ವಕೀಲ ಕೆ.ಎಂ. ಕೃಷ್ಣ ಭಟ್‌ ರಚಿಸಿದ ‘ಇಂದ್ರ ಧನುಸ್‌’ ಲಲಿತ ಪ್ರಬಂಧ ಸಂಕಲನ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಲೋಕಾರ್ಪಣೆಗೊಂಡಿತು.

ಮಂಗಳೂರು: ವಕೀಲ ಕೆ.ಎಂ. ಕೃಷ್ಣ ಭಟ್‌ ರಚಿಸಿದ ‘ಇಂದ್ರ ಧನುಸ್‌’ ಲಲಿತ ಪ್ರಬಂಧ ಸಂಕಲನ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಲೋಕಾರ್ಪಣೆಗೊಂಡಿತು. ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ಡಾ. ವಸಂತ ಕುಮಾರ ಪೆರ್ಲ, ಕೆ.ಎಂ. ಕೃಷ್ಣ ಭಟ್‌ ಅವರು ಕಳೆದ 65 ವರ್ಷದಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಆರನೇ ಕೃತಿಯಾಗಿ ಲಲಿತ ಪ್ರಬಂಧಗಳ ಸಂಕಲನ ಹೊರಬಂದಿದೆ. ಲಲಿತ ಪ್ರಬಂಧಗಳು ಗಾತ್ರ, ಸ್ವರೂಪದಲ್ಲಿ ಚಿಕ್ಕದಾದರೂ, ದೊಡ್ಡ ಆಶಯ ಹೊಂದಿದೆ. ಚಿಕಿತ್ಸಕ ದೃಷ್ಟಿಯಿಂದ ವಿಷಯಗಳನ್ನು ನೋಡಿ ಲಾಲಿತ್ಯಪೂರ್ಣವಾದ ಭಾಷೆಯಲ್ಲಿ ಬರೆದಿದ್ದಾರೆ. ಲಲಿತ ಪ್ರಬಂಧಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಕೃಷ್ಣ ಭಟ್‌ ಅವರು ತನ್ನ ಅರಿವಿನ ಹಿನ್ನೆಲೆಯಲ್ಲಿ ಲಲಿತ ಪ್ರಬಂಧ ರಚಿಸಿದ್ದಾರೆ. ಕೃತಿಯಲ್ಲಿ ಮನೋಜ್ಞ ಲೇಖನಗಳಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಎಂ.ವಿ. ಶಂಕರ ಭಟ್‌ ಮಾತನಾಡಿ, ಕೃಷ್ಣ ಭಟ್‌ ಅವರು ಉತ್ತಮ ಸಾಹಿತಿಯಾಗಿದ್ದು, ತನ್ನ ಅನುಭವವನ್ನು ಲಘು ದಾಟಿಯಲ್ಲಿ ಬರೆದಿದ್ದಾರೆ ಎಂದರು.ಕೃತಿಕಾರ ಕೆ.ಎಂ. ಕೃಷ್ಣ ಭಟ್‌ ಮಾತನಾಡಿ, ನಾನು 10ನೇ ತರಗತಿಯಲ್ಲಿ ಓದುತ್ತಿರುವ ಸಂದರ್ಭದಲ್ಲೇ ಸಾಹಿತ್ಯ ರಚನೆ ಆರಂಭಿಸಿದ್ದೆ. ಕಸ್ತೂರಿ ಪತ್ರಿಕಯಲ್ಲಿ ಪ್ರಕಟವಾಗುತ್ತಿದ್ದ ನನ್ನ ಲೇಖನಗಳಿಗೆ ಸಿಗುತ್ತಿದ್ದ ಗೌರವಧನ ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರೆಯಲು ಕಾರಣವಾಗಿದೆ ಎಂದು ಹೇಳಿದರು.

ಲೇಖಕ ಅನಂತ ಸುಬ್ರಹ್ಮಣ್ಯ ಶರ್ಮಾ ಸ್ವಾಗತಿಸಿ, ವಂದಿಸಿದರು.