ಹಿರಿಯೂರು ತಾಲೂಕಿನಲ್ಲಿ ಕಿಡಿಗೇಡಿಗಳ ಅಟ್ಟಹಾಸದಿಂದ ಅಲ್ಲಿಯ ನಗರ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹಿರಿಯೂರು ತಾಲೂಕಿನಲ್ಲಿ ಕಿಡಿಗೇಡಿಗಳ ಅಟ್ಟಹಾಸದಿಂದ ಅಲ್ಲಿಯ ನಗರ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಡಿ.30 ರಂದು ಸಂಜೆ 4:30 ಗಂಟೆಗೆ ಹಿರಿಯೂರು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಗೆ ಮೊಬೈಲ್ ರಿಪೇರಿ ನೆಪದಲ್ಲಿ ಹೋಗಿ ಉದ್ದೇಶಪೂರ್ವಕವಾಗಿ ಮನಸೋ ಇಚ್ಛೆ ಮಾರಣಾಂತಿಕವಾಗಿ ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷರ ಮೇಲೆ ಹಲ್ಲೆ ಮಾಡಲಾಗಿದೆ. ಇದನ್ನು ಗಮನಿಸಿದರೆ ನಗರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದನ್ನು ಸಹಿಸಲಾರದೆ ತಾಲೂಕಿನಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದಂತಹ ತಾಲೂಕು ಅಧ್ಯಕ್ಷ ವಿನಯ್ ರವರ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿರುವುದು ಹಾಗೂ ಮಾಡಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ.ತಾಲೂಕಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರ ಹೆಸರನ್ನು ಕಿಡಿಗೇಡಿಗಳು ಬಳಸಿಕೊಂಡು ಈ ರೀತಿಯ ದೌರ್ಜನ್ಯ ಅಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಹಿತಿಯೂರಿನ ಸ್ಥಳೀಯ ಜನರು ಮತ್ತು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಡಿ.30ರಂದು ಅಂಗಡಿಗೆ ಅಕ್ರಮವಾಗಿ ನುಗ್ಗಿ ಹಲ್ಲೆ ಮಾಡಿ, ಕೆಟ್ಟ ಶಬ್ದಗಳಿಂದ ನಿಂದಿಸಿ ಅಕ್ಕ ಪಕ್ಕದಲ್ಲಿರುವ ಮಹಿಳೆಯರು ಮತ್ತು ಸಾರ್ವಜನಿಕರು ಸಹಾಯಕ್ಕೆ ಧಾವಿಸಿದರೆ ಅವರಿಗೂ ಧಮ್ಕಿ ಹಾಕಿ ಕೆಟ್ಟ ಶಬ್ದಗಳನ್ನು ನಿಂದಿಸಿದ್ದಾರೆ. ನಗರದ ಜನರಿಗೆ ಆತಂಕ ಶುರುವಾಗಿದ್ದು ಭಯಭೀತರಾಗಿದ್ದಾರೆ. ಸುಳ್ಳು ಅಟ್ರಾಸಿಟಿ ಪ್ರಕರಣವನ್ನು ದಾಖಲಿಸಿ ಕೆಆರ್‌ಎಸ್ ಪಕ್ಷದವರನ್ನು, ಅವರ ಹೋರಾಟಗಳನ್ನು ಕುಗ್ಗಿಸಬೇಕೆನ್ನುವ ನಿಟ್ಟಿನಲ್ಲಿ ಇಂತಹ ಸುಳ್ಳು ದೂರುಗಳನ್ನು ಸಲ್ಲಿಸುತ್ತಿರುವುದನ್ನು ಸಾರ್ವಜನಿಕರು ಗಮನಿಸುತ್ತಿದ್ದಾರೆ. ಈ ರೀತಿ ಸುಳ್ಳು ಪ್ರಕರಣಗಳನ್ನು ದಾಖಲಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಇಂತಹ ಘಟನೆಗಳು ಮರುಕಳಿಸಿದಂತೆ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಮಿತಿ ಪಕ್ಷದ ಎಸ್‌ಸಿ, ಎಸ್‌ಟಿ ರಾಜ್ಯ ಕಾರ್ಯದರ್ಶಿ ಮಾರುತಿ, ಕಾರ್ಯ ನಿರ್ವಾಹಕ ಸಮಿತಿ ಸದಸ್ಯ ಮಹೇಶ್ ನಗರಂಗೆರೆ, ಜಿಲ್ಲಾ ಉಸ್ತುವಾರಿ ವೀರಭದ್ರಪ್ಪ, ಚಳ್ಳಕೆರೆ ತಾಲೂಕು ಉಪಾಧ್ಯಕ್ಷ ಜಬಿವುಲ್ಲಾ , ಹೊಳಲ್ಕೆರೆ ಉಪಾಧ್ಯಕ್ಷೆ ದೇವಿಕಾ, ಪುಟ್ಟಮ್ಮ ಲoಕೇಶ್, ತಿಪ್ಪೇಸ್ವಾಮಿ, ಕೆಂಚಪ್ಪ , ನಾಗರಾಜ, ಶಂಕರಪ್ಪ ಮತ್ತು ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.