ಸಾರಾಂಶ
ಜಿಲ್ಲಾ ವಿಶೇಷಚೇತನರ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಶಾಸಕ ಆಸೀಫ್ ಸೇಠ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಮುಂಬರುವ ದಿನಗಳಲ್ಲಿ ವಿಶೇಷಚೇತನ ಕ್ರೀಡಾಪಟುಗಳಿಗೆ ಸರ್ಕಾರದ ವತಿಯಿಂದ ಪ್ರಯಾಣ ವೆಚ್ಚ ಭರಿಸಲಾಗುವುದು. ಜಿಲ್ಲಾ ವಿಶೇಷಚೇತನರ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಶಾಸಕ ಆಸೀಫ್ ಸೇಠ್ ಹೇಳಿದರು.ಮೋಟಿವೇಶನ್ ಇಂಡಿಯಾ, ಓಲ್ಕಾರ್ಟ್ ಫೌಂಡೇಶನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ಮತ್ತು ಬೆಳಗಾವಿ ಜಿಲ್ಲಾ ವಿಶೇಷಚೇತನರ ಕ್ರೀಡಾ ಸಂಘದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ವಿಶೇಷಚೇತನರ ಗಾಲಿ ಕುರ್ಚಿ ಪಂದ್ಯಾವಳಿ ಕಾರ್ಯಕ್ರಮದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶೇಷಚೇತನರ ಮಾಸಾಸನವನ್ನು ₹5 ಸಾವಿರಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿ ಬೆಳಗಾವಿ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿಯ ಉಪನಿರ್ದೇಶಕ ಶ್ರೀನಿವಾಸ ಮಾತನಾಡಿ, ವಿಶೇಷಚೇತನರ ಕ್ರೀಡೆಯಲ್ಲಿ ಅದರಲ್ಲಿ ವಿಶೇಷವಾಗಿ ವ್ಹೀಲ್ ಚೇರ್, ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಬೆಳಗಾವಿ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಸಾಧ್ಯವಾದಷ್ಟು ಸರ್ಕಾರದ ವತಿಯಿಂದ ಹೆಚ್ಚಿನ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.ಸುರೇಶ್ ಯಾದವ್ ಫೌಂಡೇಶನ್ ಅಧ್ಯಕ್ಷ ಸುರೇಶ್ ಯಾದವ ಅವರು, ವಿಶೇಷಚೇತನ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಸಾಧಿಸಲಿ ಎಂದರು.
ಜಿಲ್ಲಾ ಬಾಸ್ಕೆಟ್ ಬಾಲ್ ತರಬೇತುದಾರ ವಿ.ಎಸ್.ಪಾಟೀಲ್ ಹಾಗೂ ಬೆಳಗಾವಿ ಜಿಲ್ಲಾ ವಿಶೇಷಚೇತನರ ಕ್ರೀಡಾ ಸಂಘದ ಅಧ್ಯಕ್ಷ ಮಹಾಂತೇಶ್ ಹೊಂಗಲ ಮತ್ತು ಮೋಟಿವೇಶನ್ ಇಂಡಿಯಾ ವಿಷ್ಣು ಉಪಸ್ಥಿತರಿದ್ದರು. ಆಕಾಶ್ ಬೇವಿನಕಟ್ಟಿ ನಿರೂಪಿಸಿದರು. ಸೂರಜ್ ದಾಮಣೇಕರ ವಂದಿಸಿದರು.