ಬಾಗಲಕೋಟೆ : ಕರ್ನಾಟಕ ರಾಜ್ಯ ಆಹಾರ ಆಯೋಗ ಜಿಲ್ಲೆಯ ವಿವಿಧೆಡೆ ಕೈಗೊಂಡ ಪರಿಶೀಲನೆಯಲ್ಲಿ ಪಡಿತರ ದಾಸ್ತಾನು, ಗೋಡೌನ್ ನಿರ್ವಹಣೆ, ಅನ್ನಭಾಗ್ಯ ಅಂಗಡಿಗಳ ಕಾರ್ಯವೈಖರಿ ಹಾಗೂ ವಿದ್ಯಾರ್ಥಿ ನಿಲಯಗಳ ಆಹಾರ ವ್ಯವಸ್ಥೆಯಲ್ಲಿ ಹಲವು ಲೋಪಗಳು ಕಂಡುಬಂದಿವೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕರ್ನಾಟಕ ರಾಜ್ಯ ಆಹಾರ ಆಯೋಗ ಜಿಲ್ಲೆಯ ವಿವಿಧೆಡೆ ಕೈಗೊಂಡ ಪರಿಶೀಲನೆಯಲ್ಲಿ ಪಡಿತರ ದಾಸ್ತಾನು, ಗೋಡೌನ್ ನಿರ್ವಹಣೆ, ಅನ್ನಭಾಗ್ಯ ಅಂಗಡಿಗಳ ಕಾರ್ಯವೈಖರಿ ಹಾಗೂ ವಿದ್ಯಾರ್ಥಿ ನಿಲಯಗಳ ಆಹಾರ ವ್ಯವಸ್ಥೆಯಲ್ಲಿ ಹಲವು ಲೋಪಗಳು ಕಂಡುಬಂದಿವೆ.

ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ನೇತೃತ್ವದ ತಂಡ ಬಾಗಲಕೋಟೆ ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ಟಿಎಪಿಎಂಎಸ್ ಸಗಟು ಗೋಡೌನ್ ಪರಿಶೀಲಿಸಿದಾಗ ಸ್ವಚ್ಛತೆಯ ಕೊರತೆ, ಒಡೆದ ನೆಲಹಾಸು, ಅಸಮರ್ಪಕ ಧಾನ್ಯ ಸಂಗ್ರಹ ಹಾಗೂ ಇಲಿ, ಪಕ್ಷಿ, ಕೀಟ ಮತ್ತು ಬೆಂಕಿಯಿಂದ ಧಾನ್ಯ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳ ಕೊರತೆ ಕಂಡುಬಂದಿದೆ.

ವಿದ್ಯಾರ್ಥಿ ನಿಲಯಗಳಿಗೆ ವಿತರಿಸಬೇಕಿದ್ದ 2 ಸಾವಿರ ಕ್ವಿಂಟಾಲ್ ಗೋಧಿ ವಿತರಣೆಯಾಗದೆ ಹುಳು ಬಿದ್ದಿರುವುದು ಕಂಡುಬಂದಿದೆ. ತಂತ್ರಾಂಶದ ಪ್ರಕಾರ 8,814.97 ಕ್ವಿಂಟಾಲ್ ಅಕ್ಕಿ ಇರಬೇಕಾಗಿದ್ದು, ಭೌತಿಕವಾಗಿ 8,619.83 ಕ್ವಿಂಟಾಲ್ ಮಾತ್ರ ಪತ್ತೆಯಾಗಿದ್ದು, 195.14 ಕ್ವಿಂಟಾಲ್ ಅಕ್ಕಿ ಕೊರತೆ ಕಂಡುಬಂದಿದೆ. ಈ ಕುರಿತು ಸೂಕ್ತ ಕ್ರಮಕ್ಕೆ ಸೂಚಿಸಿದರು.

