ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಖಾಸಗಿ ಶಾಲೆಗಳ ರೀತಿಯಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಆಲೂರು ತಾಲೂಕು ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದ ಗ್ರಾಮಸ್ಥರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ಊರಿನ ಸರ್ಕಾರಿ ಶಾಲೆಗೆ ಸುಮಾರು 80 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಮತ್ತು ಎಲ್.ಇ.ಡಿ ಟಿವಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.ಭೈರಾಪುರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ವಿ ನಂದೀಶ್ ಮಾತನಾಡಿ, ಗ್ರಾಮದ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಒಳಗೊಂಡಂತೆ ಎಲ್ಲರೂ ಸೇರಿ ಒಂದು ಒಮ್ಮತದ ನಿರ್ಣಯವನ್ನು ಕೈಗೊಂಡು ಪ್ರಸ್ತುತ ದಿನಗಳಲ್ಲಿ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಇಂತಹ ಸಮಯದಲ್ಲಿ ನಮ್ಮ ಗ್ರಾಮದ ನಮ್ಮ ಶಾಲೆಯನ್ನು ಉಳಿಸಿ ಬೆಳೆಸಬೇಕಾಗಿದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಮ್ಮ ಗ್ರಾಮದ ಮಕ್ಕಳು ಕೂಡ ಖಾಸಗಿ ಶಾಲೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿಯೂ ಬಳಸಿಕೊಂಡು ಗುಣಮಟ್ಟದ ಶಿಕ್ಷಣವು ಅವರಿಗೆ ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಬೇಕು ಎಂಬ ಗುರಿಯೊಂದಿಗೆ ನಾವು ಇಂದು ನಮ್ಮ ಕೈಲಾದ ಮಟ್ಟಿಗೆ ಎಲ್ಲರ ಸಹಕಾರದಿಂದ ನಾವು ಓದಿ ಕಲಿತ ಶಾಲೆಗೆ ಲ್ಯಾಪ್‌ಟಾಪ್ ಮತ್ತು ಎಲ್ಇಡಿ ಟಿವಿಯನ್ನು ಉಡುಗೊರೆಯಾಗಿ ನೀಡಿದ್ದು ಇದರ ಸದುಪಯೋಗವನ್ನು ನಮ್ಮ ಗ್ರಾಮದ ವಿದ್ಯಾರ್ಥಿಗಳು ಪಡೆಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರತ್ನ, ಜಯಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಸತೀಶ್, ಹಳೆ ವಿದ್ಯಾರ್ಥಿಗಳಾದ ದುಬೈ ದೀಪಕ್, ಅನಿಲ್, ದಿನೇಶ್, ಲೋಕೇಶ್, ಹರೀಶ್, ಯೋಗೇಶ್, ಕಿರಣ್, ದಿವಾಕರ್, ಮಧು, ದರ್ಶನ್, ಬಸವರಾಜ್, ಪ್ರತಾಪ್, ಶಶಿಧರ್, ಗಂಗರಾಜ್, ರವಿ, ಮೋಹನ್, ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಇದ್ದರು.