ಸಾರಾಂಶ
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ನಾಲ್ವರು ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಮತ್ತೊಂದೆಡೆ, ಏಷ್ಯಾನೆಟ್ ಸುವರ್ಣನ್ಯೂಸ್ ವರದಿಗಾರನ ಮೇಲೆ ಸೌಜನ್ಯ ಪರ ಹೋರಾಟಗಾರರು ಹಲ್ಲೆ ಮಾಡಿದ್ದಾರೆ.
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಸೌಜನ್ಯಾ ಮನೆ ಮುಂದೆ ಬುಧವಾರ ಹೈಡ್ರಾಮಾ ನಡೆದಿದೆ. ಕ್ಷೇತ್ರದ ಕುರಿತು ಅಪಪ್ರಚಾರ ನಡೆಸಲಾಗುತ್ತಿದೆ ಎಂದು ನಾಲ್ವರು ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಆಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ನಡೆಸಿದ್ದಾರೆ. ಇದರ ಬೆನ್ನಲ್ಲೇ ಗ್ರಾಮಸ್ಥರು ಧರ್ಮಸ್ಥಳ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದು, ಯೂಟ್ಯೂಬರ್‌ಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಗ್‌ಬಾಸ್ ರಿಯಾಲಿಟಿ ಶೋದ ಸ್ಪರ್ಧಿಯಾಗಿದ್ದ ರಜತ್ ಬುಧವಾರ ಸೌಜನ್ಯಾ ಮನೆಗೆ ಭೇಟಿ ನೀಡಿ ವಾಪಸಾಗುತ್ತಿದ್ದರು. ಅವರನ್ನು ಯೂಟ್ಯೂಬ್ ಚಾನಲ್‌ನವರು ಸಂದರ್ಶನ ಮಾಡುತ್ತಿದ್ದರು. ಈ ವೇಳೆ ಜನರು ಏಕಾಏಕಿ ಜಮಾಯಿಸಿದರು. ಗ್ರಾಮದ ಕೆಲವರು ಯೂಟ್ಯೂಬ್ ಚಾನಲ್‌ನವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಕ್ಯಾಮೆರಾ ಸೇರಿದಂತೆ ಇನ್ನಿತರ ಉಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಈ ವೇಳೆ ಪೊಲೀಸರು ಜನರನ್ನು ಅಲ್ಲಿಂದ ಚದುರಿಸಲು ಅನಿವಾರ್ಯವಾಗಿ ಲಾಠಿ ಬೀಸಿದ್ದಾರೆ. ಯುಟ್ಯೂಬರ್‌ಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಕುಡ್ಲ ರ್‍ಯಾಂಪೇಜ್ ಯೂಟ್ಯೂಬ್ ಚಾನೆಲ್‌ನ ಅಜಯ್ ಅಂಚನ್, ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲ ರ್‍ಯಾಂಪೇಜ್ ಛಾಯಾಗ್ರಾಹಕ ಹಲ್ಲೆಗೆ ಒಳಗಾದವರು.
ಏಷ್ಯಾನೆಟ್ ಸುವರ್ಣನ್ಯೂಸ್ ವರದಿಗಾರನ ಮೇಲೂ ಹಲ್ಲೆ
ಬೆಳ್ತಂಗಡಿ : ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದ 4 ಯೂಟ್ಯೂಬರ್‌ಗಳನ್ನು ಸಂದರ್ಶಿಸಲು ತೆರಳುತ್ತಿದ್ದ ಕನ್ನಡಪ್ರಭ ಬಳಗದ ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಯ ವರದಿಗಾರನ ಮೇಲೆ ಹಲ್ಲೆ ನಡೆಸಲಾಗಿದೆ.
ಸೌಜನ್ಯಾ ಪರ ಹೋರಾಟದಲ್ಲಿ ಗುರುತಿಸಿಕೊಂಡಿರುವವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುವರ್ಣನ್ಯೂಸ್ ವರದಿಗಾರ ಹರೀಶ್ ದೂರಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಬಗ್ಗೆ ವರದಿ ಮಾಡುತ್ತಿದ್ದಾಗ ಸೌಜನ್ಯ ಪರ ಹೋರಾಟಗಾರರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ.