ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾಗಲು ಬಿಡಲ್ಲ; ಶೋಭಾರಾಣಿ

| Published : Jul 22 2025, 12:00 AM IST

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾಗಲು ಬಿಡಲ್ಲ; ಶೋಭಾರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಮಟ್ಕಾ, ಗಾಂಜಾ, ಇಸ್ಪೀಟ್ ಜೂಜಾಟ ಎಗ್ಗಿಲ್ಲದೆ ನಡೆದಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಬಿಜೆಪಿಯ ಪಾಲಿಕೆ ಸದಸ್ಯರು ಈಚೆಗೆ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಕಳೆದ ಆರು ತಿಂಗಳಲ್ಲಿ ವಿವಿಧ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದಲ್ಲಿ ಮಟ್ಕಾ, ಗಾಂಜಾ, ಇಸ್ಪೀಟ್ ಜೂಜಾಟ ಎಗ್ಗಿಲ್ಲದೆ ನಡೆದಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಬಿಜೆಪಿಯ ಪಾಲಿಕೆ ಸದಸ್ಯರು ಈಚೆಗೆ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಕಳೆದ ಆರು ತಿಂಗಳಲ್ಲಿ ವಿವಿಧ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಪೂರಕ ಕ್ರಮ ವಹಿಸಿದ್ದು ಮಟ್ಕಾ, ಜೂಜಾಟ, ಅಕ್ರಮ ಪಡಿತರ ಸಾಗಣೆ, ಮರಳು, ಮದ್ಯ ಸಾಗಣೆ, ವೇಶ್ಯಾವಾಟಿಕೆ ಸೇರಿದಂತೆ ನಾನಾ ಬಗೆಯ ದಂಧೆಗಳಿಗೆ ಕಡಿವಾಣ ಹಾಕಲಾಗಿದೆ. 2023 ಹಾಗೂ 2024ನೇ ಸಾಲಿಗೆ ಹೋಲಿಸಿದರೆ 2025ನೇ ಸಾಲಿನಲ್ಲಿ ಜನವರಿಯಿಂದ ಜೂನ್‌ವರೆಗೆ ಬರೀ ಆರು ತಿಂಗಳಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ಸುವ್ಯವಸ್ಥೆ ನಿಯಂತ್ರಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.ಮಟ್ಕಾ, ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್, ಅಬಕಾರಿ, ಅಕ್ರಮ ಮರಳು ಸಾಗಣೆ, ವೃಶ್ಯಾವಾಟಿಕೆ, ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಇಲಾಖೆ ಕ್ರಮ ವಹಿಸಿದೆ. 2023ನೇ ಸಾಲಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ 1,200 ಪ್ರಕರಣಗಳು ಹಾಗೂ ಸಂಚಾರ ನಿಯಮ ಉಲ್ಲಂಘನೆಯ 55044 ಪ್ರಕರಣಗಳಲ್ಲಿ ಒಟ್ಟು 2,31,43,400 ರು.ಗಳ ದಂಡ ಕಟ್ಟಿಸಲಾಗಿದ್ದು, 2024ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ 1,175 ಪ್ರಕರಣಗಳು ಹಾಗೂ ಸಂಚಾರ ನಿಯಮ ಉಲ್ಲಂಘನೆಯ 60,161 ಪ್ರಕರಣಗಳಲ್ಲಿ ಒಟ್ಟು 2,80,99,700 ರು.ಗಳ ದಂಡ ಕಟ್ಟಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಜನವರಿ 1ರಿಂದ ಜೂನ್ 30ರವರೆಗೆ ಅಂದರೆ ಬರೀ ಆರು ತಿಂಗಳಲ್ಲಿ ವಿವಿಧ ಕಾನೂನು ಬಾಹಿರ ಚಟುವಟಿಕೆಗಳ 834 ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 43,910 ಪ್ರಕರಣಗಳನ್ನು ದಾಖಲಿಸಿ, 1,94,69,400 ರು. ದಂಡ ಕಟ್ಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಾಲಿಕೆ ಸದಸ್ಯರ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡಪ್ರಭ ಜೊತೆ ಮಾತನಾಡಿದ ಎಸ್ಪಿ ಡಾ.ಶೋಭಾರಾಣಿ, ಒಂದು ವರ್ಷದಲ್ಲಾಗುವ ವಿವಿಧ ಪ್ರಕರಣಗಳ ಎಫ್‌ಐಆರ್‌ಗಳನ್ನು ಬರೀ ಆರು ತಿಂಗಳಲ್ಲಿ ಹಾಕಿಸಿರುವೆ. ಇಷ್ಟಾಗಿಯೂ ವಿನಾಕಾರಣ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಜಿಲ್ಲೆಯ ಯಾರೇ ಆಗಲಿ ನಮಗೆ ಖಚಿತ ಮಾಹಿತಿ ನೀಡಲಿ. ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ದಾಳಿ ನಡೆಸಿ, ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಲಾಗುವುದು. ನಾನು ಜನರ ಸೇವೆ ಮಾಡಲೆಂದೇ ಬಂದಿದ್ದೇನೆ. ಕಾನೂನು ಸುವ್ಯವಸ್ಥೆಗೆ ಭಂಗ ಆಗದಂತೆ ನೋಡಿಕೊಳ್ಳುತ್ತೇನೆ. ಆದರೆ, ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದರು.