ಸಾರಾಂಶ
ಅಧಿಕ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರಿಂದ ವಾಹನಗಳ ದಟ್ಟಣೆ ಅಧಿಕವಾಗಿದ್ದವು. ಪೊಲೀಸರು ಹರಸಾಹಸ ಪಟ್ಟು ಬರುವ ವಾಹನಗಳ ಒಂದು ಕಡೆ ಪಾರ್ಕಿಂಗ್ ಮಾಡಿಸಿ ದೇವರ ದರ್ಶನಕ್ಕೆ ಸಾಲಿನಲ್ಲಿ ದೇವಾಲಯ ಪ್ರವೇಶಕ್ಕೆ ಬಿಡುತ್ತಿದ್ದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಚಿಕ್ಕ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಕರೀಘಟ್ಟ ಬೆಟ್ಟದ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ ಕಡೇ ಶ್ರಾವಣ ಶನಿವಾರದ ಅಂಗವಾಗಿ ಸಹಸ್ರಾರು ಭಕ್ತರ ಆಗಮಿಸಿ ದೇವರ ದರ್ಶನ ಪಡೆದರು.ಕರೀಘಟ್ಟದ ಬೆಟ್ಟದಲ್ಲಿ ದೇವಾಲಯದ ಅರ್ಚಕರು ಬೆಳಗ್ಗಿನಿಂದಲೇ ಶ್ರೀನಿವಾಸ ಮೂರ್ತಿಗೆ ಪಂಚಾಮೃತ ಅಭಿಷೇಕ ಸೇರಿದಂತೆ ಹೋಮ ಹವನಗಳ ಧಾರ್ಮಿಕ ಪೂಜೆ ನೆರವೇರಿಸಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದರು.
ಮಂಡ್ಯ, ಮೈಸೂರು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಹಸ್ರಾರು ಭಕ್ತರ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಭಕ್ತರು ದೇವರ ದರ್ಶನ ಮಾಡಲು ಬೆಟ್ಟ ಹತ್ತುವಾಗ ದಾನಿಗಳು ಎರಡು ಬದಿ ಮೆಟ್ಟಿಲುಗಳ ಬಳಿ ನಿಂತು ಮಜ್ಜಿಗೆ, ಪಾನಕ ಸೇರಿದಂತೆ ಪ್ರಸಾದವನ್ನು ರಸ್ತೆಯುದ್ದಕ್ಕೂ ನೀಡುತ್ತಿದ್ದರು.ಭಕ್ತರಿಗೆ ಅನ್ನ ಸಂತರ್ಪಣೆ:
ಮತ್ತೊಂದೆಡೆಯಲ್ಲಿ ಗಂಜಾಂ ಗ್ರಾಮದ ಒಲೆಕುಯ್ಯೋ ಬೀದಿಯ ಯಜಮಾನರುಗಳು ಹಾಗೂ ಮುಖಂಡರು ಸೇರಿ ದೇವರ ದರ್ಶನಕ್ಕೆ ಬರುವ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಿದರು.ಅಧಿಕ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರಿಂದ ವಾಹನಗಳ ದಟ್ಟಣೆ ಅಧಿಕವಾಗಿದ್ದವು. ಪೊಲೀಸರು ಹರಸಾಹಸ ಪಟ್ಟು ಬರುವ ವಾಹನಗಳ ಒಂದು ಕಡೆ ಪಾರ್ಕಿಂಗ್ ಮಾಡಿಸಿ ದೇವರ ದರ್ಶನಕ್ಕೆ ಸಾಲಿನಲ್ಲಿ ದೇವಾಲಯ ಪ್ರವೇಶಕ್ಕೆ ಬಿಡುತ್ತಿದ್ದರು. ಕೆಲವು ಗ್ರಾಮಗಳಿಂದ ರಾಮ ಭಕ್ತರು ಭಜನಾ ಕಾರ್ಯಗಳ ಮಾಡಿ ದೇವಾಲಯದ ಸುತ್ತಲೂ ಸುತ್ತುಹಾಕಿ ಪ್ರವೇಶ ಪಡೆಯುತ್ತಿದ್ದುದ್ದು ಕಂಡು ಬಂತು.