ಕನ್ನಡಪ್ರಭ ವಾರ್ತೆ ಬೆಳಗಾವಿಇಲ್ಲಿನ ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ಸುಮಾರು 15X15 ಸೆಂಟಿಮೀಟರ್ ಗಾತ್ರದ ಹಾಗೂ 1.5 ಕೆ.ಜಿ. ತೂಕದ ಬೃಹತ್ ಅಂಡಾಶಯದ ಚೀಲವನ್ನು ಲ್ಯಾಪರೊಸ್ಕೋಪಿ (ಸಣ್ಣ ರಂಧ್ರಗಳ ಮೂಲಕ ನಡೆಸುವ ಶಸ್ತ್ರಚಿಕಿತ್ಸೆ) ವಿಧಾನದಿಂದ ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ದೊಡ್ಡ ಗಾತ್ರದ ಚೀಲವನ್ನು ಹೊಟ್ಟೆಯ ಮೇಲೆ ದೊಡ್ಡ ಛೇದನ ಮಾಡದೆ, ಸಣ್ಣ ರಂಧ್ರಗಳ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ ತೆಗೆದುಹಾಕಿರುವುದು ಈ ಪ್ರಕರಣದ ವಿಶೇಷತೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿನ ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ಸುಮಾರು 15X15 ಸೆಂಟಿಮೀಟರ್ ಗಾತ್ರದ ಹಾಗೂ 1.5 ಕೆ.ಜಿ. ತೂಕದ ಬೃಹತ್ ಅಂಡಾಶಯದ ಚೀಲವನ್ನು ಲ್ಯಾಪರೊಸ್ಕೋಪಿ (ಸಣ್ಣ ರಂಧ್ರಗಳ ಮೂಲಕ ನಡೆಸುವ ಶಸ್ತ್ರಚಿಕಿತ್ಸೆ) ವಿಧಾನದಿಂದ ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ದೊಡ್ಡ ಗಾತ್ರದ ಚೀಲವನ್ನು ಹೊಟ್ಟೆಯ ಮೇಲೆ ದೊಡ್ಡ ಛೇದನ ಮಾಡದೆ, ಸಣ್ಣ ರಂಧ್ರಗಳ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ ತೆಗೆದುಹಾಕಿರುವುದು ಈ ಪ್ರಕರಣದ ವಿಶೇಷತೆ.

ಸಾಮಾನ್ಯವಾಗಿ ಲ್ಯಾಪ್ರೊಸ್ಕೋಪಿ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯ ಭಾಗದಲ್ಲಿ ಕೆಲವು ಸಣ್ಣ ರಂಧ್ರಗಳನ್ನು ಮಾಡಿ, ಕ್ಯಾಮೆರಾ ಮತ್ತು ವಿಶೇಷ ಶಸ್ತ್ರಚಿಕಿತ್ಸಾ ಉಪಕರಣಗಳ ಸಹಾಯದಿಂದ ಒಳಭಾಗದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಈ ವಿಧಾನದಲ್ಲಿ ದೊಡ್ಡ ಛೇದನದ ಅಗತ್ಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ರೋಗಿಯ ಆರೋಗ್ಯ ಸ್ಥಿತಿ, ಚೀಲದ ಗಾತ್ರ ಮತ್ತು ಸ್ವರೂಪ ಪರಿಗಣಿಸಿ ಸೂಕ್ತ ವಿಧಾನವನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ.

ಶಸ್ತ್ರಚಿಕಿತ್ಸೆಯನ್ನು ಡಾ.ದರ್ಶಿತ ಶೆಟ್ಟಿ ಡಾ.ಅಮೃತಾ ಅವರು ಯಶಸ್ವಿಯಾಗಿ ನೆರವೇರಿಸಿದರು. ಈ ವೇಳೆ ಅರಿವಳಿಕೆ ತಜ್ಞರಾದ ಡಾ. ದಿವೇಕರ್, ಆಸ್ಪತ್ರೆಯ ಮೆಡಿಸಿನ್ ವಿಭಾಗದ ಹಿರಿಯ ವೈದ್ಯರಾದ ಡಾ.ಆರ್.ಆರ್.ವಾಲ್ವೇಕರ್ ರೋಗಿಯ ಮಧುಮೇಹ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಸಲಹೆ ಮತ್ತು ಸಹಕಾರ ನೀಡಿದರು.

ದೊಡ್ಡ ಗಾತ್ರದ ಅಂಡಾಶಯದ ಚೀಲಗಳಿಗೆ ಚಿಕಿತ್ಸೆ ನೀಡುವಾಗ ಚೀಲದ ಗಾತ್ರ ಮಾತ್ರವಲ್ಲದೆ, ಅದರ ಒಳಗಿನ ಅಂಶಗಳು, ಸ್ವರೂಪ, ರೋಗಿಯ ವಯಸ್ಸು, ಆರೋಗ್ಯ ಸ್ಥಿತಿ ಮತ್ತು ಇತರ ವೈದ್ಯಕೀಯ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ. ಎಲ್ಲ ದೊಡ್ಡ ಚೀಲಗಳಿಗೂ ಒಂದೇ ರೀತಿಯ ಶಸ್ತ್ರಚಿಕಿತ್ಸಾ ವಿಧಾನ ಸೂಕ್ತವಾಗಿರುವುದಿಲ್ಲ. ಸೂಕ್ತ ರೋಗಿಯಲ್ಲಿ, ಅಗತ್ಯ ವೈದ್ಯಕೀಯ ಮೌಲ್ಯಮಾಪನದ ನಂತರ ಲ್ಯಾಪ್ರೊಸ್ಕೋಪಿ ವಿಧಾನವನ್ನು ಬಳಸುವುದರಿಂದ ದೊಡ್ಡ ಛೇದನವನ್ನು ತಪ್ಪಿಸಲು ಅಥವಾ ಕಡಿಮೆ ಮಾಡಲು ಸಾಧ್ಯವಾಗಬಹುದು.

ಯುಎಸ್‌ಎಂ-ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎನ್. ಹಾಗೂ ಡಾ.ಸಂಜಯ್ ಕಂಬಾರ್, ವೈದ್ಯಕೀಯ ಅಧೀಕ್ಷಕರು ಅವರು ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವೈದ್ಯರ ತಂಡ, ಶುಶ್ರೂಷಾ ಸಿಬ್ಬಂದಿ, ಅರಿವಳಿಕೆ ತಜ್ಞರ ತಂಡ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಯ ಸಿಬ್ಬಂದಿ ಸಮರ್ಪಿತ ಸೇವೆ, ವೈದ್ಯಕೀಯ ಪರಿಣತಿ ಮತ್ತು ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿ, ಎಲ್ಲರನ್ನೂ ಅಭಿನಂದಿಸಿದರು.