ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಾಯಾಳುಗಳ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಹಾನಗಲ್ಲ: ಕಾರಹುಣ್ಣಿಮೆಯಂದು ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ ಹೋರಿ ಓಡಿಸುವ ಸಂದರ್ಭದಲ್ಲಿ ಅಮಾಯಕ ಜನರ ಮೇಲೆ ದಿಢೀರನೇ ಮತಾಂಧರು ಹಲ್ಲೆ ಮಾಡಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಂಗಳವಾರ ತಾಲೂಕಿನ ನರೇಗಲ್ ಗ್ರಾಮಕ್ಕೆ ಭೇಟಿ ನೀಡಿ ಗಾಯಾಳುಗಳ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದೂ ಹಬ್ಬಗಳನ್ನು ಆಚರಿಸುವುದೇ ಇತ್ತೀಚೆಗೆ ಕಷ್ಟವಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ನೀತಿಗಳೇ ಇಂಥ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿವೆ. ಹಿಂದೂ ಹಬ್ಬಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡುವ ಹುನ್ನಾರ ನಡೆಯುತ್ತಿರುವುದರಿಂದಲೇ ಅಮಾಯಕರ ಮೇಲೆ ಮೇಲಿಂದ ಮೇಲೆ ಹಲ್ಲೆಗಳು ನಡೆಯುವಂತಾಗಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯ ಹಿಂದೂಗಳ ಮೇಲೆ ದಾಳಿ ಮಾಡುವ ಘಟನೆಗಳು ಮರುಕಳಿಸುತ್ತಿವೆ. ಅವರಿಗೆ ಯಾವುದೇ ಕಾನೂನುಗಳ ಭಯವಿಲ್ಲದಂತಾಗಿದೆ. ಸರ್ಕಾರದ ಬೆಂಬಲವಿರುವುದರಿಂದಲೇ ಇಂಥ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳ ಮಾದರಿಯಲ್ಲಿ ಗೂಂಡಾಗಿರಿ-ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಯತ್ನಾಳ ಅಸಮಧಾನ ವ್ಯಕ್ತಪಡಿಸಿದರು.ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಮದ್ದೂರು, ಆಳಂದ ಮತ್ತಿತರ ಕಡೆಗಳಲ್ಲಿ ಮತಾಂಧರು ಹಿಂದೂ ದೇವಾಲಯಗಳಲ್ಲಿ ಧರ್ಮದ್ರೋಹ ಕೆಲಸ ಮಾಡಿದ್ದಾರೆ. ಅವರನ್ನು ರಕ್ಷಿಸಲು ಸಚಿವ ಸಂಪುಟ ನಿರ್ಣಯ ಕೈಗೊಂಡಿತ್ತು. ಆದರೆ ನ್ಯಾಯಾಲಯ ಇದಕ್ಕೆ ತಡೆಯಾಜ್ಞೆ ನೀಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರಿಗೆ ಮುಕ್ತ ಅವಕಾಶ ಇಲ್ಲದಂತಾಗಿರುವುದು, ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪಗಳು ಇವೆಲ್ಲಕ್ಕೆ ಕಾರಣ. ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ದುಷ್ಕರ್ಮಿಗಳನ್ನು ಎನ್‌ಕೌಂಟರ್ ಮಾಡುವ ಅವಕಾಶ ನೀಡಬೇಕು. ಹಾವೇರಿ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ರಟ್ಟಿಹಳ್ಳಿಯಲ್ಲಿ ಮೊನ್ನೆ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಸೈನಿಕನ ಮೇಲೆ ಹಲ್ಲೆ ನಡೆದಿದೆ. ಆದರೆ ಆರೋಪಿಗಳ ಮೇಲೆ ಕ್ರಮ ವಿಳಂಬವಾಗುತ್ತಿದೆ ಎಂದು ಹೇಳಿದರು.
