ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

| Published : Dec 13 2024, 12:48 AM IST

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಖಂಡನೀಯ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಘಟನೆಯನ್ನು ಖಂಡಿಸಿ ಗುರುವಾರ ಹಾವೇರಿ-ಹಾನಗಲ್ಲ ರಸ್ತೆಯ ಹಾನಗಲ್ಲ ತಾಲೂಕಿನ ವರ್ದಿ ಕ್ರಾಸ್ ಬಳಿ ಪಂಚಮಸಾಲಿ ಮುಖಂಡರು ಪ್ರತಿಭಟನೆ ನಡೆಸಿದರು.

ಹಾನಗಲ್ಲ: ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸ್ ಲಾಠಿ ಪ್ರಹಾರ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಉತ್ತರ ಕರ್ನಾಟಕ ಹೋರಾಟ ವೇದಿಕೆ ಅಧ್ಯಕ್ಷ, ವಕೀಲ ಸೋಮಶೇಖರ ಕೋತಂಬರಿ ಆಗ್ರಹಿಸಿದರು.

ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಘಟನೆಯನ್ನು ಖಂಡಿಸಿ ಗುರುವಾರ ಹಾವೇರಿ-ಹಾನಗಲ್ಲ ರಸ್ತೆಯ ಹಾನಗಲ್ಲ ತಾಲೂಕಿನ ವರ್ದಿ ಕ್ರಾಸ್ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸರ್ಕಾರ ಹಾಗೂ ದೇಶಕ್ಕೆ ಅನ್ನ ಹಾಕುವ ಸಮಾಜ ಪಂಚಮಸಾಲಿ. ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರಗಳು ಹಿಂದೇಟು ಹಾಕುತ್ತಿರುವುದರ ಹಿಂದೆ ಇರುವ ಹುನ್ನಾರಗಳಿಗೆ ನಾಯಕರು ತುಪ್ಪ ಸುರಿಯಬಾರದು. ಇದು ಅತ್ಯಂತ ಕಷ್ಟದಲ್ಲಿ ಕೃಷಿ ಮಾಡಿಕೊಂಡು ಬದುಕುವ ಪಂಚಮಸಾಲಿ ಸಮುದಾಯದ ಹೋರಾಟ. ಈ ರೈತರ ಶಾಪ ಸರ್ಕಾರಕ್ಕೆ ತಟ್ಟೀತು. ಈಗ ನಾವು ಇನ್ನಷ್ಟು ಎಚ್ಚೆತ್ತುಕೊಂಡಿದ್ದೇವೆ. ಎಲ್ಲ ಹಂತದಲ್ಲಿ ನಮ್ಮ ಹೋರಾಟವಿದೆ. ಇದು ಪಕ್ಷಾತೀತ ಹೋರಾಟ ಹಾಗೂ ನಮಗೆ ನ್ಯಾಯ ಸಿಗುವವರೆಗೆ ಹೋರಾಟ ಎಂದು ಎಚ್ಚರಿಸಿದರು.

ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರನ್ನೇ ನೇಮಕ ಮಾಡದ ಸಿದ್ದರಾಮಯ್ಯ ಸರ್ಕಾರದಿಂದ ಹಿಂದುಳಿದವರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು, ಹಳ್ಳಿ ಹಳ್ಳಿಯಲ್ಲೂ ಈಗ ಕಿಚ್ಚು ಹೊತ್ತಿಕೊಂಡಿದೆ ಎಂದು ಹೇಳಿದರು.

