ಸಾರಾಂಶ
ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ
ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ನಂತರ ಸಹಜ ಸ್ಥಿತಿ ಮರುಕಳಿಸಿದ್ದು, ಪ್ರಸಕ್ತ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕುರಿತು ಗುರುವಾರ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಜನರ ಸುರಕ್ಷತೆ ಸರ್ಕಾರದ ಗರಿಷ್ಠ ಆದ್ಯತೆಯಾಗಿದೆ. ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಯಾವುದೇ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯುವ ಅವಶ್ಯಕತೆ ಇಲ್ಲ ಎಂದು ಉಸ್ತುವಾರಿ ಸಚಿವರು ಕಟ್ಟುನಿಟ್ಟಾಗಿ ಸೂಚಿಸಿದರು.ಜನಸಾಮಾನ್ಯರಲ್ಲಿ ನೆಮ್ಮದಿಯ ವಾತಾವರಣ ಮೂಡಿಸುವುದೇ ಸರ್ಕಾರದ ಆದ್ಯತೆ. ಹೆಚ್ಚುವರಿ ಭದ್ರತೆಯನ್ನು ಇನ್ನೂ ಸ್ವಲ್ಪ ಕಾಲ ಮುಂದುವರಿಸಬೇಕು ಎಂದು ತಿಳಿಸಿದರು.
ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಪರಿಸ್ಥಿತಿ ಈಗ ಎಂದಿನಂತೆ ಸಹಜ ಸ್ಥಿತಿಗೆ ಮರಳಿದೆ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ಸಂಜೆ ಬಳಿಕ ನಿರಂತರ ರೌಂಡ್ಸ್‌ನಲ್ಲಿದ್ದಾರೆ. ಹೊರ ಜಿಲ್ಲೆಯ ಪೊಲೀಸರು ಹಾಗೂ ಕೆ.ಎಸ್.ಆರ್.ಪಿ. ತುಕಡಿಗಳನ್ನು ಹೆಚ್ಚುವರಿ ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಡಿಸಿಪಿ ಸಿದ್ಧಾರ್ಥ ಗೋಯಲ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋಧನಕಾರಿ ಸಂದೇಶಗಳನ್ನು ಹರಡುವವರ ವಿರುದ್ಧ ನಿಗಾ ಇಡಲಾಗಿದೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮೇಲೂ ನಿಗಾ ಇಡಲಾಗಿದೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಗಾ ಇಡಲಾಗಿದೆ ಎಂದು ತಿಳಿಸಿದರು.ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ.ಆನಂದ್ ಮತ್ತಿತರರು ಭಾಗವಹಿಸಿದ್ದರು.