ಮೂಡುಬಿದಿರೆ: ಕಾನೂನು ವಿದ್ಯಾರ್ಥಿಗಳು ಸಮಾಜದಲ್ಲಿ ನ್ಯಾಯ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಆಳ್ವಾಸ್‌ನ ಕೃಷಿಸಿರಿ ವೇದಿಕೆಯಲ್ಲಿ ಆಯೋಜಿಸಿದ್ದ ಸಾಮಾಜಿಕ ನ್ಯಾಯಕ್ಕಾಗಿ ಕಾನೂನು ವಿದ್ಯಾರ್ಥಿಗಳು ವಿಷಯದ ಕುರಿತಾದ ದ್ವಿತೀಯ ವಲಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಜಯಕರ ಶೆಟ್ಟಿ ಎಂ ಮಾತನಾಡಿ, ಬದುಕನ್ನು ಸಮರ್ಪಕವಾಗಿ ಸಾಗಿಸಲು ಕಾನೂನಿನ ಜ್ಞಾನ ಅತ್ಯಗತ್ಯ. ಹೀಗಾಗಿ, ಕಾನೂನು ಓದುವುದನ್ನು ಕೇವಲ ವೃತ್ತಿಯಾಗಿ ಪರಿಗಣಿಸದೆ, ಜೀವನಜ್ಞಾನದ ಭಾಗವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸೈನಿಕರಂತೆ ಕಾರ್ಯನಿರ್ವಹಿಸಬೇಕು. ಕೇವಲ ಪಾಠ್ಯ ಜ್ಞಾನವಷ್ಟೇ ಅಲ್ಲದೆ, ಇತಿಹಾಸದ ಅರಿವು, ವಿಮರ್ಶಾತ್ಮಕ ಚಿಂತನೆ ಹಾಗೂ ವಿಷಯಗಳ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಳ್ಳಬೇಕು ಎಂದರು.ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸಿ. ಬಸವರಾಜು, ಮೂಡುಬಿದಿರೆ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಮಧುಕರ್ ಪಿ. ಭಾಗವತ್, ಪ್ರಾಚಾರ್ಯ ಡಾ. ಮಹಾಂತೇಶ್ ಜಿ. ಎಸ್., ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಸವರಾಜ್, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಇದ್ದರುಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ವೇಣುಗೋಪಾಲ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಕಾನೂನು ಕಾಲೇಜುಗಳಿಂದ 700ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.