ಕೊನೆಯ ಶ್ರಾವಣ ಸೋಮವಾರ: ಭಕ್ತರಿಂದ ಮಲ್ಲಯ್ಯನ ದರ್ಶನ

| Published : Sep 03 2024, 01:32 AM IST

ಸಾರಾಂಶ

ಶ್ರಾವಣಮಾಸದ ಕೊನೆಯ ಸೋಮವಾರ ನಿಮಿತ್ತ ಬೆಟ್ಟದ ಮೇಲಿನ ಮಲ್ಲಯ್ಯನ ವಿಗ್ರಹಕ್ಕೆ ಶಾಸಕ ಆರ್. ಬಸನಗೌಡ ತುರ್ವಿಹಾಳ ವಿಶೇಷ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಶ್ರಾವಣಮಾಸದ ಕೊನೆಯ ಸೋಮವಾರ ನಿಮಿತ್ತ ಪಟ್ಟಣದ ಬೆಟ್ಟದ ಮೇಲಿರುವ ಮಲ್ಲಯ್ಯನ ದೇವಸ್ಥಾನಕ್ಕೆ ಆಗಮಿಸಿ ನೂರಾರು ಭಕ್ತರು ಮಲ್ಲಿಕಾರ್ಜುನ ದೇವರ ದರ್ಶನ ಪಡೆದುಕೊಂಡು ಪುನೀತರಾದರು.

ಬೆಟ್ಟದ ಮೇಲೆ ನೆಲಿಸಿರುವ ಮಲ್ಲಯ್ಯ ಎರಡನೇ ಶ್ರೀಶೈಲ ಎಂದು ಪ್ರಸಿದ್ಧಿ ಪಡೆದಿದ್ದು ಸೋಮವಾರ ಬೆಳಗ್ಗೆ ಮೂರು ಗಂಟೆಯಿಂದಲೇ ಅಭಿಷೇಕ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಕಲ್ಲಿನಲ್ಲಿ ಮೂಡಿರುವ ಮಲ್ಲಯ್ಯನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಬೆಟ್ಟದ ಕೆಳಗಿನ ಭ್ರಮರಾಂಬಾ ದೇವಸ್ಥಾನದಿಂದ 600ಕ್ಕೂ ಹೆಚ್ಚು ಮೆಟ್ಟಲುಗಳನ್ನು ಪಾದಯಾತ್ರೆ ಮೂಲಕ ಹತ್ತಿ ಮಲ್ಲಯ್ಯನ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದು ನೂರಾರು ಭಕ್ತರ ಗಮನ ಸೆಳೆದರು. ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕರಿಗೆ ಸಾಥ್ ನೀಡಿದರು.

ಸೋಮವಾರ ಬೆಳಗ್ಗೆ 3ಗಂಟಯಿಂದಲೇ ಭಕ್ತರು ಸಾಲು ಸಾಲಗಿ ಬೆಟ್ಟ ಹತ್ತಿ ಮಲ್ಲಯ್ಯನ ದರ್ಶನ ಪಡೆದರು. ಸಂಜೆ ಬೆಟ್ಟದ ಮೇಲಿಂದ ಮಲ್ಲಯ್ಯನನ್ನು ಪಟ್ಟಣದಲ್ಲಿನ ಮಲ್ಲಿಕಾರ್ಜುನನ ದೇವಸ್ಥಾನಕ್ಕೆ ತರಲಾಯಿತು. ನಂತರ ಉಚ್ಚಾಯ ಎಳೆಯಲಾಯಿತು. ಸಿಪಿಐ ಬಾಲಚಂದ್ರ ಡಿ.ಲಕ್ಕಂ ಹಾಗೂ ಪಿಎಸ್ಐ ತಾರಾಭಾಯಿ ನೇತೃತ್ವದಲ್ಲಿ ಬೀಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಮಲ್ಲಯ್ಯ ದೇವಸ್ಥಾನ ಅಭಿವೃದ್ಧಿಗೆ ಆದ್ಯತೆ: ಶಾಸಕ ತುರ್ವಿಹಾಳ

ಮಸ್ಕಿ: ಐತಿಹಾಸಿಕ ಪ್ರಸಿದ್ಧಿ ಪಡೆದ ಬೆಟ್ಟದ ಮಲ್ಲಿಕಾರ್ಜುನನ ದೇವಸ್ಥಾನದ ಅಭಿವೃದ್ಧಿಗೆ ಈಗಾಗಲೇ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಶಾಸಕ ಆರ್. ಬಸನಗೌಡ ತುರುವಿಹಾಳ ತಿಳಿಸಿದರು. ಮಲ್ಲಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಈ ಕ್ಷೇತ್ರ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಅಭಿವೃದ್ಧಿ ಸಾಕಷ್ಟು ಆಗಬೇಕಾಗಿದೆ. ₹2 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಅಭಿವೃದ್ಧಿ ಜೊತೆಗೆ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವೇಶನ ನಿರ್ಮಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವರ್ಷದ ಮಲ್ಲಯ್ಯನ ಆರ್ಶೀವಾದದಿಂದ ಉತ್ತಮ ಮಳೆಯಾಗಿದೆ ಎಂದು ತಿಳಿಸಿದರು. ಪಕ್ಷದ ಅನೇಕ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ದೇವಸ್ಥಾನ ಸಮಿತಿ ಸದಸ್ಯರು ಇದ್ದರು.