ಸಾರಾಂಶ
ಮಂಜುನಾಥ್ ಟಿ ಎನ್.
ಕನ್ನಡಪ್ರಭವಾರ್ತೆ ವಿರಾಜಪೇಟೆವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ರಾಮನಗರದ ಲಾವಣ್ಯ ಬೋರ್ಕರ್ ಭರತನಾಟ್ಯದಲ್ಲಿ ಅಪ್ರತಿಮ ಸಾಧಕಿಯಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿ ಜಿಲ್ಲೆಗೆ ಕೀರ್ತಿ ತಂದಿರುತ್ತಾಳೆ.
ಈ ಗ್ರಾಮೀಣ ಸಾಧಕಿ ಕೇವಲ ಭರತನಾಟ್ಯ ಮಾತ್ರವಲ್ಲದೆ ಸೆಮಿ ಕ್ಲಾಸಿಕಲ್, ಫೋಕ್, ಜನಪದ ನೃತ್ಯಗಳಲ್ಲಿಯೂ ಮುಂದಿದ್ದು ಹಲವಾರು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುತ್ತಾಳೆ.ಸಣ್ಣ ವಯಸ್ಸಿನಿಂದಲೂ ಭರತನಾಟ್ಯವನ್ನು ಕರಗತವನ್ನಾಗಿಸಿದ ಲಾವಣ್ಯ ಇಂದು ವಿರಾಜಪೇಟೆಯ ಭಾಗದಲ್ಲಿ ಸಾಧಕಿಯಾಗಿ ಜನಮನ್ನಣೆಯನ್ನು ಪಡೆದಿರುತ್ತಾಳೆ. ಲಾವಣ್ಯ ಬೋರ್ಕರ್ ಪ್ರಮುಖವಾಗಿ 2021 ರಲ್ಲಿ ಮಂಗಳೂರಿನಲ್ಲಿ ನಡೆದ 26ನೇ ಅಂತಾರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ ದಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುತ್ತಾಳೆ. ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಭರತನಾಟ್ಯ ಪ್ರದರ್ಶನವನ್ನು ನೀಡಿದ್ದಾಳೆ. ಗೋಣಿಕೊಪ್ಪಲು ಮತ್ತು ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ದಸರಾ ಪ್ರಯುಕ್ತ ಅರಕಲಗೂಡು ವಿನಲ್ಲಿ ನಡೆದ ನೃತ್ಯ ಸ್ಪರ್ಧೆಗಳಲ್ಲಿಯೂ ಪಾಲ್ಗೊಂಡು ಪುರಸ್ಕಾರವನ್ನು ಪಡೆದಿರುತ್ತಾಳೆ. ಕಳೆದ ವರ್ಷ ಹಾವೇರಿಯಲ್ಲಿ ನಡೆದ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕೊಡಗಿನಿಂದ ನೃತ್ಯ ಪ್ರದರ್ಶನ ನೀಡಿದ ಕೀರ್ತಿ ಲಾವಣ್ಯಳದ್ದು.
2023 ರಲ್ಲಿ ತಮಿಳುನಾಡು ವರ್ಲ್ಡ್ ರೆಕಾರ್ಡ್ ಹಾಗೂ 2024 ರಲ್ಲಿ ಬೆಂಗಳೂರು ವರ್ಲ್ಡ್ ರೆಕಾರ್ಡ್ ನಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆಯನ್ನು ಮಾಡಿದ್ದಾಳೆ. ಇದೇ ವರ್ಷ ನಡೆದ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ, ವಿಶ್ವ ಕನ್ನಡ ಕಲಾ ಸಂಸ್ಥೆಯಿಂದ ಆಯೋಜಿಸಿದ ವಿಶ್ವ ಕನ್ನಡ ಪ್ರಥಮ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನದಲ್ಲಿ ವಿಶ್ವ ಕನ್ನಡ ವಿಶೇಷ ಸನ್ಮಾನ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತಾಳೆ. ಸ್ಥಳೀಯವಾಗಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದವರೆಗೂ ಭರತನಾಟ್ಯ ಪ್ರದರ್ಶನವನ್ನು ನೀಡಿ ಗಮನ ಸೆಳೆದಿದ್ದಾಳೆ.