ಸಾರಾಂಶ
ಶಿರಹಟ್ಟಿ: ಶಿರಹಟ್ಟಿ ತಾಲೂಕು ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿದ್ದು, ಸರ್ಕಾರ ರೈತರ ಹಿತ ಕಾಪಾಡಲು ಅತ್ಯಂತ ಮಹತ್ವವಾದ ಇಟಗಿ- ಸಾಸಲವಾಡ ಏತ ನೀರಾವರಿ ಯೋಜನೆಯನ್ನು ರೂಪಿಸಿದ್ದು, ಅದರ ಅನುಷ್ಠಾನಕ್ಕೆ ಅಧಿಕಾರಿಗಳೇ ಹೊಣೆಯಾಗಿರುತ್ತಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ತಾಲೂಕಿನ ಹೊಳೆ- ಇಟಗಿ ಗ್ರಾಮದ ಹತ್ತಿರ ಇಟಗಿ- ಸಾಸಲವಾಡ ಬಳಿ ಅನುಷ್ಠಾನಗೊಳಿಸಿದ ಯೋಜನೆ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಮಂಗಳವಾರ ಶಾಸಕರು ಚಾಲನೆ ನೀಡಿ ಮಾತನಾಡಿದರು. ೧೯೯೦-೯೨ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದ್ದನ್ನು ಸ್ಮರಿಸಿದ ಅವರು ಆರಂಭದಲ್ಲೇ ಪೂರ್ಣ ಪ್ರಮಾಣದ ನೀರು ಹರಿಸಲು ಸಾಧ್ಯವಾಗದೆ ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದ ಈ ಯೋಜನೆಗೆ ಮತ್ತೆ ಮರು ಜೀವ ತುಂಬಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ ಎಂದರು. ಇಟಗಿ- ಸಾಸಲವಾಡ, ತಂಗೋಡ, ಕನಕವಾಡ, ಹೆಬ್ಬಾಳ, ತೊಳಲಿ, ಕಲ್ಲಾಗನೂರ, ವಿಠಲಾಪೂರ, ಬಸಾಪೂರ, ತೆರೆದಹಳ್ಳಿ, ಕಬ್ಬೇರಹಳ್ಳಿ ಸೇರಿದಂತೆ ಒಟ್ಟು ೧೧ ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಒದಗಿಸಿ, ೧.೯೮೪ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಉದ್ದೇಶ ಹೊಂದಿದ ಈ ಬೃಹತ್ ನೀರಾವರಿ ಯೋಜನೆ ಸಮರ್ಪಕ ನಿರ್ವಹಣೆ ಮತ್ತು ಅನುದಾನದ ಕೊರತೆಯಿಂದ ನನೆಗುದಿಗೆ ಬಿದ್ದಿತ್ತು. ವಿಪರ್ಯಾಸವೆಂದರೆ ಆರಂಭವಾದಾಗಿನಿಂದಲೂ ಒಂದಿಲ್ಲಾ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಾ ಬಂದ ಈ ಯೋಜನೆ ಹನಿ ನೀರು ರೈತರ ಜಮೀನಿಗೆ ತಲುಪದಂತಾಗಿತ್ತು. ರೈತರ ಆಶಾದಾಯಕವಾದ ಈ ಯೋಜನೆಗೆ ಸದ್ಯ ಮರು ಜೀವ ಬಂದಂತಾಗಿದೆ ಎಂದು ತಿಳಿಸಿದರು.
ತಾಲೂಕನ್ನು ಸದಾ ಹಚ್ಚಹಸಿರಾಗಿಡಲು ಬಯಸಿ ಇಟಗಿ-ಸಾಸಲವಾಡ ಏತ ನೀರಾವರಿ, ಕೆರೆ ತುಂಬಿಸುವಂತಹ ಯೋಜನೆಗಳನ್ನು ಕೈಗೊಂಡರೂ ಅವುಗಳನ್ನು ಸಾಕಾರಗೊಳಿಸುವಲ್ಲಿ ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ನಿಷ್ಕಾಳಜಿ ತೋರುತ್ತಿದ್ದಾರೆ ಎನ್ನುವ ಆರೋಪ ಈ ಭಾಗದ ಕೆಲ ರೈತರಿಂದ ಕೇಳಿಬರುತ್ತಿದ್ದು, ಇದೀಗ ಎಲ್ಲ ಆರೋಪ, ಸಮಸ್ಯೆಗಳು ದೂರಾಗಿವೆ ಎಂದು ತಿಳಿಸಿದರು.ಕಳೆದ ೫ ವರ್ಷ ದುರಸ್ತಿ ಮಾಡದೇ ನನೆಗುದಿಗೆ ಬಿದ್ದ ಯೋಜನೆ ಕುರಿತಾಗಿ ಈ ಹಿಂದೆ ಅಧಿವೇಶನದಲ್ಲೂ ಚರ್ಚೆ ಮಾಡಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಸರ್ಕಾರ ಇದರ ಫಲವಾಗಿ ೫೦ ಲಕ್ಷ ಅನುದಾನ ಬಿಡುಗಡೆ ಮಾಡಿದ್ದರಿಂದ ದುರಸ್ತಿ ಮಾಡಿ ಇಂದು ಚಾಲನೆ ನೀಡಲಾಯಿತು ಎಂದರು.
