲಿನ ಜನ ತೆಲುಗನ್ನು ಮನೆ ಭಾಷೆಯನ್ನಾಗಿಸಿಕೊಂಡಿದ್ದರೂ ಕನ್ನಡವನ್ನು ಆಡಳಿತ ಭಾಷೆಯಾಗಿ ತಪ್ಪದೆ ಬಳಸುವ ಜಾಣರಾಗಿದ್ದಾರೆ. ನನ್ನ ಹುಟ್ಟಿದ ಊರು ಶ್ರೀನಿವಾಸಪುರವಾದರೂ ಚಿಕ್ಕಬಳ್ಳಾಪುರ ಜಿಲ್ಲೆ ಸ್ವಂತ ಊರಂತೆ ಆಗಿದೆ. ನನ್ನ 15 ವರ್ಷದ ಸೇವಾವಧಿಯಲ್ಲಿ 12 ವರ್ಷ ಇಲ್ಲೇ ಕಳೆದಿದ್ದೇನೆ. ಅಪರ ಜಿಲ್ಲಾಧಿಕಾರಿಯಾಗಿ 4 ತಿಂಗಳು ಕಳೆದಿದ್ದು ಜನಸೇವೆಗೆ ತೊಂದರೆ ಆಗಲಿದೆ ಎನ್ನುವ ಕಾರಣಕ್ಕೆ ಯಾವುದೇ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಆದರಿಂದು ಜ್ಞಾನಿಗಳ ಸಂಘದಲ್ಲಿ ಒಡನಾಡಬೇಕೆಂಬ ಕಾರಣಕ್ಕೆ ಬಿಡುವು ಮಾಡಿಕೊಂಡು ಬಂದಿದ್ದೇನೆ ಎಂದರು.

ಎಲ್ಲರಿಗೂ 24 ಗಂಟೆಗಳ ಸಮಯ ಮಾತ್ರ ಇದೆ. ಇದನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡವರು ಮಾತ್ರ ಸಾಧಕರಾಗುತ್ತಾರೆ. ಓದುವ ಸಮಯದಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ. ಮೊಬೈಲ್ ನಿಮ್ಮ ಬದುಕಿಗೆ ದಾರಿದೀಪವಾಗಬೇಕೇ ವಿನಃ ಕತ್ತಲೆಯನ್ನು ಕವಿಸಬಾರದು. ದುರ್ಜನರ ಸಂಘ ಮಾಡಿದರೆ ಹಾಳಾಗುವುದು ಸುಲಭ. ಎಚ್ಚರಿಕೆಯಿಂದ ಭವಿಷ್ಯ ಕಟ್ಟಿಕೊಳ್ಳಿ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ ಮಾತನಾಡಿ, ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳೆಂದರೆ ಯಾರದೋ ಜೇಬಿಗೆ ಕೈ ಹಾಕುವುದಿಲ್ಲ. ಬದಲಿಗೆ ಕನ್ನಡ ಪರಿಚಾರಿಕೆಗೆ ಕೈಜೋಡಿಸುವುದೇ ಆಗಿದೆ. ನನಗೆ ತಿಳಿದಂತೆ ಸಾಹಿತ್ಯದ ಪರಿಚಾರಿಕೆಗೆ ಎಂದರೆ ಹಾರ ತುರಾಯಿ ಹಾಕುವುದಾಗಲಿ, ಗಟ್ಟಿಗಂಟಲಲ್ಲಿ ಮಾತನಾಡಿ ಹೆದರಿಸಿ, ಬೆದರಿಸಿ ಭಾಷೆಯನ್ನು ಹೇರುವುದಲ್ಲ, ಪ್ರೀತಿಯ ಅಪ್ಪುಗೆಯಿಂದ ತಬ್ಬಿಕೊಳ್ಳುವುದೇ ಆಗಿದೆ. ಶಾಲಾ ಕಾಲೇಜು, ಗುರುಗಳು, ಉಪನ್ಯಾಸಕರು ಮಾಧ್ಯಮ ವಕ್ತಾರರಾಗಬೇಕು, ತನ್ಮೂಲಕ ಸಮಾಜಕ್ಕೆ ಆಗುವ ಅಳಿಲು ಸೇವೆ ಮಾಡಬೇಕು ಎಂದರು.

ಜಿಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಂ ಮಾತನಾಡಿ, ಸೋಷಿಯಲ್ ಮೀಡಿಯಾ ಹಾವಳಿಯಿಂದ ನೈಜ ಪತ್ರಿಕೋದ್ಯಮ ಕಳೆದುಹೋಗುತ್ತಿದೆ. ಓದುಗರ ಸಂಖ್ಯೆ ಇಳಿಮುಖವಾಗಿದ್ದರೂ ಕೂಡ ಮುದ್ರಣ ಮಾಧ್ಯಮಕ್ಕಿರುವ ಕಿಮ್ಮತ್ತು ಇಂದಿಗೂ ಹಾಗೇ ಇದೆ. ಪತ್ರಕರ್ತರು ಸಾಮಾಜಿಕ ಹೊಣೆಗಾರಿಕೆ ಹೊರಬೇಕು ಎಂದರು.

ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಕೋಡಿರಂಗಪ್ಪ ಅವರು ತಯಾರಿಸಿರುವ ಕನ್ನಡಪ್ರಭ, ವಿಶ್ವವಾಣಿ, ಪ್ರಜಾವಾಣಿ, ವಿಜಯವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳ ಅಂಕಣಬರಹ, ಲೇಖನಗಳುಳ್ಳ ಆಲ್ಬಮ್ ಪ್ರದರ್ಶನಕ್ಕೆ ಇಡಲಾಗಿತ್ತು.

ಪ್ರಾಂಶುಪಾಲ ಬಾಹುಬಲಿ, ಪ್ರಾಧ್ಯಾಪಕರಾದ ಡಾ.ಎನ್. ಲೋಕನಾಥ್, ಮುನಿರಾಜು.ಎಂ. ಅರಿಕೆರೆ, ಶಂಕರ್, ಜಾನಪದ ಗಾಯಕ ಗಾ.ನ.ಅಶ್ವತ್, ತಾಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜುಂಜಣ್ಣ, ಚೆನ್ನ ಮಲ್ಲಿಕಾರ್ಜುನಯ್ಯ, ಸುಧಾ ವೆಂಕಟೇಶ್, ಎನ್.ದಯಾಸಾಗರ್, ಪ್ರಶಾಂತ್‌ ಕುರ್ಕೆ, ಎನ್.ವೆಂಕಟೇಶ್, ವಿ.ರವಿಕುಮಾರ್, ಗೌರವ ಕಾರ್ಯದರ್ಶಿ ಎಸ್.ಎನ್.ಅಮೃತ್‌ಕುಮಾರ್, ಪ್ರೇಮಲೀಲಾ ವೆಂಕಟೇಶ್,ಅಣ್ಣಮ್ಮ, ಕೆ.ಎಂ.ರೆಡ್ಡಪ್ಪ, ಎಸ್.ಸತೀಶ್, ಸರ್ದಾರ್ ಚಾಂದ್ ಪಾಷಾ, ಸುಶೀಲಾ ಮಂಜುನಾಥ್ ಮತ್ತಿತರರು ಇದ್ದರು.