ಮಾಜಿ ಶಾಸಕ ಶಿವರಾಜ ಸಜ್ಜನ ಮಾತನಾಡಿ, ರಾಜ್ಯ ಸರ್ಕಾರಕ್ಕೆ ದೌರ್ಜನ್ಯವೇ ಅಸ್ತ್ರವಾಗಿದೆ. ನ್ಯಾಯಯುತ ಹೋರಾಟಗಾರರ ಮೇಲೆ ಪೊಲೀಸ್‌ ದೌರ್ಜನ್ಯ ಮಾಡಿರುವುದು ಅಕ್ಷಮ್ಯ ಅಪರಾಧ. ಹೋರಾಟಗಾರ ಮೇಲೆ ದೌರ್ಜನ್ಯ ಎಸಗಿದರೆ ಪ್ರತಿಭಟನೆ ಇನ್ನೂ ಬಲಿಷ್ಠವಾಗುತ್ತದೆ. ಸರ್ಕಾರ ನ್ಯಾಯಯುತ ಬೇಡಿಕೆ ಈಡೇರಿಸುವ ಬದಲು ಸಮುದಾಯಗಳನ್ನು ಹತ್ತಿಕ್ಕುವ ಹುನ್ನಾರಕ್ಕೆ ಮುಂದಾಗಿರುವುದು ವಿಷಾದದ ಸಂಗತಿ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ನಮ್ಮ ಹೋರಾಟವಿದೆ ಎಂದರು.

ಜಿಪಂ ಮಾಜಿ ಸದಸ್ಯರ ಮಾಲತೇಶ ಸೊಪ್ಪಿನ ಮಾತನಾಡಿ, ದೌರ್ಜನ್ಯ ಎಸಗುವ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ. ನಮ್ಮ ಸಮಾಜದ ಮತ ಪಡೆದು ಅಧಿಕಾರಕ್ಕೆ ಬಂದಿರುವಿರಿ. ಮುಂದಿನ ದಿನಗಳಲ್ಲಿ ಪಂಚಮಸಾಲಿ ಹಾಗೂ ಅಖಂಡ ಲಿಂಗಾಯತ ಸಮಾಜ ನಿಮಗೆ ಸರಿಯಾದ ಉತ್ತರ ನೀಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸಮಸ್ಯೆ ಆಲಿಸಲು ಬರದೇ ಲಾಠಿ ಪ್ರಹಾರ ಮಾಡಿಸಿರುವುದು ಖಂಡನೀಯ. ಪೊಲೀಸ ದೌರ್ಜನ್ಯಕ್ಕೆ ಬಗ್ಗುವುದಿಲ್ಲ. ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.

ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಮಹದೇವಪ್ಪ ಬಾಗಸರ್, ಮುಖಂಡರಾದ ಕರಬಸಪ್ಪ ಶಿವೂರ, ಸಿದ್ದಲಿಂಗಪ್ಪ ಕಮಡೊಳ್ಳಿ, ಭರಮಣ್ಣ ಶಿವೂರ, ಮಹೇಶ ಕಮಡೊಳ್ಳಿ, ರಾಜಣ್ಣ ಬೆಟಗೇರಿ, ನಿಜಲಿಂಗಪ್ಪ ಮುದೆಪ್ಪನವರ, ಬಸವಣ್ಣೆಪ್ಪ ಬೆಂಚಳ್ಳಿ, ಮಧು ಪಾಣಿಗಟ್ಟಿ, ತಿರಕಪ್ಪ ಗೋದಿ, ಕಲವೀರಪ್ಪ ಪವಾಡಿ, ಶಂಭು ಪಾಟೀಲ, ಬಸಣ್ಣ ಆಲದಕಟ್ಟಿ, ಶೇಕಪ್ಪ ಕರಡಿ, ಪುಟ್ಟಪ್ಪ ಮಾಳಗಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ, ಮರಿಗೌಡ ಪಾಟೀಲ ಪಾಲ್ಗೊಂಡಿದ್ದರು. ಕೆಲ ಹೊತ್ತು ರಸ್ತೆ ತಡೆ ನಡೆಸಿದರು.

ಮನವಿ ಸ್ವೀಕಾರ: ತಹಸೀಲ್ದಾರ್‌ ಎಸ್. ರೇಣುಕಮ್ಮ ಪ್ರತಿಭಟನಾ ಸ್ಥಳವಾದ ವರ್ದಿ ಕ್ರಾಸ್‌ಗೆ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.