ಸಮೂಹ ಮಾಧ್ಯಮಗಳಲ್ಲಿ ಮುದ್ರಣ ಮಾಧ್ಯಮ ಜನರ ನೆನಪಿನಲ್ಲಿ ಹೆಚ್ಚು ಉಳಿಯುತ್ತದೆ ಎಂದು ಸಂಶೋಧನೆಗಳಿಂದ ತಿಳಿದಿದ್ದು, ಖಚಿತತೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ.

ಧಾರವಾಡ:

ಪರಿಣಾಮಕಾರಿ ಸಂವಹನಕ್ಕೆ ಭಾಷಾ ಕೌಶಲ್ಯ ಅಗತ್ಯವಾಗಿದ್ದು, ಮುದ್ರಣ ಮಾಧ್ಯಮ ಎಲ್ಲ ಕಾಲಕ್ಕೂ ಮಹತ್ವವನ್ನು ಪಡೆದುಕೊಂಡಿದೆ ಎಂದು ಹಿರಿಯ ಪತ್ರಕರ್ತ ವೆಂಕಟರಾಜ ಕೆ. ಜಿ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶ್ರಯದಲ್ಲಿ ಶ್ರೀವೇಮನ ಪೀಠ ಸಭಾಭವನದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಸಂವಹನ ಕೂಟದ ಉದ್ಘಾಟನೆ ಮತ್ತು ಮುದ್ರಣ ಮಾಧ್ಯಮ ಕುರಿತ ನಾಲ್ಕು ದಿನಗಳ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಮೂಹ ಮಾಧ್ಯಮಗಳಲ್ಲಿ ಮುದ್ರಣ ಮಾಧ್ಯಮ ಜನರ ನೆನಪಿನಲ್ಲಿ ಹೆಚ್ಚು ಉಳಿಯುತ್ತದೆ ಎಂದು ಸಂಶೋಧನೆಗಳಿಂದ ತಿಳಿದಿದ್ದು, ಖಚಿತತೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ ಎಂದರು.ಪತ್ರಕರ್ತನಿಗೆ ಸ್ಪಷ್ಟ ಬರವಣಿಗೆ, ಸರಳ ಸಂವಹನವು ಅಗತ್ಯವಾಗಿದ್ದು, ಪತ್ರಿಕೋದ್ಯಮ ಎಂಬುದು ಕೇವಲ ವೃತ್ತಿಯಲ್ಲ, ಅದೊಂದು ನಾಗರಿಕ ಜವಾಬ್ದಾರಿ ಎಂದ ಅವರು, ಸಮಾಜದಲ್ಲಿಯ ಜಟಿಲ ಸಮಸ್ಯೆಗಳನ್ನು ಬಿಂಬಿಸಲು, ಧನಾತ್ಮಕ ಪರಿವರ್ತನೆ ತರುವಲ್ಲಿ ಪತ್ರಿಕೋದ್ಯಮ ಪಾತ್ರ ಗಮನಾರ್ಹವಾದುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ. ಎ. ಎಂ. ಖಾನ್, ವಿದ್ಯಾರ್ಥಿಗಳು ಪತ್ರಿಕೋದ್ಯಮ ಜವಾಬ್ದಾರಿ ಕಲಿಯುವ ಜತೆಗೆ ಪತ್ರಿಕೆ ಓದುವ ಮೂಲಕ ಭಾಷಾ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಬಳಸಬೇಕು ಹಾಗೂ ಸಾಮಾಜಿಕ ಮಾಧ್ಯಮಗಳ ಸುಳ್ಳು ಸುದ್ದಿಗಳ ಬಗ್ಗೆ ಪರಿಶೀಲನೆ ಮಾಡುವುದು ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಪ್ರೊ. ಜೆ. ಎಂ. ಚಂದುನವರ ಮಾತನಾಡಿ, ಪತ್ರಕರ್ತನಿಗೆ ಅತ್ಯುತ್ತಮ ಗ್ರಹಿಕೆ ಇರಬೇಕು. ಸ್ವಯಂ ಶಿಸ್ತು ಬೆಳೆಸಿಕೊಂಡು ಅಧ್ಯಯನಶೀಲರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಈ ವೇಳೆ ವೆಂಕಟರಾಜ ಕೆ.ಜಿ. ಅವರನ್ನು ಸನ್ಮಾನಿಸಲಾಯಿತು. ಗಣ್ಯರು ವಿದ್ಯಾ ಸಮಾಚಾರ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕ ಪ್ರೊ. ಸಂಜಯಕುಮಾರ ಮಾಲಗತ್ತಿ, ಶ್ರೀವೇಮನ ಪೀಠದ ಸಂಯೋಜಕ ಪ್ರೊ. ಎಚ್.ಬಿ. ನೀಲಗುಂದ, ಪತ್ರಕರ್ತ ಆರ್. ಶ್ರೀನಿಧಿ, ಸಂವಹನ ಕೂಟದ ಕಾರ್ಯದರ್ಶಿ ಬಾಳಪ್ಪ ಮಾದನೂರ ಹಾಗೂ ಸಂವಹನ ಕೂಟದ ಖಜಾಂಚಿ ಜಯಪಾಲ್ ಎಂ. ತಡಸದ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರದೀಪ ಅಂಬಿಗೇರ ನಿರೂಪಿಸಿದರು. ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಐಶ್ವರ್ಯ ಬಾಳಿಕಾಯಿ ವಂದಿಸಿದರು.