ಹಲವಾರು ಪ್ರಶಸ್ತಿ ಪುರಸ್ಕಾರಗಳು: ಗ್ರಾಮೀಣ ಸಾಧಕಿ ಲಾವಣ್ಯ ಬೋರ್ಕರ್ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅದರಲ್ಲಿ ಪ್ರಮುಖವಾಗಿ ನೆಹರು ಯುವಕೇಂದ್ರ ಬೆಂಗಳೂರು ಇವರು ನೀಡುವ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು 2022ರಲ್ಲಿ ಲಾವಣ್ಯಳಿಗೆ ಲಭಿಸಿರುತ್ತದೆ. ಕರ್ನಾಟಕ ನಾಟ್ಯ ರತ್ನ ಪ್ರಶಸ್ತಿ, ಬೆಂಗಳೂರಿನ ಚಿಗುರು ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ನೀಡುವ ಕಲಾ ಮಾಣಿಕ್ಯ ಪ್ರಶಸ್ತಿ, 2023 ರಲ್ಲಿ ತಮಿಳುನಾಡಿನ ತಿರುಚಿಯಲ್ಲಿ ವೃಕ್ಷ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ರಾಜ್ಯ ಮಟ್ಟದ ಸುವರ್ಣ ಶ್ರೀ ಪ್ರಶಸ್ತಿ, ಮಿನುಗುತಾರೆ ರಾಷ್ಟ್ರ ಮಟ್ಟದ ಪ್ರಶಸ್ತಿ, ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಹೈ ರೇಂಜ್ ಬುಕ್ ಓಫ್ ವರ್ಲ್ಡ್ ರೆಕಾರ್ಡ್ 2024 ರಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟದ 108 ನೃತ್ಯ ಕಲಾವಿದರಲ್ಲಿ ಲಾವಣ್ಯ ಕೂಡ ಒಬ್ಬಳಾಗಿ ಪುರಸ್ಕಾರವನ್ನು ಪಡೆದಿರುತ್ತಾಳೆ. ಇತ್ತೀಚಿಗೆ ಕರುನಾಡ ಭೂಷಣ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾಳೆ. ಮಾತ್ರವಲ್ಲದೆ ಸ್ಥಳೀಯವಾಗಿಯೂ ಹಲವಾರು ಸಂಘ ಸಂಸ್ಥೆಗಳು ಈಕೆಯ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ. ಇದೇ ವರ್ಷ ಹುಬ್ಬಳ್ಳಿಯಲ್ಲಿ ನಡೆದ ಎನ್. ಎಸ್. ಎಸ್. ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಪಾಲ್ಗೊಂಡು ಕೊಡಗು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾಳೆ.
ಇನ್ನು ಮುಂದೆಯೂ ಭರತನಾಟ್ಯವನ್ನು ಮುಂದುವರೆಸುತ್ತೇನೆ. ನನ್ನ ಈ ಸಾಧನೆಗೆ ಪೋಷಕರು, ಉಪನ್ಯಾಸಕರು, ನೃತ್ಯ ಗುರುಗಳು ಹಾಗೂ ಸ್ನೇಹಿತರು ನೀಡಿರುವ ಸಹಕಾರ ಮತ್ತು ಪ್ರೋತ್ಸಾಹವೇ ಮುಖ್ಯ ಕಾರಣವಾಗಿದೆ. ವಿವಿಧೆಡೆಗಳಲ್ಲಿ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಂಡು ನಮ್ಮ ಜಿಲ್ಲೆಗೆ ಕೀರ್ತಿಯನ್ನು ತರುವುದೇ ನನ್ನ ಉದ್ದೇಶವಾಗಿದೆ.। ಲಾವಣ್ಯ ಬೋರ್ಕರ್, ಭರತನಾಟ್ಯ ಕಲಾವಿದೆ
ಲಾವಣ್ಯ ಬೋರ್ಕರ್ ನಮ್ಮ ಕಾಲೇಜಿನ ಬಹುಮುಖ ಪ್ರತಿಭೆಯಾಗಿದ್ದಾಳೆ. ಭರತನಾಟ್ಯ, ಜನಪದ ನೃತ್ಯ ದ ಮೂಲಕ ರಾಷ್ಟ್ರ ಮಟ್ಟದವರೆಗೂ ಪ್ರದರ್ಶನವನ್ನು ನೀಡುವುದರ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದು ಗಮನಾರ್ಹ. ತನ್ನ ಕಲಾ ಪ್ರತಿಭೆಯ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾಳೆ.-ತೃಪ್ತಿ ಬೋಪಣ್ಣ, ಪ್ರಾಂಶುಪಾಲೆ. ಸೆಂಟ್ ಆನ್ಸ್ ಪದವಿ ಕಾಲೇಜು ವಿರಾಜಪೇಟೆ.
ಲಾವಣ್ಯ ರಾಷ್ಟ್ರ ಮಟ್ಟದ ತನಕನೂ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿಯೂ ಸಾಧನೆ ಮಾಡಿರುತ್ತಾಳೆ. ಕಠಿಣ ಪರಿಶ್ರಮ ಮತ್ತು ಕಲೆಯ ಮೇಲಿರುವ ಗೌರವ ಪ್ರೀತಿಯಿಂದ ಈ ಸಾಧನೆ ಮಾಡುವಂತಾಗಿದೆ. ಜೊತೆಗೆ ಪೋಷಕರು ಕೂಡ ಸಂಪೂರ್ಣ ಸಹಕಾರವನ್ನು ಲಾವಣ್ಯಳಿಗೆ ನೀಡಿರುತ್ತಾರೆ.-ಪ್ರೇಮಾಂಜಲಿ ಆಚಾರ್ಯ, ಮುಖ್ಯಸ್ಥರು ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ.