ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಥೆಯ ರಚನೆಯ ಪ್ರಾರಂಭ ನಮ್ಮ ಮನೆಯಲ್ಲಿ ತಾಯಿ ಅಥವಾ ಅಜ್ಜಿ ಅವರು ಹೇಳುವ ಕಥೆಗಳಿಂದ ಪ್ರಾರಂಭವಾಗುತ್ತದೆ. ಅವರು ಹೇಳಿದ ಕಥೆಗಳನ್ನು ನೆನಪಿಸಿಕೊಂಡು ಅವುಗಳನ್ನು ಬರಹ ರೂಪಕ್ಕೆ ಇಳಿಸಿದರೆ, ಅವು ಉತ್ತಮವಾದ ಕತೆಗಳಾಗುತ್ತವೆ ಎಂದು ಪತ್ರಕರ್ತೆ ಉಷಾ ಪ್ರೀತಮ್ ಹೇಳಿದ್ದಾರೆ.ಬಾಳೆಲೆಯ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ನಡೆದ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿನಿಧಿ ಮುಕ್ತ ಕಥಾ ಸ್ಪರ್ಧೆಯ ಬಹುಮಾನ ವಿತರಣಾ ಸಭೆಯಲ್ಲಿ ಕಥಾ ರಚನಾ ಕೌಶಲ್ಯದ ಕುರಿತು ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ಕೊಡಗಿನ ಲೇಖಕರಿಗೆ ಕಥೆ ಬರೆಯುವ ಸ್ಪರ್ಧೆ ಏರ್ಪಡಿಸಿ ಜಯಗಳಿಸಿದವರನ್ನು ಗೌರವಿಸುವ ಮೂಲಕ ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ದತ್ತಿ ಸ್ಥಾಪಿಸಲಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.1954ರಲ್ಲಿ ನಂದಾದೀಪ ಎನ್ನುವ ಮಾಸಿಕ ಪತ್ರಿಕೆ ಪ್ರಾರಂಭಿಸುವ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟ ಬಿ ಎಸ್ ಗೋಪಾಲಕೃಷ್ಣ ಕೊಡಗಿನ ಪತ್ರಿಕಾ ರಂಗದ ಭೀಷ್ಮ ಎಂದು ಗುರುತಿಸಿಕೊಂಡವರು. ಹಲವಾರು ಸಾಹಿತ್ಯಿಕ ಕೃತಿಗಳನ್ನು ನೀಡಿರುವ ಗೋಪಾಲಕೃಷ್ಣ ಸಾಹಿತ್ಯ ಸೇವೆ ಮಹತ್ತರವಾದದ್ದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವಿದೆ ಎಂದರು.ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿಯ ಮುಕ್ತ ಕಥಾ ಸ್ಪರ್ದೆಯಲ್ಲಿ ಜಿಲ್ಲೆಯ 23 ಕತೆಗಾರರು ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಕುಶಾಲನಗರದ ಕುಕ್ಕನೂರು ರೇಷ್ಮಾ ಮನೋಜ್ ಮತ್ತು ದ್ವಿತೀಯ ಸ್ಥಾನವನ್ನು ನಾಪೋಕ್ಲಿನ ಮಧುಸೂಧನ್ ಬಿಳಿಗುಲಿ, ತೃತಿಯ ಸ್ಥಾನವನ್ನು ಮೂರ್ನಾಡಿನ ಕಿಗ್ಗಾಲು ಗಿರೀಶ್ ಪಡೆದುಕೊಂಡಿದ್ದು ಅವರನ್ನು ಗೌರವಿಸಲಾಯಿತು.
ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕ ಡಾ. ಮುಲ್ಲೆಂಗಡ ರೇವತಿ ಪೂವಯ್ಯ ಮತ್ತು ಬಾಳಲೆ ವಿಜಯಲಕ್ಷ್ಮಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ. ಚಂದ್ರಶೇಖರ್ ತೀರ್ಪುಗಾರರಾಗಿದ್ದರು.ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಹಳ್ಳಿಯ ಮಟ್ಟದಲ್ಲಿ ಹಳ್ಳಿಯ ಶಾಲೆಗಳಲ್ಲಿ ಮಾಡುತ್ತಿರುವುದು ಒಂದು ಉತ್ತಮ ವಿಚಾರ ಎಂದರು.ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಳೇರ ದಯಾ ಚಂಗಪ್ಪ ಮಾತನಾಡಿ, ಬಾಳೆಲೆ ಹೋಬಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಸಮಿತಿ ರಚನೆಯ ಬಳಿಕ ಇದು ಮೊದಲ ಕಾರ್ಯಕ್ರಮವಾಗಿದೆ ಎಂದರು.ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುಕ್ಕಾಟಿರ ಜಾನಕಿ ಕಾವೇರಪ್ಪ ಸ್ವಾಗತಿಸಿದರು. ಬಾಳೆಲೆಯ ವಿಜಯಲಕ್ಷ್ಮಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕೆ.ಚಂದ್ರಶೇಖರ್ ಪ್ರಾರ್ಥಿಸಿದರು. ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಡಿಞಾರಂಡ ಪ್ರಭು ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಬಾಳೆಲೆ ಎಜುಕೇಶನ್ ಸೊಸೈಟಿಯ ನಿರ್ದೇಶಕ ಕಿರದಂಡ ದೇವಯ್ಯ, ಬಾಳೆಲೆಯ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯನ್.ಕೆ.ಪ್ರಭು, ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ ವಿ ರಾಮಕೃಷ್ಣ ಮತ್ತು ಶೀಲಾ ಬೋಪಣ್ಣ ಬಾಳೆಲೆ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಸಿ. ವಿ ಚಂದ್ರಕಲಾ ಇದ್ದರು.
ಅಧ್ಯಾಪಕ ಎಂ.ಪಿ. ರಾಘವೇಂದ್ರ ನಿರೂಪಿಸಿದರು. ಬಹುಮಾನ ವಿವರಣೆಯ ವಿವರವನ್ನು ಉಪನ್ಯಾಸಕರಾದ ಡಿ.ಎನ್ ಸುಬ್ಬಯ್ಯ ನಡೆಸಿಕೊಟ್ಟರು.ಬಾಲಕಿ ಸೃಷ್ಟಿ ವಿನೋದ್, ಪೊಡಮಾಡ ಭವಾನಿ, ವತ್ಸಲಾ ನಾರಾಯಣ, ಸಿ.ವಿ.ಚಂದ್ರಕಲಾ ಹಾಡುಗಳನ್ನು ಹಾಡಿದರು.