ಶಿರಗಾನಹಳ್ಳಿ ತಾಂಡಾದ ಲಾವಣ್ಯ ಯುಪಿಎಸ್‌ಸಿ ಸಾಧಕಿ

| Published : Apr 27 2025, 01:45 AM IST

ಸಾರಾಂಶ

ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಶಿರಗಾನಹಳ್ಳಿ ತಾಂಡಾದ ಲಾವಣ್ಯ ಎಸ್‌.ಪಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ 969 ರ‍್ಯಾಂಕ್‌ ಗಳಿಸುವ ಮೂಲಕ ನೂತನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಲಾವಣ್ಯ ಸಾಧನೆಯಿಂದಾಗಿ ಹರಪನಹಳ್ಳಿ ಹಾಗೂ ಶಿರಗಾನಹಳ್ಳಿ ತಾಂಡಾದಲ್ಲೂ ಸಂಭ್ರಮ ಮನೆ ಮಾಡಿದೆ.

ಕೃಷ್ಣ ಲಮಾಣಿ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಶಿರಗಾನಹಳ್ಳಿ ತಾಂಡಾದ ಲಾವಣ್ಯ ಎಸ್‌.ಪಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ 969 ರ‍್ಯಾಂಕ್‌ ಗಳಿಸುವ ಮೂಲಕ ನೂತನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಶಿರಗಾನಹಳ್ಳಿ ತಾಂಡಾದ ನಿವೃತ್ತ ಶಿಕ್ಷಕ ನಾಗು ನಾಯ್ಕ ಹಾಗೂ ಸಾಕಮ್ಮ ದಂಪತಿ ಪುತ್ರಿ ಲಾವಣ್ಯ ಐದನೇ ಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. ಬಿಎಸ್‌ಸಿ ಅಗ್ರಿ ಮಾಡಿರುವ ಲಾವಣ್ಯ, 2022ರಲ್ಲಿ ಐಎಫ್‌ಎಸ್‌ ಪರೀಕ್ಷೆಯಲ್ಲಿ 65ನೇ ರ‍್ಯಾಂಕ್‌ ಗಳಿಸಿದ್ದು, ಈಗ ಡೆಹ್ರಾಡೂನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತರಬೇತಿಯೊಂದಿಗೆ ಐಎಎಸ್‌ ಪರೀಕ್ಷೆ ಬರೆದು, 969 ರ‍್ಯಾಂಕ್‌ ಗಳಿಸಿದ್ದಾರೆ.

ಶಾಲಾ ದಿನಗಳಲ್ಲೇ ಯುಪಿಎಸ್‌ಸಿ ಕನಸು ಹೊತ್ತ ಲಾವಣ್ಯ ಅವರು, ಸಾಮಾನ್ಯ ಜ್ಞಾನದ ಜತೆಗೆ ವಿಜ್ಞಾನ ಮತ್ತು ಕಲಾ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲೂ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಈಗ ಯುಪಿಎಸ್‌ಸಿ ಪಾಸಾಗುವ ಮೂಲಕ ತಂದೆ, ತಾಯಿ ಆಸೆಯನ್ನೂ ಈಡೇರಿಸಿದ್ದಾರೆ.

ಓದಿನತ್ತ ಚಿತ್ತ: ಹರಪನಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿರುವ ಅವರು, ಚನ್ನಗಿರಿ ನವೋದಯ ಶಾಲೆಯಲ್ಲಿ ಹೈಸ್ಕೂಲ್‌ ಹಾಗೂ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಬಿಎಸ್‌ಸಿ ಅಗ್ರಿ ಪಾಸಾಗಿದ್ದು, ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದಕ್ಕಾಗಿ ಸತತ ಓದಿನತ್ತ ಚಿತ್ತ ಹರಿಸಿದ್ದಾರೆ. ಇದರ ಫಲವಾಗಿ ಐಎಫ್‌ಎಸ್‌ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಪಾಸಾಗಿದ್ದಾರೆ.

ಲಾವಣ್ಯ ಅವರ ತಂದೆ ನಾಗು ನಾಯ್ಕ ನಿವೃತ್ತ ಶಿಕ್ಷಕ. ಮಗಳ ಕನಸಿಗೆ ಆಸರೆಯಾಗಿ ನಿಂತ ಅವರು, ದೆಹಲಿಯಲ್ಲಿ ಕೋಚಿಂಗ್‌ ಕೊಡಿಸಿದ್ದಾರೆ. ಆಸ್ತಿಗಿಂತಲೂ ಮಕ್ಕಳೇ ನಿಜ ಸಂಪತ್ತು ಎಂಬುದನ್ನರಿತು ಇನ್ನೋರ್ವ ಪುತ್ರಿ ಅಶ್ವಿನಿ ಮತ್ತು ಪುತ್ರ ಚೇತನ್‌ಗೂ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಅವರ ಪುತ್ರ ಚೇತನ್‌ ಕೂಡ ಐಎಎಸ್‌ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.

ಹತ್ತು ವರ್ಷಗಳ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದಾರೆ. ಮುಖ್ಯ ಪರೀಕ್ಷೆಯಲ್ಲಿ ಮಾನವಶಾಸ್ತ್ರ ವಿಷಯ ತೆಗೆದುಕೊಂಡು ಪಾಸಾಗಿದ್ದಾರೆ. ಈಗ ಯುಪಿಎಸ್‌ಸಿಯಲ್ಲಿ 969 ರ‍್ಯಾಂಕ್‌ ಗಳಿಸಿದ್ದರೂ ಇಷ್ಟಕ್ಕೇ ತೃಪ್ತರಾಗದ ಲಾವಣ್ಯ,ಇನ್ನಷ್ಟು ಸಾಧನೆ ಮಾಡಲು ಮತ್ತೊಮ್ಮೆ ಯುಪಿಎಸ್‌ಸಿ ಪರೀಕ್ಷೆ ಎದುರಿಸುವ ಇರಾದೆಯನ್ನೂ ಹೊಂದಿದ್ದಾರೆ.

ಲಾವಣ್ಯ ಸಾಧನೆಯಿಂದಾಗಿ ಹರಪನಹಳ್ಳಿ ಹಾಗೂ ಶಿರಗಾನಹಳ್ಳಿ ತಾಂಡಾದಲ್ಲೂ ಸಂಭ್ರಮ ಮನೆ ಮಾಡಿದೆ.

ಆತ್ಮವಿಶ್ವಾಸ ಇದ್ದರೆ ಎಂತಹ ಪರೀಕ್ಷೆಯನ್ನೂ ಪಾಸು ಮಾಡಬಹುದು. ದಿನಕ್ಕೆ ಏಳು ತಾಸು ಓದುವ ಹವ್ಯಾಸ ಬೆಳೆಸಿಕೊಂಡಿರುವೆ. ಇದೇ ನನಗೆ ಆಸರೆಯಾಗಿದೆ. ಶ್ರಮಪಟ್ಟರೆ ಖಂಡಿತ ಫಲ ದೊರೆಯಲಿದೆ ಎಂದು ಯುಪಿಎಸ್‌ಸಿ ಸಾಧಕಿ ಲಾವಣ್ಯ ಎಸ್‌.ಪಿ. ಹೇಳುತ್ತಾರೆ.