ಸದ್ಯ ಈ ಯೋಜನೆ ಕೆಎನ್‌ಎನ್‌ಎಲ್ ನಿಗಮ ಬೆಂಗಳೂರು ಇದರ ಅಪರ ತುಂಗಾ ವ್ಯಾಪ್ತಿಯ ಈ ಇಟಗಿ-ಸಾಸಲವಾಡ ಯೋಜನೆ ಮುನಿರಾಬಾದ ಜೋನ್ ವ್ಯಾಪ್ತಿಗೆ ಒಳಪಟ್ಟಿದೆ.ತಂಗೋಡ, ಹೆಬ್ಬಾಳ, ಇಟಗಿ ಪಂಚಾಯತ ಸೇರಿ ಕಾಲುವೆ ಹೂಳು ತೆಗೆಯುವ ಕಾರ್ಯಕ್ರಮ ಹಾಕಿಕೊಳ್ಳಬೇಕು. ಕಾಲುವೆಗಳು ಒಡೆದಿದ್ದು ರಿಪೇರಿ ಕಾರ್ಯವನ್ನು ಮಾಡಿಸಲು ಹೆಚ್ಚುವರಿ ಅನುದಾನ ತರಲು ಪ್ರಯತ್ನಿಸುವುದಾಗಿ ಭರವಸೆ ನಿಡಿದರು. ಸದ್ಯ ರಾಜ್ಯ ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಇದು ಆಡಳಿತ ಪಕ್ಷದ ಸಚಿವರು, ಶಾಸಕರು ಮಾಡುವ ಗಂಭೀರ ಆರೋಪವಾಗಿದೆ ಎಂದು ತಿಳಿಸಿದರು. ಈ ವೇಳೆಗೆ ಶಿವಯೋಗಿ ನಂದಿಬೇವೂರುಮಠ, ಮಂಜುನಾಥ ಶಂಕಿನದಾಸರ, ಎಸ್.ಎಸ್. ಪಾಟೀಲ, ಕೆಎನ್‌ಎನ್‌ಎಲ್ ಎಇಇ ರಮೇಶ, ತಾಪಂ ಇಒ ರಾಮಣ್ಣ ದೊಡ್ಡಮನಿ, ಮಲ್ಲಿಕಾರ್ಜುನ ಪಟೀಲ, ಜಾನು ಲಮಾಣಿ, ಶಾಂತಣ್ಣ ಬಳ್ಳಾರಿ, ಸುರೇಶ ಬಳ್ಳಾರಿ, ಜಿತು ಪಾಟೀಲ, ಶರಣಪ್ಪಗೌಡ ಪಾಟೀಲ, ಕುಮಾರ ಕೆಂಗೊಂಡ, ಶಂಕರ ಬಾವಿ, ಮಹೇಶ್ ಗೌಡ್ರು ತೆಗ್ಗಿನಮನಿ, ನಾಗಯ್ಯ ಗಡ್ಡಿ, ಪ್ರವೀಣ ಬಳ್ಳಾರಿ, ಹೇಮಂತ ಕೆಂಗೊಂಡ, ಈಶಪ್ಪ ಹೊನ್ನಪ್ಪನವರ, ಅಪ್ಪಣ್ಣ ಸಾಲಿ, ಸಿ.ಎಸ್. ಪಾಟೀಲ, ಶಿವನಗೌಡ ಕಂಠೀಗೌಡರ, ಬಸವರಾಜ ಚಕ್ರಸಾಲಿ ಇದ್ದರು.