ಎಸ್‌ಐಆರ್ ಕುರಿತು ಪ್ರತಿಕ್ರಿಯಿಸಿದ ಯತ್ನಾಳ, ಮಸೀದಿಗಳಲ್ಲಿ ಪ್ರಕ್ರಿಯೆ ನಡೆಯುತ್ತಿರುವ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಸಿಬ್ಬಂದಿಗಳು ಎಲ್ಲರನ್ನೂ ಒಂದೆಡೆ ಸೇರಿಸದೇ ಮನೆ-ಮನೆಗೆ ತೆರಳಿ ಮಾಹಿತಿ ದಾಖಲಿಸಬೇಕೆಂದು ಸೂಚಿಸಲಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದಂತಾಗಿದೆ. ಅಲ್ಪ ಸಂಖ್ಯಾತ ಸಮುದಾಯದಲ್ಲಿ ಮೃತಪಟ್ಟವರ ಹೆಸರಲ್ಲೂ ಮತದಾನ ನಡೆಯುತ್ತಿತ್ತು. ವಿಜಾಪುರದಲ್ಲಿ 15000 ಜನ ಮೃತಪಟ್ಟವರಿದ್ದರೂ, ಅವರ ಹೆಸರಲ್ಲೂ ಮತದಾನವಾಗಿವೆ. ಇನ್ನು ಮುಂದೆ ಮೃತಪಟ್ಟವರ ಹೆಸರುಗಳು ಕಡಿಮೆಯಾಗಿ ಕಾಂಗ್ರೆಸ್ ಪಕ್ಷಕ್ಕೆ ಓಟ್‌ಬ್ಯಾಂಕ್ ಕುಸಿಯುವ ಭಯ ಕಾಡುತ್ತಿದೆ ಎಂದು ಟೀಕಿಸಿದರು.ಹಾನಗಲ್ಲ ತಾಲೂಕಿನ ನರೆಗಲ್‌ನಲ್ಲಿ ಕುರುಬ ಸಮುದಾಯದ ಮೇಲೆ ಹಲ್ಲೆ ನಡೆದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಇಲ್ಲಿಗೆ ಭೇಟಿ ನೀಡಿ ತಮ್ಮ ಹಾಲುಮತ ಸಮಾಜ ಬಾಂಧವರಿಗೆ ಸಾಂತ್ವನ ಹೇಳಬೇಕಿತ್ತು. ನರೇಗಲ್ ಘಟನೆ ವಯಕ್ತಿಕ ಘಟನೆಯಲ್ಲ. ಇದೊಂದು ವ್ಯವಸ್ಥಿತ ಕೋಮು ಗಲಭೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಜಿಲ್ಲೆಯ ಎಸ್‌ಪಿ ಅವರು ಘಟನೆಯನ್ನು ತಿರುಚಬಾರದು ಎಂದು ಆಗ್ರಹಿಸಿದರು. ಶಿಗ್ಗಾಂವಿ ಶಾಸಕರಿಗೆ ಪಾಕಿಸ್ತಾನದ ಮೇಲೆ ಹೆಚ್ಚು ಪ್ರೀತಿಯಿದೆ. ಅದಕ್ಕೆ ನಮ್ಮ ಶತ್ರು ರಾಷ್ಟ್ರದ ಬೆನ್ನು ತಟ್ಟುತ್ತಿದ್ದಾರೆ. ಅವರಿಗೆ ದೇಶಪ್ರೇಮಕ್ಕಿಂತ ಜಾತಿ ಪ್ರೇಮವೇ ಹೆಚ್ಚಾದಂತಿದೆ ಎಂದು ಶಾಸಕ ಯತ್ನಾಳ ಕುಟುಕಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ, ಮಲ್ಲಿಕಾರ್ಜುನ ಅಗಡಿ, ಆನಂದ ಹವಳಣ್ಣನವರ, ಸತೀಶ ಕುರಬರ ಇದ್ದರು.