ಪಾಲಿಮರ್, ಪ್ಲಾಸ್ಟಿಕ್ ಡಿಪ್ಲೊಮಾ ಕೋರ್ಸ್‌ಗಳ ಪ್ರಾರಂಭ

| Published : Jul 23 2025, 04:11 AM IST

ಸಾರಾಂಶ

ಪಾಲಿಮರ್, ಪ್ಲಾಸ್ಟಿಕ್ ಕೈಗಾರಿಕೆ ಕುರಿತ ಕೋರ್ಸ್‌ಗಳನ್ನು ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಮೈಸೂರಿನ ಕೇಂದ್ರೀಯ ಪೆಟ್ರೋ ಕೆಮಿಕಲ್ಸ್, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ ಮತ್ತು ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ ಎಂಬ ಎರಡು ಹೊಸ ಕೋರ್ಸ್‌ಗಳನ್ನು ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪಾಲಿಮರ್, ಪ್ಲಾಸ್ಟಿಕ್ ಕೈಗಾರಿಕೆ ಕುರಿತ ಕೋರ್ಸ್‌ಗಳನ್ನು ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಮೈಸೂರಿನ ಕೇಂದ್ರೀಯ ಪೆಟ್ರೋ ಕೆಮಿಕಲ್ಸ್, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ ಮತ್ತು ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ ಎಂಬ ಎರಡು ಹೊಸ ಕೋರ್ಸ್‌ಗಳನ್ನು ಆರಂಭಿಸಿದೆ ಎಂದು ಸಂಸ್ಥೆಯ ಸಹಾಯಕ ತಾಂತ್ರಿಕ ಅಧಿಕಾರಿ ಲಕ್ಷ್ಮಣ್ ಹೇಳಿದರು.

ಹತ್ತನೇ ತರಗತಿ ಉತ್ತೀರ್ಣರಾದವರು ಮೂರು ವರ್ಷದ ಕೋರ್ಸ್‌ಗೆ ಸೇರಬಹುದು. ಪಿಯುಸಿ (ವಿಜ್ಞಾನ) ಅಥವಾ ಐಟಿಐ ಓದಿರುವವರು ಎರಡು ವರ್ಷದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2025-26ನೇ ಸಾಲಿನ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಆರಂಭಗೊಂಡಿದ್ದು, ಮೈಸೂರಿನ ಸಿಪೆಟ್‌ನ ಕೋರ್ಸ್‌ಗಳಿಗೆ ಆಯ್ಕೆ ಮಾಡುವ ಸಮಯದಲ್ಲಿ ಕರ್ನಾಟಕದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಇಲ್ಲಿ ವ್ಯಾಸಂಗ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ದೊರಕಿದೆ. ಅನೇಕರು ಸ್ವ-ಉದ್ಯೋಗ ಆರಂಭಿಸಿದ್ದಾರೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ, ವಿದ್ಯಾರ್ಥಿ ವೇತನದ ಸೌಲಭ್ಯವೂ ಇದೆ. ಪ್ರತಿ ಸೆಮಿಸ್ಟರ್‌ಗೆ 20 ಸಾವಿರ ರು.ವರೆಗೆ ಖರ್ಚು ಬರಲಿದೆ ಎಂದರು.

ಪ್ಲಾಸ್ಟಿಕ್ ವೈವಿಧ್ಯಮಯ ಬಳಕೆ, ಪ್ಲಾಸ್ಟಿಕ್ ಮೌಲ್ಡಿಂಗ್, ಪ್ಲಾಸ್ಟಿಕ್ ಸಂಸ್ಕರಣೆ, ಪ್ಲಾಸ್ಟಿಕ್ ಗುಣಮಟ್ಟ ಪರಿಶೀಲನೆ, ಆಧುನಿಕ ವಿನ್ಯಾಸದಲ್ಲಿ ಪ್ಲಾಸ್ಟಿಕ್ ವಸ್ತುಗಳ ತಯಾರಿಕ, ಪ್ಲಾಸ್ಟಿಕ್ ಮರು ಬಳಕೆ ವಿಧಾನ, ಪ್ಲಾಸ್ಟಿಕ್ ಪೈಪ್‌ಗಳು ಮತ್ತು ಇನ್ನಿತರ ವಸ್ತುಗಳ ತಯಾರಿಕೆ, ಮಾರುಕಟ್ಟೆ, ದರ ಪರಿಷ್ಕರಣೆ ಕುರಿತಂತೆ ಕಲಿಸಿಕೊಡಲಾಗುವುದು ಎಂದರು.

ಆಟೋ ಮೊಬೈಲ್ ಕೈಗಾರಿಕೆಗಳು, ವಾಹನದ ಬಿಡಿ ಭಾಗಗಳನ್ನು ತಯಾರಿಸುವ ಉದ್ಯಮಗಳು, ಪಿವಿಸಿ ಪೈಪ್ ತಯಾರಿಕಾ ಕಂಪನಿಗಳು ಮತ್ತು ವಿದ್ಯುನ್ಮಾನ, ಪ್ಲಾಸ್ಟಿಕ್ ಉತ್ಪಾದನಾ ಕಂಪನಿಗಳು, ಆಹಾರೋದ್ಯಮ, ವೈದ್ಯಕೀಯ ಕ್ಷೇತ್ರ, ಆಗ್ರೋ ಕೆಮಿಕಲ್ಸ್ ಅಂಡ್ - ಫರ್ಟಿಲೈಸರ್ ಕ್ಷೇತ್ರ, ಎಲೆಕ್ಟ್ರಿಕಲ್ಸ್, ಎಲೆಕ್ಟ್ರಿಕಲ್ಸ್ ಕ್ಷೇತ್ರ, ಆಹಾರೋದ್ಯಮ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಬಹುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಹಿರಿಯ ಸಹಾಯಕ ಮಹೇಶ್ ಇದ್ದರು.