ಸಾರಾಂಶ
ಶಿಗ್ಗಾಂವಿ: ೨೧ನೇ ಶತಮಾನದ ಯುವ ಕಾನೂನು ಪದವೀಧರರಿಗೆ ಪ್ರಸಕ್ತ ಬದಲಾವಣೆಯಾಗುತ್ತಿರುವ ದೇಶದ ಸವಾಲು ಎದುರಿಸಲು ಗುಣಮಟ್ಟದ ಶಿಕ್ಷಣದ ಅವಶ್ಯಕತೆಯಿದೆ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ ಹೇಳಿದರು.ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಹಿರಿಯ ನ್ಯಾಯಾಲಯದ ನ್ಯಾಯವಾದಿಗಳ ಸಂಘ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ದೇಶದ ಮೊದಲ ಕಾನೂನು ವಿಶ್ವವಿದ್ಯಾಲಯ ಬ್ರಿಟಿಷ್ ಆಡಳಿತ ಕಾಲಘಟ್ಟದ ಸ್ವಾತಂತ್ರ್ಯ ಪೂರ್ವದ ಮುಂಬೈ ನಗರದಲ್ಲಿ ಆರಂಭವಾಯಿತು. ಅಂದು ೧೯೬ ಕಾನೂನು ಜಾರಿಗೆ ತಂದರು. ಪ್ರಸಕ್ತ ಸಾವಿರಾರು ಕಾಲೇಜುಗಳು ಹುಟ್ಟಿಕೊಂಡಿವೆ. ಯುವಕರಿಗೆ ಉತ್ತಮ ಗುಣಮಟ್ಟದ ಕಾಲೇಜು ಕಾನೂನು ಶಿಕ್ಷಣ ದೊರಕುವಂತಾಗಬೇಕು. ಇದರಲ್ಲಿ ದೇಶದ ಭವಿಷ್ಯದ ಕಾನೂನು ವ್ಯವಸ್ಥೆಯ ಅರಿವು ಪದವೀಧರರಿಗೆ ಸಿಗಲಿದೆ. ಪ್ರಾದೇಶಿಕ ಕನ್ನಡ ಭಾಷೆಯಲ್ಲಿ ನ್ಯಾಯಾಂಗದ ತೀರ್ಪುಗಳು ಬರಬೇಕಾದರೆ ಆರ್ಟಿಕಲ್ ೨೪೮ರ ತಿದ್ದುಪಡಿ ಆಗಬೇಕು. ಇದರಿಂದಾಗಿ ತೀರ್ಪು ಪಡೆದ ಕಕ್ಷಿದಾರರಿಗೆ ಅನುಕೂಲತೆ ಅವಕಾಶ ಒದಗಲಿದೆ. ಕಿರಿಯ ವಕೀಲರು ಹಿರಿಯ ನ್ಯಾಯವಾದಿಗಳ ಸಲಹೆ ಸೂಚನೆಗಳು, ಪುಸ್ತಕಗಳ ಓದು ಜ್ಞಾನವನ್ನು ಪಡೆದು. ಚರ್ಚಿಸಿ ಅನುಭವಗಳನ್ನು ಪಡೆದುಕೊಳ್ಳಬೇಕು. ಕೆಲಸದಲ್ಲಿ ಆತ್ಮಶುದ್ಧಿ, ಪ್ರಾಮಾಣಿಕತೆ ಇದ್ದರೆ ಕಕ್ಷಿದಾರರಲ್ಲಿ ವಿಶ್ವಾಸ ಹೆಚ್ಚುತ್ತದೆ ಎಂದು ಸಲಹೆ ನೀಡಿದರು. ಹಿರಿಯ ವಕೀಲ ಎಫ್.ಎಸ್. ಕೋಣನವರ ಮಾತನಾಡಿ, ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಅರಳಿಯವರು ಉತ್ತಮ ಕೆಲಸ ನಿರ್ವಹಿಸಿ ಕನ್ನಡ ಭಾಷೆಯಲ್ಲಿಯೇ ತೀರ್ಪು ಪ್ರಕಟಿಸಿದ್ದಾರೆ. ಸಾಹಿತ್ಯದ ಮೂಲಕ ಕಾನೂನಿನ ಪುಸ್ತಕ ಬರೆದು ಅನುಭವವನ್ನು ಯುವ ವಕೀಲರಿಗೆ ಧಾರೆ ಎರೆದಿದ್ದಾರೆ ಎಂದರು.೨೫ ವರ್ಷಗಳ ಕಾನೂನು ಸೇವೆ ಸಲ್ಲಿಸಿದ ಕೆ.ಎಸ್. ಜೋಶಿ ಹಾಗೂ ಕ್ಯಾಲಕೊಂಡ ವಕೀಲರನ್ನು ಸನ್ಮಾನಿಸಲಾಯಿತು. ಹಿರಿಯ ದಿವಾಣಿ ನ್ಯಾಯಾಧೀಶ ಸುನೀಲ್ ತಳವಾರ, ಕಿರಿಯ ನ್ಯಾಯಾಧೀಶೆ ಅಶ್ವಿನಿ ಚಂದ್ರಕಾಂತ ವಕೀಲರ ಸಂಘದ ಅಧ್ಯಕ್ಷ ಎಫ್.ಡಿ. ಗಂಜೀಗಟ್ಟಿ. ಕಾರ್ಯದರ್ಶಿ ರಾಜಶೇಖರ ಕುಬಸದ ಸರ್ಕಾರಿ ಅಭಿಯೋಜಕ ಎನ್.ಎಂ. ಮಲ್ಲಾಡದ, ವಕೀಲ ಎಂ.ಜಿ. ವಿಜಾಪುರ, ಬಿ.ಪಿ. ಗುಂಡಣ್ಣವರ, ಸಂತೋಷ ಪಾಟೀಲ, ಬೆಂಡಿಗೇರಿ, ರಾಮಗಿರಿ ಅಲ್ಲದೇ ಶಿಗ್ಗಾಂವಿ ನ್ಯಾಯವಾದಿಗಳ ಸಂಘದ ಹಲವಾರು ಸದಸ್ಯರು ಉಪಸ್ಥಿತರಿದ್ದರು.