ಲಾಠಿ-ಗೋಲಿ ಖಾಯೇಂಗೇ... ಮಂದಿರ್ ವಹೀ ಬನಾಯೇಂಗೆ...

| Published : Jan 22 2024, 02:18 AM IST

ಲಾಠಿ-ಗೋಲಿ ಖಾಯೇಂಗೇ... ಮಂದಿರ್ ವಹೀ ಬನಾಯೇಂಗೆ...
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯ ಬೆಂಕಿ ಭೀಮಭಟ್ಟ ಮೋತಕಪಲ್ಲಿ ಅವರು 1990ರ ಅಕ್ಟೋಬರ್ 30ಕ್ಕೆ ಅಯೋಧ್ಯೆಯಲ್ಲಿ ನಿಗದಿಯಾಗಿದ್ದ ಕರಸೇವೆಗೆ ಹೋಗಿ ಪೊಲೀಸರಿಂದ ಛಡಿಯೇಟು ತಿಂದು ಯಾತನೆ ಅನುಭವಿಸಿದ ಸಂಗತಿ ಬಹುತೇಕರಿಗೆ ಗೊತ್ತೇ ಇಲ್ಲ.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಯೋಧ್ಯೆಯಲ್ಲಿ ಪ್ರಭು ರಾಮನ ಮಂದಿರ ನಿರ್ಮಾಣಗೊಳ್ಳಬೇಕೆಂದು ಕನಸು ಕಂಡು ಸಂಕಲ್ಪ ಮಾಡಿದ್ದ ಕರಸೇವಕರಲ್ಲಿ ಕಲಬುರಗಿಯ ಬೆಂಕಿ ಭೀಮಭಟ್ಟ ಮೋತಕಪಲ್ಲಿ ಪ್ರಮುಖರು. 1990ರ ಅಕ್ಟೋಬರ್ 30ಕ್ಕೆ ಅಯೋಧ್ಯೆಯಲ್ಲಿ ನಿಗದಿಯಾಗಿದ್ದ ಕರಸೇವೆಗೆ ಅವರು ಹೋಗಿ ಪೊಲೀಸರಿಂದ ಛಡಿಯೇಟು ತಿಂದು ಯಾತನೆ ಅನುಭವಿಸಿದ ಸಂಗತಿ ಬಹುತೇಕರಿಗೆ ಗೊತ್ತೇ ಇಲ್ಲ.

1990ರ ಅಕ್ಟೋಬರ್ 25ರಂದು ಕಲಬುರಗಿಯಿಂದ ಭೀಮಭಟ್ಟರು ಸೇರಿದಂತೆ 22 ಜನ ಕರಸೇವಕರು ದಿ. ಪ್ರಹ್ಲಾದರಾವ ಕುಳಗೇರಿ ಅವರ ನೇತೃತ್ವದಲ್ಲಿ ರೈಲಿನಲ್ಲಿ ಹೋಗಿದ್ದರು.

`ನಾವು ವಾರಣಾಸಿವರೆಗೂ ಟಿಕೆಟ್ ಪಡೆದುಕೊಂಡಿದ್ದೆವಾದರೂ ಇಟಾರ್ಸಿಯಲ್ಲೇ ವಿಎಚ್‍ಪಿ, ಆರ್‌ಎಸ್‍ಎಸ್ ಕಾರ್ಯಕರ್ತರು ನಮ್ಮನ್ನು ಇಳಿಸಿಕೊಂಡರು. ನಂತರ ಝಾನ್ಸಿಗೆ ಕರೆದೊಯ್ದು ಅಲ್ಲಿಯ ಗುರುದ್ವಾರದಲ್ಲಿ ಇಳಿಸಿ ಊಟ ಮಾಡಿಸಿ ಸಾತ್ನಾಕ್ಕೆ ಕರೆದೊಯ್ದರು. ತದನಂತರ ಬಸ್‍ನಲ್ಲಿ ಚಿತ್ರಕೂಟಕ್ಕೆ ಕರೆದೊಯ್ದರು. ಅಲ್ಲಿ ದಕ್ಷಿಣ ಭಾರತದಿಂದ ಬಂದಿದ್ದ 15-20 ಸಾವಿರ ಕರಸೇವಕರಿದ್ದರು. ಅಕ್ಟೋಬರ್ 27ರಂದು ಬಿಜೆಪಿ ನಾಯಕಿ ಉಮಾ ಭಾರತಿ, ಸಾಧ್ವಿ ಋತಾಂಬರಿ, ಬ್ರಹ್ಮಚಾರಿ ಕರಸೇವಕರನ್ನುದ್ದೇಶಿಸಿ ಮಾತನಾಡಿದ್ದರು'''' ಎಂದು ಭೀಮಭಟ್ಟರು `ಕನ್ನಡಪ್ರಭ'''' ದೊಂದಿಗೆ ಮಾತನಾಡುತ್ತ ಅಂದಿನ ದಿನಗಳನ್ನು ಮೆಲಕು ಹಾಕಿದರು.

ಬಿಜೆಪಿ ಮುಖಂಡ, ಮಾಜಿ ಸಚಿವ ರಾಮಚಂದ್ರಗೌಡರು ಕರ್ನಾಟಕ ತಂಡದ ನೇತೃತ್ವ ವಹಿಸಿದ್ದರು. ನಾವೆಲ್ಲ `ಲಾಠಿ-ಗೋಲಿ ಖಾಯೇಂಗೇ... ಮಂದಿರ್ ವಹೀ ಬನಾಯೇಂಗೆ'''' ಎಂದು ಘೋಷಣೆ ಕೂಗುತ್ತಿದ್ದೆವು. ಆಗ ಪೊಲೀಸರು ಕರಸೇವಕರನ್ನು ಬಸ್‍ಗಳಲ್ಲಿ ಕರೆದೊಯ್ದು ದೂರದ ನಿರ್ಜನ ಕಾಡಿನಲ್ಲಿ ಬಿಟ್ಟುಬರುತ್ತಿದ್ದರು. ಹಾಗೆಯೇ ನಮ್ಮನ್ನೂ ಅಕ್ಟೋಬರ್ 29ರಂದು ಪೊಲೀಸರು ಬಂಧಿಸಿದರು. ಖಾಸಗಿ ಶಾಲೆಯೊಂದನ್ನೇ ಜೈಲಾಗಿ ಪರಿವರ್ತಿಸಿ ಕೂಡಿಹಾಕಿದ್ದರು. ಅಲ್ಲದೇ ಮೈದಾನದಲ್ಲಿ ನಮ್ಮನ್ನು ನಿಲ್ಲಿಸಿ ಒಬ್ಬೊಬ್ಬರನ್ನೇ ಕರೆದು ಮನಬಂದಂತೆ ಹೊಡೆಯುತ್ತಿದ್ದರು. ಹೀಗೆಯೇ ಮೂರು ದಿನ ಕಳೆಯಿತು. ನವೆಂಬರ್ 1ರಂದು ಸಂಜೆ ಮೌವಾದಿಂದ ಬರ್ಗಡ್ ಸ್ಟೇಷನ್‍ಗೆ ತಂದುಬಿಟ್ಟರು. ಬಳಿಕ ಇಟಾರ್ಸಿಯಿಂದ ರೈಲಿನಲ್ಲಿ ವಾಪಸ್ ಕಳಿಸಿಕೊಟ್ಟರು. ನ. 3ರಂದು ಕಲಬುರಗಿಗೆ ವಾಪಸಾದೆವು ಎಂದು ಭೀಮಭಟ್ಟ ತಿಳಿಸಿದರು.

ಭೀಮಭಟ್ಟ ಅವರು ನಗರದ ಎನ್.ವಿ. ಪಿ.ಯು. ಕಾಲೇಜಿನ ಉದ್ಯೋಗಿಯಾಗಿದ್ದು, ವಿಶ್ವಮಧ್ವ ಮಹಾಪರಿಷತ್ತಿನ ಅಂಗಸಂಸ್ಥೆಯಾದ `ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ''''ಯ ಸಂಚಾಲಕರಾಗಿದ್ದಾರೆ.ದೇಶಕ್ಕಾಗಿ, ಧರ್ಮಕ್ಕಾಗಿ ತ್ಯಾಗ-ಬಲಿದಾನ ಮಾಡಲು ಇಂದಿಗೂ ಸಿದ್ಧ. ರಾಮ ಮಂದಿರಕ್ಕಾಗಿ ಏನನ್ನೂ ಮಾಡಲು ಸಿದ್ಧ ಎಂಬ ಸಂಕಲ್ಪದೊಂದಿಗೆ ಅಂದು 1990ರಲ್ಲಿ ಕರಸೇವೆಗೆ ಹೋಗಿದ್ದು, ಇಂದು ನಮ್ಮ ಆಶಯದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡಿರುವುದು ಸಾರ್ಥಕಭಾವ ಮೂಡಿಸಿದೆ.

- ಬೆಂಕಿ ಭೀಮಭಟ್ಟ ಮೋತಕಪಲ್ಲಿ, ಕರಸೇವಕರು, ಕಲಬುರಗಿ