ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯದೀಪದ ಕೆಳಗೆ ಕತ್ತಲು ಎಂಬಂತೆ ಕಾವೇರಿ ಮತ್ತು ಹೇಮಾವತಿ ನದಿಗಳು ಈ ಬಾರಿ ಉಕ್ಕಿ ಹರಿದು ಅಣೆಕಟ್ಟುಗಳು ತುಂಬಿ ನೂರಾರು ಟಿಎಂಸಿ ನೀರು ನೆರೆ ರಾಜ್ಯಕ್ಕೆ ಹರಿದುಹೋದರೂ ಎರಡೂ ನದಿಗಳ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ಇದುವರೆಗೂ ನೀರು ತಲುಪದಿರುವುದು ದುರ್ದೈವದ ಸಂಗತಿ.
ಕೆಆರ್‌ಎಸ್ ಅಣೆಕಟ್ಟೆಯ ಮುಖ್ಯ ನಾಲೆಗಳಿಗೆ ನೀರು ಬಿಡುಗಡೆ ಮಾಡಿದ್ದರೂ ಮದ್ದೂರು, ಮಳವಳ್ಳಿ ಭಾಗದ ಕೊನೆಯ ಭಾಗಕ್ಕೆ ನೀರು ತಲುಪಿಲ್ಲ. ಅತ್ತ ಹೇಮಾವತಿ ನಾಲೆಗೆ ನೀರು ಹರಿದರೂ ಆ ಭಾಗದ ಕೊನೆಯ ರೈತರು ನೀರು ಸಿಗದೆ ಪರದಾಡುತ್ತಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು ವಿಶ್ವೇಶ್ವರಯ್ಯ ನಾಲೆ ಸಾಮರ್ಥ್ಯ ೨೫೦೦ ಕ್ಯುಸೆಕ್. ಅಷ್ಟು ನೀರನ್ನು ನಾಲೆಗೆ ಹರಿಸುತ್ತಿದ್ದೇವೆ. ಕೊನೆಯ ಭಾಗಕ್ಕೆ ತಲುಪಿಲ್ಲವೆಂದರೆ ಏನು ಮಾಡೋಣ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ.ನಾಲೆ ನಿರ್ವಹಣೆ ಬಗ್ಗೆ ಅಸಡ್ಡೆ:
ವಿಶ್ವೇಶ್ವರಯ್ಯ ನಾಲಾ ಭಾಗದ ಮುಖ್ಯ ನಾಲೆ, ವಿತರಣಾ ನಾಲೆ, ಶಾಖಾ ನಾಲೆಗಳ ನಿರ್ವಹಣೆ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಅಸಡ್ಡೆ, ನಿರ್ಲಕ್ಷ್ಯ, ಬೇಜವಾಬ್ದಾರಿತನವನ್ನು ನಿರಂತರವಾಗಿ ಪ್ರದರ್ಶಿಸುತ್ತಾ ಬರುತ್ತಿದ್ದಾರೆ. ಕೊನೆಯ ಭಾಗಕ್ಕೆ ನೀರು ತಲುಪದಿರುವುದಕ್ಕೆ ಅಧಿಕಾರಿಗಳ ಉಡಾಫೆ ಧೋರಣೆಗಳೇ ಮುಖ್ಯ ಕಾರಣವಾಗಿದೆ ಎಂಬುದು ರೈತರ ನೇರ ಆರೋಪವಾಗಿದೆ.