ಬೀಳಗಿ ತಾಲೂಕಿನಲ್ಲಿ ಆಯೋಗದ ಸದಸ್ಯ ಮಾರುತಿ ದೊಡ್ಡಲಿಂಗಪ್ಪಣವರ ಹಾಗೂ ವಿಜಯಲಕ್ಷ್ಮೀ ಕೆ ಅವರು ಪಿಕೆಪಿಎಸ್ ಮಳಿಗೆ ಸೇರಿ ವಿವಿಧ ಪಡಿತರ ಕೇಂದ್ರ ಪರಿಸೀಲಿಸಿದರು. ಕೆಎಫ್‌ಎಸ್‌ಎಸ್ಸಿ ಮಳಿಗೆ ಪರಿಶೀಲನೆಯಲ್ಲಿ ಹಳೆಯ ಹಾಗೂ ಧಾನ್ಯ ಸಂಗ್ರಹಣೆಗೆ ಯೋಗ್ಯವಲ್ಲದ ಕಟ್ಟಡ, ಸ್ವಚ್ಛತೆ ಕೊರತೆ ಹಾಗೂ ಹುಳು ಬಿದ್ದ ತೊಗರಿಬೇಳೆ ಪತ್ತೆಯಾಗಿದೆ. ಕಳಪೆ ಗುಣಮಟ್ಟದ ಬೇಳೆ ವಾಪಸ್ ಕಳುಹಿಸಿ ಗುಣಮಟ್ಟದ ಬೇಳೆ ಪಡೆಯಲು ಸೂಚಿಸಲಾಯಿತು. 35 ಚೀಲ ಅಕ್ಕಿ ಸೀಜ್ ಮಾಡಿದ ಪ್ರಕರಣದಲ್ಲಿ ಎಫ್ಐಆರ್‌ನಲ್ಲಿನ ಚೀಲಗಳ ಸಂಖ್ಯೆ ಹಾಗೂ ಭೌತಿಕ ದಾಸ್ತಾನಿನ ನಡುವೆ 8 ಚೀಲಗಳ ವ್ಯತ್ಯಾಸ ಕಂಡುಬಂದಿದ್ದು, ದಾಖಲೆ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಯಿತು.

ಅನ್ನಭಾಗ್ಯ ಅಂಗಡಿಗಳ ಪರಿಶೀಲನೆಯಲ್ಲಿ ದಾಸ್ತಾನು ವ್ಯತ್ಯಾಸ, ಗ್ರಾಹಕರಿಗೆ ರಸೀದಿ ನೀಡದಿರುವುದು ಹಾಗೂ ವಿತರಣೆ ಕುರಿತ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಕಂಡುಬಂದಿದೆ. ಮತ್ತೊಂದು ಅಂಗಡಿ ಸಂಜೆ ವೇಳೆಯಲ್ಲೂ ಮುಚ್ಚಿರುವುದು ಪತ್ತೆಯಾಗಿದ್ದು, ಗ್ರಾಹಕರಿಗೆ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಕ್ರಮಕ್ಕೆ ಸೂಚಿಸಲಾಗಿದೆ. ಲೋಪ ಕಂಡುಬಂದ ಅಂಗಡಿಗಳ ಪ್ರಾಧಿಕಾರ, ಪರವಾನಗಿ ರದ್ಧತಿಗೆ ಶಿಫಾರಸು ಮಾಡಿದ್ದಾರೆ.

ಬೀಳಗಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾಂಬಾರು, ಪಲ್ಯ ರುಚಿಯಾಗಿಲ್ಲ, ಅಡುಗೆಮನೆ ಸ್ವಚ್ಛವಾಗಿಲ್ಲ, ಅಡುಗೆ ಸಿಬ್ಬಂದಿ ಏಫ್ರಾನ್ ಹಾಗೂ ತಲೆಕವಚ ಧರಿಸುವುದಿಲ್ಲ, ಬಿಸಿನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ದೂರುಗಳು ವಿದ್ಯಾರ್ಥಿಗಳಿಂದ ಕೇಳಿಬಂದಿವೆ. ಪಡಿತರ ಹಾಗೂ ತರಕಾರಿ ಸ್ವೀಕಾರದಲ್ಲೂ ನಿಯಮ ಪಾಲನೆಯ ಕೊರತೆ ಕಂಡುಬಂದಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು.

ಪರಿಶೀಲನೆ ವೇಳೆಯಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಆಹಾರ ನಿರೀಕ್ಷಕ ಮಹಾಂತೇಶ ಗೌಡರ ಸೇರಿದಂತೆ ಆಹಾರ ಇಲಾಖೆಯ ಸಿಬ್ಬಂದಿ ಇದ್ದರು.