ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರ್ಕಾರದ 2 ವರ್ಷದ ಸಾಧನೆ ಹಾಗೂ ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಉದ್ದೇಶದಿಂದ ನವನಗರದ ಬಸ್ ನಿಲ್ದಾಣದ ಆವರಣದಲ್ಲಿ ಜೂ.28ರಿಂದ 30ರವರೆಗೆ ಹಮ್ಮಿಕೊಂಡ ವಸ್ತು ಪ್ರದರ್ಶನ ಮಳಿಗೆಗೆ ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವೈ. ಮೇಟಿ ಶನಿವಾರ ಚಾಲನೆ ನೀಡಿದರು.ವಾರ್ತೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹಮ್ಮಿಕೊಂಡ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಅವರು, ಸರ್ಕಾರದ ಯೋಜನೆಗಳು ಹಾಗೂ ಸಾಧನೆ ಬಿಂಬಿಸುವ ಮಾಹಿತಿಗಳನ್ನು ವೀಕ್ಷಣೆ ಮಾಡಿದರು. ನಂತರ ಸರ್ಕಾರದ ಯೋಜನೆಗಳ ಮಾಹಿತಿಗಳ ವಸ್ತುಪ್ರದರ್ಶನ ಕುರಿತು ತಮ್ಮ ಅನಿಸಿಕೆಗಳನ್ನು ಪುಸ್ತಕದಲ್ಲಿ ಬರೆಯುವ ಮೂಲಕ ವ್ಯಕ್ತಪಡಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ಸಾಧನೆ ಬಿಂಬಿಸುವ ಹಾಗೂ ಜನಪರ ಯೋಜನೆಗಳ ಮಾಹಿತಿ ನೀಡುವ ವಸ್ತು ಪ್ರದರ್ಶನ ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಸಂಗಪ್ಪ ಎಂ, ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ತಹಸೀಲ್ದಾರ ಅಮರೇಶ ಪಮ್ಮಾರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಹಾಯಕ ಸಂಚಾರಿ ನಿಯಂತ್ರಣಾಧಿಕಾರಿ ಕಳ್ಳೊಳ್ಳಿ, ತಾಲೂಕು ಗ್ಯಾರಂಟಿ ಯೋಜನೆ ಪ್ರಾಧಿಕಾರ ಅಧ್ಯಕ್ಷ ಎಸ್.ಎನ್. ರಾಂಪೂರ ಸೇರಿದಂತೆ ನಾಗರಾಜ ಹದ್ಲಿ, ದ್ಯಾಮಣ್ಣ ಗಾಳಿ ಹಾಗೂ ಇತರರು ಉಪಸ್ಥಿತರಿದ್ದರು.ವಸ್ತು ಪ್ರದರ್ಶನದಲ್ಲಿ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಗಳ ಸಮಗ್ರ ಮಾಹಿತಿ ಜೊತೆಗೆ ಅನ್ನದಾತನ ಮೊಗದಲ್ಲಿ ಮಂದಹಾಸ, ಸರ್ವರಿಗೂ ಸೂರು, ಮಹಿಳೆಯರಿಗೆ ಶಕ್ತಿ, ಸರ್ವರಿಗೂ ಗುಣಮಟ್ಟದ ಆರೋಗ್ಯ ಸೌಲಭ್ಯ, ಗ್ಯಾರಂಟಿ ಬದುಕು, ಪ್ರಗತಿಯತ್ತ ಕರ್ನಾಟಕ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪಡೆದ ಫಲಾನುಭವಿಗಳ ಮಾಹಿತಿ ಸೇರಿದಂತೆ ಅನೇಕ ಯೋಜನೆಗಳ ಸಾಧನೆಗಳ ಮಾಹಿತಿ ಅಳವಡಿಸಲಾಗಿತ್ತು.
ಸಿಎಂ ಜೊತೆಗೆ ಶಾಸಕ ಮೇಟಿ ಸೆಲ್ಫಿ: ವಸ್ತು ಪ್ರದರ್ಶನದಲ್ಲಿ ನಾಡಿನ ಜನರ ಬದುಕು ಬೆಳಗಿಸಿದ ಗ್ಯಾರಂಟಿ ಯೋಜನೆಗಳ ಸಮಗ್ರ ಮಾಹಿತಿ, ಯಶೋಗಾಥೆಯನ್ನೊಳಗೊಂಡ ಗ್ಯಾರಂಟಿಯ ಸಮರ್ಪಣೆ, ಅಭಿವೃದ್ಧಿಯ ಸಂಕಲ್ಪದ 2 ವರ್ಷಗಳ ಸಾಧನಾ ಸಂಭ್ರಮದ ಪುಸ್ತಕವನ್ನು ಮುಖ್ಯಮಂತ್ರಿಗಳಿಂದ ಪಡೆದುಕೊಳ್ಳುವಂತೆ ಬಿಂಬಿಸುವ ಸೆಲ್ಪಿಯನ್ನು ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ ತೆಗೆದುಕೊಂಡಿರುವುದು ಎಲ್ಲರ ಗಮನ ಸೆಳೆಯಿತು. ಸೆಲ್ಪಿಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಎಂ. ಸೇರಿದಂತೆ ಇತರರು ಭಾಗವಹಿಸಿದ್ದರು.