ಮಳೆಗಾಲಕ್ಕೂ ಮುನ್ನವೇ ರೈತರ ಹಿತದೃಷ್ಟಿಯಿಂದ, ಬೆಳೆಗಳಿಗೆ ನೀರೊದಗಿಸಲು ತೊಂದರೆಯಾಗದಂತೆ ಅಧಿಕಾರಿಗಳು ಸರ್ಕಾರ, ಜನಪ್ರತಿನಿಧಿಗಳ ಗಮನಸೆಳೆದು ಹಣ ಬಿಡುಗಡೆ ಮಾಡಿಸಿಕೊಂಡು ಎಲ್ಲಾ ನಾಲೆಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಳ್ಳಬೇಕಿತ್ತು. ಸಚಿವರು, ಶಾಸಕರಿರುವ ಕ್ಷೇತ್ರಗಳಲ್ಲಿ ಎಲ್ಲೆಲ್ಲಿ ನೀರು ತಲುಪುವುದಕ್ಕೆ ಸಮಸ್ಯೆಗಳಿವೆಯೋ ಅವುಗಳನ್ನು ಗುರುತಿಸಿಟ್ಟುಕೊಂಡು ನಾಲೆ ನೀರು ಸರಾಗವಾಗಿ ಹರಿದುಹೋಗುವಂತೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಇದಾವುದನ್ನೂ ಮಾಡದೆ ಮಳೆ ಬಂದು ಅಣೆಕಟ್ಟು ತುಂಬಿ ನಾಲೆಗಳಲ್ಲಿ ನೀರು ಹರಿಯಬಿಟ್ಟ ನಂತರ ಯುದ್ಧ ಕಾಲೇ ಶಸ್ತ್ರಾಭ್ಯಾಸ ಮಾಡುವ ರೀತಿಯಲ್ಲಿ ಜನಪ್ರತಿನಿಧಿಗಳಿಗೆ ಸಲ್ಲದ ಕಾರಣಗಳನ್ನು ಕೊಟ್ಟು ನಾಟಕವಾಡುವುದನ್ನು ಅಧಿಕಾರಿಗಳು ರೂಢಿ ಮಾಡಿಕೊಂಡಿದ್ದಾರೆ ಎಂದು ರೈತರು ದೂರುತ್ತಿದ್ದಾರೆ.
ಹಾಳಾಗಿರುವ ತೂಬುಗಳು:ವಿತರಣಾ ನಾಲೆಗಳಲ್ಲಿರುವ ತೂಬುಗಳೆಲ್ಲವೂ ಹಾಳಾಗಿದೆ. ಮುಖ್ಯ ನಾಲೆಯ ಆಧುನೀಕರಣದ ಹೆಸರಿನಲ್ಲಿ ಹಿಂದಿನ ಸರ್ಕಾರಗಳು ನೂರಾರು ಕೋಟಿ ರು. ಹಣವನ್ನು ಪ್ರತಿ ಬಜೆಟ್‌ನಲ್ಲೂ ತೋರಿಸುತ್ತಾ ಬಂದಿದ್ದರೂ ನಾಲೆಗಳ ಲೈನಿಂಗ್ ಕಾಮಗಾರಿ ನಡೆದಿಲ್ಲ. ತೂಬುಗಳೆಲ್ಲವೂ ಹಾಳಾಗಿ ಹೋಗಿವೆ. ಇಲ್ಲೇ ಸಾಕಷ್ಟು ನೀರು ಸೋರಿಕೆಯಾಗುತ್ತಿದೆ. ಇದರ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಗಮನವೇ ಇಲ್ಲ.
ಮುಖ್ಯ ನಾಲೆಗಳಲ್ಲೇ ಜೊಂಡು ಮರದಂತೆ ಬೆಳೆದು ನಿಂತಿದ್ದರೂ ಸ್ವಚ್ಛಗೊಳಿಸುತ್ತಿಲ್ಲ. ಇದರಿಂದ ನೀರು ಸರಾಗವಾಗಿ ಮುಂದಕ್ಕೆ ಹರಿಯದೆ ಅಲ್ಲೇ ಇಂಗುತ್ತಿದೆ. ಪರಿಣಾಮ ಆ ಭಾಗಕ್ಕೆ ಎಷ್ಟು ಪ್ರಮಾಣದ ನೀರು ತಲುಪಬೇಕೋ ಅಷ್ಟು ಪ್ರಮಾಣದ ನೀರು ತಲುಪುತ್ತಿಲ್ಲ. ಹೀಗಾಗಿ ಕೊನೆಯ ಭಾಗದ ರೈತರ ನೀರಿನ ಗೋಳು ಹೇಳತೀರದಾಗಿದೆ.ನಾಲೆಯಲ್ಲಿ ಹರಿಯದ ನೀರು:
ವಿಶ್ವೇಶ್ವರಯ್ಯ ಮುಖ್ಯ ನಾಲೆಯಿಂದ ಹರಿದುಬರುವ ನೀರು ಮಂಡ್ಯ ತಾಲೂಕಿನ ಮಂಗಲ ಮುಖ್ಯ ನಾಲೆಯಲ್ಲಿ ಮುಂದಕ್ಕೆ ಹರಿಯದೆ ನಿಂತಲ್ಲೇ ನಿಲ್ಲುತ್ತದೆ. ಜೊಂಡು, ಗಿಡ-ಗಂಟೆಗಳು ಬೆಳೆದುಕೊಂಡಿರುವುದರಿಂದ ನೀರು ಮುಂದೆ ಸಾಗದೆ ಅಲ್ಲೇ ಇಂಗಿಹೋಗುತ್ತದೆ. ನಾಲೆಯನ್ನು ಸ್ವಚ್ಛಗೊಳಿಸದಿರುವುದು, ನಾಲೆಯ ಲೈನಿಂಗ್ ಕಾಮಗಾರಿ ನಡೆಸದಿರುವುದರಿಂದ ಹೆಬ್ಬಕವಾಡಿ ಸುತ್ತುಕಟ್ಟೆಗೆ ನಿಗದಿಪಡಿಸಿದಷ್ಟು ಪ್ರಮಾಣದ ನೀರು ಹರಿಯದೆ ಮಳವಳ್ಳಿ ಕೊನೆಯ ಭಾಗಕ್ಕೆ ನೀರು ತಲುಪದಂತಾಗಿದೆ.ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮಲ್ಲಿರುವ ಲೋಪಗಳು, ಹುಳುಕುಗಳನ್ನುಉ ಮುಚ್ಚಿಕೊಳ್ಳುವುದಕ್ಕೆ ರೈತರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುವುದು ಸರ್ವೇಸಾಮಾನ್ಯವಾಗಿದೆ.ಟ್ರಯಲ್ ಬ್ಲಾಸ್ಟ್‌ಗೆ ಕೋಟ್ಯಂತರ ರು. ಖರ್ಚು
ನಾಲೆಗಳನ್ನು ಸ್ವಚ್ಛಗೊಳಿಸುವುದಕ್ಕೆ ಹಣವಿಲ್ಲವೆಂದು ಕೊಂಕಾಡುವ ನೀರಾವರಿ ಇಲಾಖೆ ಅಧಿಕಾರಿಗಳು, ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವಿಜ್ಞಾನಿಗಳ ತಂಡವನ್ನು ಕರೆಸುವುದಕ್ಕೆ ಕೋಟ್ಯಂತರ ರು. ಖರ್ಚು ಮಾಡುವುದಕ್ಕೆ ಟೊಂಕಕಟ್ಟಿ ನಿಂತಿರುತ್ತಾರೆ. ಇದಕ್ಕೆಲ್ಲಾ ಎಲ್ಲಿಂದ ಹಣ ಬರುತ್ತದೆ ಎನ್ನುವುದು ಪ್ರಶ್ನೆಯಾಗಿದೆ.