ಮನೆ ಮನೆಗಳಿಗೆ ಶ್ರೀರಾಮ ಮಂತ್ರಾಕ್ಷತೆ ಹಂಚುವ ಅಭಿಯಾನಕ್ಕೆ ಚಾಲನೆ

| Published : Jan 04 2024, 01:45 AM IST

ಸಾರಾಂಶ

ಮಂತ್ರಾಕ್ಷತೆ ಅಭಿಯಾನದ ಯರಗಟ್ಟಿ ಘಟಕವು ನಗರವನ್ನು ಕೇಂದ್ರವಾಗಿರಿಸಿ ಹಲವಾರು ಕೇಂದ್ರಗಳಲ್ಲಿ ಇದನ್ನು ಆಯೋಜಿಸಲಾಗಿದ್ದು, ಯರಗಟ್ಟಿಯ ಹನುಮಾನ ಮಂದಿರದಲ್ಲಿ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಅಯೋಧ್ಯೆ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಜ.22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪೂರ್ವಭಾವಿಯಾಗಿ ದೇಶಾದ್ಯಂತ ವಿಶ್ವಹಿಂದು ಪರಿಷತ್‌ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಪರಿವಾರ ಸಂಘಟನೆಗಳು ಭಾರತದಲ್ಲಿರುವ ಸಮಸ್ತ ಹಿಂದು ಮನೆಗಳಿಗೆ ಕರಪತ್ರ, ಅಯೋಧ್ಯೆ ರಾಮಮಂದಿರದ ಭಾವಚಿತ್ರ ಹಾಗೂ ರಾಮನ ಪವಿತ್ರ ಮಂತ್ರಾಕ್ಷತೆಯನ್ನು ಮನೆಮನೆಗಳಿಗೆ ಹಂಚುವ ಅಭಿಯಾನಕ್ಕೆ ಸೋಮವಾರ ಚಾಲನೆ ಲಭಿಸಿದೆ.

ಮಂತ್ರಾಕ್ಷತೆ ಅಭಿಯಾನದ ಯರಗಟ್ಟಿ ಘಟಕವು ನಗರವನ್ನು ಕೇಂದ್ರವಾಗಿರಿಸಿ ಹಲವಾರು ಕೇಂದ್ರಗಳಲ್ಲಿ ಇದನ್ನು ಆಯೋಜಿಸಲಾಗಿದ್ದು, ಯರಗಟ್ಟಿಯ ಹನುಮಾನ ಮಂದಿರದಲ್ಲಿ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅಜೀತಕುಮಾರ ದೇಸಾಯಿ ಚಾಲನೆ ನೀಡಿದರು.

ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಸಮಯ ಸನ್ನಿಹಿತವಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಕಾಣಿಕೆ ನೀಡಿರುವವರ ಮನೆಬಾಗಿಲಿಗೆ ಪ್ರಸಾದ ತಲುಪಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್‌ನವರು ಪ್ರತಿಯೊಬ್ಬರ ಮನೆಗೂ ರಾಮದೇವರ ಪ್ರಸಾದವನ್ನು ತಲುಪಿಸುವ ಹಿತದೃಷ್ಟಿಯಿಂದ ಪ್ರತೀ ಊರು, ಗ್ರಾಮಕ್ಕೆ ಮಂತ್ರಾಕ್ಷತೆ, ಭಾವಚಿತ್ರ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. 11 ವಾರ್ಡ್ ಸಹಿತ 7 ಗ್ರಾಪಂ ವ್ಯಾಪ್ತಿಯ ಸುಮಾರು 25 ಸಾವಿರ ಮನೆಗಳಿಗೆ ಇದನ್ನು ನೀಡಲು ಉದ್ದೇಶಿಸಲಾಗಿದೆ. ಮಂತ್ರಾಕ್ಷತೆ ರೂಪದಲ್ಲಿ ದೇವರೇ ಮನೆಗೆ ಬರಲಿದ್ದಾರೆ. ಅದನ್ನು ಜಾಗರೂಕವಾಗಿರಿಸಿ ಪೂಜೆ ಮಾಡುವ ಪ್ರತಿಜ್ಞೆ ಮಾಡಬೇಕು. ಜ.22 ರಂದು ಪ್ರತಿ ಗ್ರಾಮದಲ್ಲಿ ಹರೇರಾಮ್, ಭಜನೆ ಹಾಡುಗಳನ್ನು ಹಾಡಬೇಕು. ಸಂಜೆ 5 ಗಂಟೆಗೆ ಜ್ಯೋತಿ ಬೆಳಗಿ ಉತ್ತರ ದಿಕ್ಕಿಗೆ ಆರತಿ ಬೆಳಗುವ ಮೂಲಕ ಇದನ್ನು ಅವಿಸ್ಮರಣೀಯ ದಿನವನ್ನಾಗಿಸಬೇಕು ಎಂದರು.

ಈ ವೇಳೆ ಕುಮಾರ ಹಿರೇಮಠ, ಮೋಹನ ಹಾದಿಮನಿ, ಸದಾನಂದ ಹಣಬರ, ಮಹಾಂತೇಶ ಜಕಾತಿ, ಕರೆಪ್ಪ ಪೂಜೇರ, ಸದಾನಂದ ಪಾಟೀಲ, ಚೇತನ ಜಕಾತಿ, ಈರಣ್ಣಾ ಪೂಜೇರ, ವಾಸು ಹುರಕನ್ನವರ, ತಮಣ್ಣ ಕಾಮಣ್ಣವರ, ಕಿರಣ ಹುಣಶ್ಯಾಳ, ಸಂಘದ ಕಾರ್ಯಕರ್ತ ಗೋವಿಂದ ಪೂಜೇರ, ಸಂತೋಷ ವಾಲಿ, ಅಪ್ಪಣ್ಣಾ ನಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.