ವೇಗದ ವಾಹನಗಳಿಗೆ ಲೇಸರ್‌ ಕ್ಯಾಮೆರಾ ಬ್ರೇಕ್!

| Published : Jun 29 2024, 12:33 AM IST

ಸಾರಾಂಶ

ಗಂಗಾವತಿ ಸೇರಿದಂತೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗವಾಗಿ ಮೈ ಮರೆತು ಓಡಿಸುವ ವಾಹನಗಳ ಸವಾರರ ಮೇಲೆ ಈಗ ಪೊಲೀಸ್ ಇಲಾಖೆ ಲೇಸರ್ ಕ್ಯಾಮೆರಾ ಕಣ್ಗಾವಲು ಇರಿಸಿದ್ದು, ತಪ್ಪಿಸಿಕೊಂಡು ಹೋದವರಿಗೆ ಬೀಳುತ್ತಿದೆ ಹೆಚ್ಚಿನ ದಂಡ.

ರಾಮಮೂರ್ತಿ ನವಲಿ

ಕನ್ನಡಪ್ರಭ ವಾರ್ತೆ ಗಂಗಾವತಿ

ನಗರ ಸೇರಿದಂತೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗವಾಗಿ ಮೈ ಮರೆತು ಓಡಿಸುವ ವಾಹನಗಳ ಸವಾರರ ಮೇಲೆ ಈಗ ಪೊಲೀಸ್ ಇಲಾಖೆ ಲೇಸರ್ ಕ್ಯಾಮೆರಾ ಕಣ್ಗಾವಲು ಇರಿಸಿದ್ದು, ತಪ್ಪಿಸಿಕೊಂಡು ಹೋದವರಿಗೆ ಬೀಳುತ್ತಿದೆ ಹೆಚ್ಚಿನ ದಂಡ.

ಗಂಗಾವತಿ ಪೊಲೀಸ್ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಗಂಗಾವತಿ ಪೊಲೀಸ್ ಠಾಣೆ ಸೇರಿದಂತೆ 8ಕ್ಕೂ ಹೆಚ್ಚು ಠಾಣೆಗಳಲ್ಲಿ ಈ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿದೆ. ತಾಲೂಕಿನಲ್ಲಿ ದ್ವಿಚಕ್ರ ವಾಹನಗಳು ಸೇರಿದಂತೆ ಬೃಹತ್ ವಾಹನಗಳ ಓಡಾಟ ಅವಿರತವಾಗಿದೆ. ಅದರಲ್ಲೂ ಗಂಗಾವತಿ ಹೊಸಪೇಟೆ, ಹಂಪೆ, ಆನೆಗೊಂದಿ , ಅಂಜನಾದ್ರಿ ಐತಿಹಾಸಿಕ ಸ್ಥಳಗಳಿಗೆ ವಾಹನಗಳ ಸಂಚಾರ ಹೆಚ್ಚಾಗಿದೆ. ಅತೀ ವೇಗದ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಲೇಸರ್ ಕ್ಯಾಮೆರಾವನ್ನು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಳಸಲು ಸೂಚನೆ ನೀಡಿದೆ.ಏನಿದರ ಕೆಲಸ?

ಲೇಸರ್ ಕ್ಯಾಮೆರಾದೊಂದಿಗೆ ರಸ್ತೆಯ ಪಕ್ಕದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ನಗರದಲ್ಲಿ ವೇಗದ ಮಿತಿ 30 ಕಿಮೀ ನಿಗದಿಪಡಿಲಾಗಿದೆ. ದ್ವಿಚಕ್ರ ವಾಹನ ಸವಾರರು 70 ರಿಂದ 80 ಕಿಮೀ ವೇಗದಲ್ಲಿ ಸಂಚಾರ ನಡೆಸುತ್ತಿದ್ದು, ಇದನ್ನು ಈ ಕ್ಯಾಮೆರಾ (ಕ್ಯಾಪ್ಚರ್) ಚಿತ್ರೀಕರಣ ಮಾಡುತ್ತಿದೆ. ಸುಮಾರ 1 ಕಿಮೀ ದೂರದ ವರೆಗೂ ಈ ಕ್ಯಾಮೆರಾ ಚಿತ್ರೀಕರಣ ಮಾಡುತ್ತದೆ. ಕ್ಯಾಮೆರಾದಲ್ಲಿ ವಾಹನಗಳ ನಂಬರ್ ಪ್ಲೇಟ್, ವಾಹನದ ವೇಗದ ಮಿತಿ, ಎಷ್ಟು ಜನರನ್ನು ವಾಹನದ ಮೇಲೆ ಕೂಡಿಸಿಕೊಂಡಿದ್ದಾನೆ. ನಕಲಿ ನಂ. ಪ್ಲೇಟ್ ಪರಿಶೀಲನೆ ಸೇರಿದಂತೆ ವಾಹನಗಳ ಮೇಲೆ ಕ್ಯಾಮೆರಾ ನಿಗಾವಹಿಸುತ್ತಿದೆ. ಒಂದು ವೇಳೆ ಸವಾರರು ತಪ್ಪಿಸಿಕೊಂಡು ಹೋದರೆ ನೇರವಾಗಿ ಅವರಿಗೆ ಪೊಲೀಸ್ ನೋಟಿಸ್ ಹೋಗುತ್ತದೆ. ಈಗ ಗಂಗಾವತಿ ನಗರದಲ್ಲಿ ಲೇಸರ್ ಕ್ಯಾಮೆರಾ ಬಂದಿದ್ದು, ಯರ್ರಾಬಿರ್ರಿ ಓಡಿಸುವ ವಾಹನಗಳ ಸವಾರರಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.ಲೇಸರ್ ಕ್ಯಾಮೆರಾ

ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಹನಗಳ ಸವಾರರು ವೇಗದ ಮಿತಿ ಮೀರಿ ಓಡಾಡಿಸುತ್ತಿದ್ದಾರೆ. ಇದರಿಂದ ಎಷ್ಟೋ ಭಾರಿ ವಾಹನಗಳು ಅವಘಡಕ್ಕೆ ಈಡಾಗಿರುವುದು ಸಾಮಾನ್ಯವಾಗಿದೆ. ಇದನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಲೇಸರ್ ಕ್ಯಾಮೆರಾ ನೀಡಿದೆ.

ಶಾರದಮ್ಮ ಪಿಎಸ್ಐ ಸಂಚಾರಿ ಪೊಲೀಸ್ ಠಾಣೆ ಗಂಗಾವತಿ