ನಾಲೆಗಳ ಸ್ಥಿತಿ-ಗತಿಗಳ ಕುರಿತಂತೆ ಕಾಲ ಕಾಲಕ್ಕೆ ಸರ್ಕಾರದ ಗಮನಸೆಳೆದು, ನೀರು ತಲುಪದಿದ್ದರೆ ಜನಪ್ರತಿನಿಧಿಗಳು ಮತ್ತುಉ ರೈತರಿಂದ ವಿರೋಧ ವ್ಯಕ್ತವಾಗುವುದನ್ನು ಮನಗಂಡು ಎಲ್ಲಾ ನಾಲೆಗಳನ್ನು ಸುಸ್ಥಿತಿಯಲ್ಲಿಡಬೇಕೆಂಬ ಆಲೋಚನೆಯೇ ಅಧಿಕಾರಿಗಳಿಗೆ ಇಲ್ಲ. ನೀರನ್ನು ಕೊನೆಯ ಭಾಗಕ್ಕೆ ಹೇಗೆ ತಲುಪಿಸಬೇಕೆಂಬ ಪರಿಕಲ್ಪನೆಯೇ ಅಧಿಕಾರಿಗಳಿಗಿಲ್ಲ. ಮುಖ್ಯನಾಲೆಗಳಿಗೆ ನೀರು ಹರಿಸುವುದಷ್ಟೇ ನಮ್ಮ ಕೆಲಸವೆಂದು ತಿಳಿದುಕೊಂಡು ನೀರು ನಿರ್ವಹಣೆಯಲ್ಲಿ ಅಸಡ್ಡೆ ತೋರುತ್ತಿರುವುದರಿಂದಲೇ ಸಾಕಷ್ಟು ಅವ್ಯವಸ್ಥೆಗಳು ತಾಂಡವವಾಡುವುದಕ್ಕೆ ಮೂಲ ಕಾರಣವಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ನೀರು ಹರಿಸುವ ಬಗ್ಗೆ ಮಾಹಿತಿ ಇಲ್ಲಭತ್ತದ ಸಸಿ ಮಡಿ ಮಾಡಿಟ್ಟುಕೊಂಡು ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಯಾವಾಗ ನಮ್ಮ ಭಾಗಕ್ಕೆ ನೀರು ಹರಿಸುತ್ತಾರೆ ಎಂಬ ಬಗ್ಗೆ ಮಾಹಿತಿಯನ್ನೇ ನೀಡುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಸಮರ್ಪಕ ಉತ್ತರ ಸಿಗುತ್ತಿಲ್ಲ. ನೀರು ಕೊಡಲಾಗದಿದ್ದರೆ ಈ ಭಾಗವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ಕೊಡಲಿ. ರೈತರ ಸಾಲ ಮನ್ನಾ ಮಾಡಲಿ.
-ಟಿ.ಎಲ್.ವಿನೋದ್‌ಬಾಬು, ತಾಲೂಕು ಪ್ರಧಾನ ಕಾರ್ಯದರ್ಶಿ, ಮದ್ದೂರು ರೈತಸಂಘನಾಲಾ ಕ್ಲೀನಿಂಗ್‌ಗೆ ಈಗ ಟೆಂಡರ್
ವಿಶ್ವೇಶ್ವರಯ್ಯ ಮುಖ್ಯ ನಾಲೆ ಮೂಲಕ ಶಿಂಷಾ ವ್ಯಾಪ್ತಿಗೆ ನೀರು ಹರಿಸುವ ನಾಲೆಗಳಲ್ಲಿ ಜೊಂಡು, ಹೂಳು ತುಂಬಿಕೊಂಡಿದೆ. ಅದರ ಸ್ವಚ್ಛತೆಗೆ ಈಗ ಅಧಿಕಾರಿಗಳು ಟೆಂಡರ್ ಕರೆದಿದ್ದಾರಂತೆ. ನೀರು ನಿಲ್ಲಿಸಿದ ಸಮಯದಲ್ಲಿ ಏನು ಮಾಡುತ್ತಿದ್ದೀರಿ ಎಂದರೆ ಉತ್ತರವೇ ಬರೋಲ್ಲ. ಇವರು ಕಾಮಗಾರಿ ನಡೆಸೋದು ಯಾವಾಗ, ನೀರು ಕೊಡೋದು ಯಾವಾಗ, ನಾವು ಬೆಳೆ ಬೆಳೆಯೋದು ಯಾವಾಗ? ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೈತರು ಬಲಿಪಶುಗಳಾಗುತ್ತಿದ್ದಾರೆ.- ಲಿಂಗಪ್ಪಾಜಿ, ಮುಖಂಡರು, ರೈತಸಂಘ