ಕಳೆದ ವರ್ಷದ ಮಾವು ಬೆಳೆ ವಿಮೆ ಇನ್ನೂ ಬಂದಿಲ್ಲ

| Published : Oct 31 2025, 02:45 AM IST

ಸಾರಾಂಶ

ಕಳೆದ ವರ್ಷದ ಮಾವು ಬೆಳೆ ವಿಮೆ ಇನ್ನೂ ಬಂದಿಲ್ಲ, ಅಡಕೆ ಬೆಳೆ ವಿಮೆ 39 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಂದಿದೆ. ಇನ್ನೂ ಮೂರು ಪಂಚಾಯಿತಿಗೆ ಬಂದಿಲ್ಲ, ಆಗಲೇ ಹೊಸ ಕೃಷಿ ವರ್ಷಕ್ಕೆ 20756 ತೋಟಗಾರಿಕೆ ರೈತರು 12396 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮಾ ಕಂತು ಪಾವತಿಸಿದ್ದಾರೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಕಳೆದ ವರ್ಷದ ಮಾವು ಬೆಳೆ ವಿಮೆ ಇನ್ನೂ ಬಂದಿಲ್ಲ, ಅಡಕೆ ಬೆಳೆ ವಿಮೆ 39 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಂದಿದೆ. ಇನ್ನೂ ಮೂರು ಪಂಚಾಯಿತಿಗೆ ಬಂದಿಲ್ಲ, ಆಗಲೇ ಹೊಸ ಕೃಷಿ ವರ್ಷಕ್ಕೆ 20756 ತೋಟಗಾರಿಕೆ ರೈತರು 12396 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮಾ ಕಂತು ಪಾವತಿಸಿದ್ದಾರೆ.

ಹಾನಗಲ್ಲ ತಾಲೂಕಿನಲ್ಲಿ ಮಾವು, ಅಡಕೆ, ಶುಂಠಿ, ಹಸಿಮೆಣಸು, ಚಿಕ್ಕು, ಪಪ್ಪಾಯಿ, ಬಾಳೆ, ಪೇರಲ, ತರಕಾರಿ, ಕಲ್ಲಂಗಡಿ, ಅನಾನಸ್ ಬೆಳೆಗಳು ತೋಟಗಾರಿಕಾ ಕ್ಷೇತ್ರದಲ್ಲಿವೆ. ಆದರೆ ಬಹುತೇಕ ಅಡಕೆ, ಮಾವು, ಶುಂಠಿ, ಹಸಿಮೆಣಸಿನಕಾಯಿಗೆ ಹೆಚ್ಚು ರೈತರು ಬೆಳೆವಿಮೆ ಕಂತು ತುಂಬುತ್ತಾರೆ. ಆದರೆ ಪ್ರತಿ ವರ್ಷವೂ ಬೆಳೆವಿಮೆಗಾಗಿ ಹೋರಾಟ, ತೋಟಗಾರಿಕೆ ಕಚೇರಿಗೆ ಅಲೆದಾಟ ನಿರಂತರವಾದರೂ ಬೆಳೆವಿಮೆ ಮಾತ್ರ ಸಕಾಲಿಕವಾಗಿ ಕೈಗೆ ಸಿಗುವುದಿಲ್ಲ ಎಂಬ ಕೊರಗು ಈ ತಾಲೂಕಿನ ರೈತರದ್ದಾಗಿದೆ. ಬೆಳೆವಿಮೆ ಕಂತು ತುಂಬಿಸಿಕೊಳ್ಳಲು ದಿನಾಂಕ ನಿಗದಿ ಮಾಡುವಂತೆ ಬೆಳೆವಿಮೆ ಪರಿಹಾರ ನೀಡಲು ಕೂಡ ದಿನಾಂಕ ನಿಗದಿ ಮಾಡಬೇಕು ಎಂಬುದು ರೈತರ ಕೂಗು ಆಗಿದೆ.ಸಾವಿರಾರು ಹೆಕ್ಟೇರ್ ಮಾವು ಇದ್ದ ಹಾನಗಲ್ಲ ತಾಲೂಕಿನಲ್ಲಿ ಈಗ ಮಾವು ಬೆಳೆ ತೆಗೆದು ಅಡಕೆ ಸೇರಿದಂತೆ ಬೇರೆ ಬೇರೆ ಬೆಳೆಗೆ ರೈತರು ಮುಂದಾಗಿರುವುದರಿಂದ ಈಗ ಕೇವಲ 400 ಹೆಕ್ಟೇರ್ ಮಾತ್ರ ಮಾವು ಪ್ರದೇಶ ಉಳಿದಿದೆ. ಇಳುವರಿ ಲೋಪ, ಮಾರುಕಟ್ಟೆಯ ಅನಾನುಕೂಲ, ಬಂದ ಮಾವಿಗೆ ಬೆಲೆ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಅಡಕೆ ಕ್ಷೇತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈಗ 12000 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ ಇದೆ. ಈಗ ಅಡಕೆಗೆ ಅತ್ಯುತ್ತಮ ಬೆಲೆಯೂ ಇರುವುದರಿಂದ ಅಡಕೆ ಬೆಳೆ ಪ್ರದೇಶವೂ ಹೆಚ್ಚುತ್ತಿದೆ. 2500 ಹೆಕ್ಟೇರ್ ಶುಂಠಿ, 25 ಹೆಕ್ಟೇರ್ ಚಿಕ್ಕು, 500 ಹೆಕ್ಟೇರ್ ಬಾಳೆ, 300 ಹೆಕ್ಟೇರ್ ಪಪ್ಪಾಯಿ ಸೇರಿದಂತೆ ವಿವಿಧ ಹಣ್ಣು ಹಾಗೂ ತರಕಾರಿ ಬೆಳೆಗಳತ್ತ ರೈತರು ಗಮನ ಹರಿಸಿದ್ದಾರೆ. ಅಡಕೆ, ಮಾವು, ಹಸಿಮೆಣಸು, ಶುಂಠಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ಹವಾಮಾನ ಆಧಾರಿತ ಬೆಳೆವಿಮೆಗೆ ಒಳಪಡುತ್ತವೆ. ಕಳೆದ ವರ್ಷ 17216 ತೋಟಗಾರಿಕಾ ರೈತರು ಬೆಳೆವಿಮೆಗಾಗಿ ಕಂತು ಭರಿಸಿದ್ದಾರೆ. ಆದರೆ ಹೊಸ ವರ್ಷದ ತೋಟಗಾರಿಕೆ ಬೆಳೆಗಳ ಹೊಸ ಕಂತು ತುಂಬುವ ಕಾಲ ಮುಗಿದಿದ್ದರೂ ಕೂಡ ಹಿಂದಿನ ವರ್ಷದ ಹಲವು ಬೆಳೆಗಳ ಬೆಳೆವಿಮೆ ಇನ್ನೂ ವಿಳಂಬವಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.ಪ್ರಸ್ತುತ 2025-26 ರ ಕೃಷಿ ವರ್ಷಕ್ಕೆ ಅಡಕೆಗೆ 13672 ರೈತರು 7738 ಹೆಕ್ಟೇರ್, ಮಾವು ಬೆಳೆಗೆ 3788 ರೈತರು 2822 ಹೆಕ್ಟೇರ್, ಶುಂಠಿ ಬೆಳೆಗೆ 3154 ರೈತರು 1650 ಹೆಕ್ಟೇರ್, ಹಸಿಮೆಣಸಿಗೆ 142 ರೈತರು 177 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಒಟ್ಟು 20750 ರೈತರು 12396 ಹೆಕ್ಟೇರ್ ತೋಟಗಾರಿಕಾ ಪೈರಿಗೆ ಬೆಳೆವಿಮೆ ಕಂತು ಪಾವತಿಸಿದ್ದಾರೆ.ಬಾಳೆ ಗಡ್ಡೆ ನಾಟಿಗೆ, ಟಿಶ್ಯೂಕಲ್ಚರ್ ನಾಟಿಗೆ ತೋಟಗಾರಿಕೆ ಇಲಾಖೆಯ ಸಹಾಯಧನವಿದೆ. ಆದರೆ ಇದು ಸರ್ಕಾರದ ಅನುದಾನವನ್ನು ಅವಲಂಬಿಸಿದೆ. ಯಾತ್ರೀಕರಣ ಯೋಜನೆಯಲ್ಲಿ ಟ್ರೇಲರ್, ಬ್ರೆಷ್ ಕಟ್ಟರ್, ವೀಡ್ ಕಟ್ಟರ್, ಸಣ್ಣ ಟ್ರ್ಯಾಕ್ಟರ್, ಅಡಿಕೆ ಕೊಯ್ಲು ದೋಟಿ, ಹನಿ ನೀರಾವರಿಗೆ ಸಹಾಯಧನವನ್ನು ತೋಟಗಾರಿಕೆ ಇಲಾಖೆ ನೀಡುತ್ತದೆ. ಆದರೆ ಇದೆಲ್ಲವೂ ಸರ್ಕಾರದ ಅನುದಾನವನ್ನು ಅವಲಂಬಿಸಿದೆ.ಹಾನಗಲ್ಲ ತಾಲೂಕಿನ ಯಳವಟ್ಟಿ ಬಳಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸುವ ಯೋಜನೆ ಜಾರಿಯಲ್ಲಿದ್ದು, ಅದು ಆರಂಭವಾದರೆ ತೋಟಗಾರಿಕಾ ಹಣ್ಣಿನ ಬೆಳೆ ಬೆಳೆಯುವವರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಭರವಸೆ ರೈತರದ್ದಾಗಿದೆ.ಕೆಲವು ಬೆಳೆಗಳಿಗೆ ವಿಮೆ ಪರಿಹಾರ ವಿಳಂಬವಾಗುತ್ತಿರುವ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಹಾನಗಲ್ಲ ತಾಲೂಕು ತೋಟಗಾರಿಕಾ ಬೆಳೆಗಳಿಗೆ ಉತ್ತಮ ಭೂಮಿ ವಾತಾವರಣ ಹೊಂದಿದ್ದು, ಇಲಾಖೆಯ ಸಹಾಯ ಧನವನ್ನು ಕೂಡ ಸಕಾಲಿಕವಾಗಿ ರೈತರಿಗೆ ನೀಡಲಾಗುತ್ತಿದೆ. ಸಹಾಯಧನದಲ್ಲಿ ಹತ್ತು ಹಲವು ಯೋಜನೆಗಳ ಮೂಲಕ ರೈತರಿಗೆ ತೋಟಗಾರಿಕಾ ಬೆಳೆ ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹಾನಗಲ್ಲ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಜಿ.ಆರ್. ವೀರಭದ್ರಸ್ವಾಮಿ ಹೇಳಿದರು.